ಕನಕ ನಡೆ…

Total
0
Shares

“ಎಲವೋ ಕುನ್ನಿ, ಕೂಳಿದೆ ತಿನ್ನು ಬಾರೆನುತ……….”

ಕೌರವೇಶ್ವರನ ಇಡಿಯ ದೇಹ ‘ವಜ್ರಕಾಯ’ವಾಗಿಬಿಟ್ಟರೆ, ಅವನಿಗೆ ಸಾವಾದರೂ ಹೇಗೆ ಬಂದೀತು? ದ್ರೌಪದಿಯ ಶಾಪವಾದರೂ ಹೇಗೆ ನೆರವೇರೀತು?.. ಹೀಗೆಂದು ಯೋಚಿಸಿ, ತನ್ನ ಮಗನನ್ನು ಹುಟ್ಟುಡುಗೆಯಲ್ಲಿ ಬಂದು ತನ್ಮುಂದೆ ನಿಲ್ಲು ಎಂದು ಗಾಂಧಾರಿ ಆಜ್ಞಾಪಿಸಿದಾಗ, ಸಂಕೋಚದಿಂದ ಬಾಳೆಲೆಯನ್ನು ನಡುವಿಗೆ ಮರೆಮಾಡಿ ಬಂದು ನಿಂತ ಪುತ್ರನನ್ನು ಅರೆಕ್ಷಣಕ್ಕೆ ಕಣ್ಣಪಟ್ಟಿ ಬಿಚ್ಚಿ ನೋಡಿದ ಮಾತೆಗೆ ಪುತ್ರಶೋಕ ಶತಃಸ್ಸಿದ್ಧವೆಂಬ ಸತ್ಯ ತಿಳಿಯುತ್ತಲೇ ಹೃದಯವೇ ಬಾಯಿಗೆ ಬಂದಂತಾಗಿದ್ದೂ, ಕುಲಪುತ್ರನ ತೊಡೆಯ ಭಾಗವನ್ನುಳಿದು ಉಳಿದ ಭಾಗವಷ್ಟೂ ವಜ್ರಕಾಯವಾಗಿದ್ದೂ ಏಕಕಾಲಕ್ಕೇ ನಡೆದುಹೋಗಿತ್ತು.

ಕುರುಕ್ಷೇತ್ರದ ಸಮಯದಲ್ಲಿ, ವೈಶಂಪಾಯನ ಸರೋವರದ ತಳದಲ್ಲಿ ಅಡಗಿ ಕುಳಿತ ಕೌರವನನ್ನು ಬಲಭೀಮ ಸಂಹರಿಸುವ ಪ್ರಸಂಗವೊಂದರ ಗದ್ಯಭಾಗವನ್ನು ಶಾಲೆಯಲ್ಲಿ ಓದಿದ್ದೆವು. ಗದ್ಯದ ಹೆಸರು ‘ಊರುಭಂಗ!’ ದ್ರೌಪದಿಯು ದುರ್ಯೋಧನನಿಗೆ “ಭೀಮ ನಿನ್ನ ತೊಡೆಯನ್ನು ಮುರಿದು ಕೊಲ್ಲುವುದರ ಮೂಲಕ ನಿನ್ನ ಪರ್ಯವಸಾನವಾಗಲಿ ” ಎಂದು ಶಾಪವಿತ್ತಿರುತ್ತಾಳಷ್ಟೇ, ಅದರ ಪರಿಣಾಮವೇ ಈ ‘ಊರುಭಂಗ ‘ದ ಪ್ರಸಂಗ. ಮೊದಲಿನ ಸಾಲೂ ಅದೇ ಗದ್ಯದ ‘ದುರ್ಯೋಧನನ ಚಿತ್ತವನ್ನು ಭ್ರಾಂತಿಗೊಳಿಸಿದ ‘ ಸಾಲು. ಭೀಮನಿಂದ ಕುನ್ನಿ ಎನಿಸಿಕೊಂಡ ದುರ್ಯೋಧನ ಸರೋವರದಿಂದ ಎದ್ದುಬಂದು ಕಾದಾಡಿ, ಕಡೆಗೆ ವಜ್ರಕಾಯವಲ್ಲದ ತೊಡೆಯ (ಊರು) ಭಂಗದಿಂದಲೇ ಸಂಹರಿಸಲ್ಪಡುತ್ತಾನೆ ಎಂಬಲ್ಲಿಗೆ ಆ ಪ್ರಸಂಗವು ಅಂತ್ಯ ಕಾಣುತ್ತದೆ.

ಮೇಲಿನ ಪ್ರಸಂಗದ ಪೀಠಿಕೆ ಕೊಟ್ಟಿದ್ದಕ್ಕೆ ಇರುವ ಏಕೈಕ ಕಾರಣವೆಂದರೆ ‘ಚಿತ್ತಭ್ರಾಂತಿ ‘ ಹಾಗೂ ‘ಧೀ ಶಕ್ತಿ ಪ್ರಚೋದನೆ ‘ಗಳ (ಸಕಾರಾತ್ಮಕ) ನಡುವಿನ ಭೂಮ್ಯಾಕಾಶಗಳ ಅಂತರವನ್ನು ತಿಳಿಯಲು. ಯಾವ ಮಾತು ಯಾ ಕೃತಿಗಳಿಂದ ಎದುರಿರುವವರು ಹೇಗೆ ಪ್ರಚೋದನೆಗೆ ಒಳಗಾಗುತ್ತಾರೆ ಎಂಬುದರ ಮೇಲೆ ನಮ್ಮ ಆಂತರ್ಯದ ಶುದ್ಧ ಅಶುದ್ಧಗಳನ್ನು ಒರೆಹಚ್ಚಲಾಗದಿದ್ದರೂ, ಪ್ರಚೋದನೆಗೊಳಗಾದವರ ನಂತರದ ‘ನಡೆ ‘ಯಿಂದ ಸೃಷ್ಟಿಯಲ್ಲಿ ಸಾಧುವೇನಾದರೂ ನಡೆದರೆ ಅದು ಅಗತ್ಯವಾಗಿ ಹೊಸಾ ಮನ್ವಂತರವೇ.

(ಕಾಳಿದಾಸನ ಉಲ್ಲೇಖವನ್ನೂ ಒಮ್ಮೆ ನೆನಪಿಸಿಕೊಳ್ಳೋಣ.. ಬೆಳದಿಂಗಳೆನ್ನುವುದು ಹಸುಗಂದನಿಗೆ ಅಪರಿಮಿತ ಆನಂದ ನೀಡುವ ಉಲ್ಲಾಸಮಯ ಪ್ರಚೋದನೆಯಾಗಿದ್ದರೆ, ಗಂಟುಕಳ್ಳನೊಬ್ಬನಿಗೆ ಅದೇ ಬೆಳದಿಂಗಳು, ಈ ಹಾಲ್ಬೆಳಕಲ್ಲಿ ಕದಿಯಲಾಗುತ್ತಿಲ್ಲವಲ್ಲಾ ಎಂಬ ಸಂಕಟಕ್ಕೆ ಉಂಟಾಗುವ ಮತಿಭ್ರಾಂತಿಯ ಕುದಿತವಂತೆ! ಇಲ್ಲಿ ದೋಷ ಹುಡುಕಬೇಕಿರುವುದು ಬೆಳದಿಂಗಳಿನಲ್ಲಿ ಅಲ್ಲವೆನ್ನುವುದು ನಿಜ ತಾನೇ? ಇನ್ನೊಂದು ಪ್ರಸಂಗದಲ್ಲಿ, ವ್ಯಸನಿಯಾದ ತಂದೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ವ್ಯಸನಿಯಾಗಲಾರೆನೆಂದು ಪಣತೊಟ್ಟು ವಿದ್ಯಾವಂತನಾಗುವುದೂ,ಮತ್ತೊಬ್ಬ ಮಗ ಅಪ್ಪನಂತೆ ಅಮಲಿನಲ್ಲಿ ಬಿದ್ದು ಬದುಕು ಸವೆಸುವುದೂ ನೋಡಿದಾಗ, ಇದರಲ್ಲಿ ಅಪ್ಪನ ತಪ್ಪಿಲ್ಲ ಎನ್ನಲಾದೀತೇ?)

ಇರಲಿ, ದ್ವಾಪರಯುಗದ ಪ್ರಸಂಗದಲ್ಲಿ ಕೌರವೇಶ್ವರನನ್ನು ಕೆಣಕಿ, ಆ ಮೂಲಕ ಅವನನ್ನು ಸಂಹರಿಸಿ ದುಷ್ಟ ಶಿಕ್ಷೆ ಹಾಗೂ ಶಿಷ್ಟ ರಕ್ಷೆಗೆ ಧಾರ್ಮಿಕವಾಗಿ ನ್ಯಾಯ ಸಂದಿರುವುದು ಹೌದಾದರೂ ಈ ಕಲಿಗಾಲದಲ್ಲಿ ಕೆಣಕುವುದಕ್ಕಿಂತಾ ‘ಧೀ ಶಕ್ತಿಯ ಪ್ರಚೋದನೆ’ಗೇ ಭೂಮಿತೂಕದ ಬೆಲೆಯಿರುವುದು.

ಕನಕ ನಡೆಯಲ್ಲಿ ನಡೆದಿದ್ದೂ ಇದೇ. ಈ ನಡೆ.. ಪ್ರತಿಯೊಬ್ಬ ಮನುಜನಲ್ಲೂ ಮೂಡಬೇಕಾದ ‘ಮನುಷ್ಯತ್ವದ ಜಾಗೃತಿ’ಯ ಮುಂದುವರಿದ ಹೆಜ್ಜೆಗಳು ಅಷ್ಟೇ. ಅಲ್ಲಿ ನಡೆದದ್ದು ಸಮರವಲ್ಲ… ನಮನ !

 

ಯುವಾ ಬ್ರಿಗೇಡಿನಿಂದ ಕನಕ ನಡೆಯನ್ನು ಆಯೋಜಿಸಿದ್ದು ಎರಡು ಕಾರಣಕ್ಕೆ.

ಮೊದಲನೆಯದು, ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸ್ವಚ್ಛತೆಯ ಕಾರ್ಯ ಮಾಡುವುದು. ಎರಡನೆಯದಾಗಿ, ಭಾರತೀಯರನ್ನು ಬಹುಸಂಖ್ಯಾತ ಅಲ್ಪಸಂಖ್ಯಾತ ಎಂದು ವರ್ಗೀಕರಿಸುತ್ತಾ, ಪಂಥಗಳನ್ನು ಹಿಂದೂ ಮುಸಲ್ಮಾನ ಎಂದು ಪ್ರತ್ಯೇಕಿಸುತ್ತಾ, ಜಾತಿಗಳನ್ನು ದಲಿತ ಬ್ರಾಹ್ಮಣ ಎಂದು ಎತ್ತಿಕಟ್ಟುತ್ತಾ ವ್ಯವಸ್ಥಿತವಾಗಿ ಭಾರತದ ಏಕತೆಯನ್ನು ಕದಡಲೆಂದೇ ಅವಿರತ ಶ್ರಮಿಸುವ ಕಾಣದ ಕೈಗಳ ಕುಕೃತ್ಯವನ್ನು ಒಗ್ಗಟ್ಟಿನ ಆರೋಗ್ಯಪೂರ್ಣ ‘ಕನಕ ನಡೆ’ಯ ಮೂಲಕ ದಿಟ್ಟವಾಗಿ ಜಾಹೀರು ಮಾಡುವುದು!

ಅಕ್ಟೋಬರ್ 23ರಂದು ಉಡುಪಿಯಲ್ಲಿ ಕನಕ ನಡೆಯನ್ನು ಆಯೋಜಿಸುವಾಗ, ಉಡುಪಿಯ ಹೃದಯ ಭಾಗವನ್ನು ಸ್ವಚ್ಛಗೊಳಿಸಬೇಕೆಂಬ ಸಂಕಲ್ಪವಿದ್ದರೂ, ಅಂದಿನ ಬೆಳಗ್ಗೆ ಕಾರಣಾಂತರಗಳಿಂದ ಉಡುಪಿಯ ಮಠದ ಆವರಣವನ್ನು ಸ್ವಚ್ಛ ಮಾಡುವುದಕ್ಕಷ್ಟೇ ಸ್ವಚ್ಛತೆಯನ್ನು ಸೀಮಿತಗೊಳಿಸಬೇಕಾಗಿ ಬಂದುದು ಕೂಡಾ ನಮ್ಮಗಳ ಪಾಲಿಗೆ ಪಂಚಾಮೃತವೇ.

IMG_6483-1024x683

ಇಡಿಯ ಕರ್ನಾಟಕದ ಹಲವು ಜಿಲ್ಲೆಗಳಿಂದ ತಂಡತಂಡವಾಗಿ ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು (ಧೀ ಶಕ್ತಿ ಪ್ರಚೋದಕರು) ಉಡುಪಿಗೆ ಬಂದಿಳಿದಾಗ ಎಲ್ಲರ ಮನಸ್ಸಿನಲ್ಲಿದ್ದುದು ಧಾರ್ಮಿಕ ಕ್ಷೇತ್ರವನ್ನು ಸ್ವಚ್ಛ ಮಾಡುತ್ತಿದ್ದೇವೆ ಎಂಬ ಭಾವನೆಯ ಜೊತೆಗೆ, ಜಾತಿ ಮತಗಳ ಹಂಗಿಲ್ಲದೇ ‘ಶ್ರಮದಾನ’ ಮಾಡುತ್ತಿದ್ದೇವೆ ಎಂಬುದು. ಬೆಳಗ್ಗೆ ಎಂಟಕ್ಕೆಲ್ಲಾ ಉಡುಪಿಯ ಮಠದ ಮುಂದಿನ ‘ಕನಕ ಮೂರ್ತಿ’ಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾದ ಶ್ರಮದಾನವು ಅಪರಾಹ್ನ ಮೂರಾಗುವ ವೇಳೆಗೆ ಸಂಪನ್ನವಾಗಿತ್ತು.

IMG_6558-1024x683

IMG_6563-1024x683

IMG_6579-1024x683

IMG_6591-1024x683

ಮಠದೊಳಗಿನ ಅಂಕಣ, ಮಠದ ಹೊರಗಿನ ರಾಜಾಂಗಣ, ಪಾರ್ಕಿಂಗ್ ಸ್ಥಳ, ಗೋಶಾಲೆ, ಶೌಚಾಲಯ, ವಸತಿ ಗೃಹದ ಹಿಂಭಾಗ, ಆವರಣದೊಳಗಿನ ಕಲ್ಯಾಣಿಯ ಮೂರ್ತಿ ಸ್ಥಂಭ, ಹೆಬ್ಬಾಗಿಲು ಇವಿಷ್ಟನ್ನೂ ಜಿಲ್ಲಾವಾರು ತಂಡಗಳು ಒಂದೊಂದರಂತೆ ಶುದ್ಧ ಮಾಡಲು ಸಜ್ಜಾದಾಗ ಯುವಾ ಬ್ರಿಗೇಡಿನ ಟ್ಯಾಗ್ ಲೈನ್ ಇರದ ಹಲವು ಹಿರಿಯರು, ಮಕ್ಕಳು ಈ ಶ್ರಮದಾನಕ್ಕೆ ಕೈ ಜೋಡಿಸಿದಾಗ ಆದ ಹಿಗ್ಗು ಅಷ್ಟಿಷ್ಟಲ್ಲ.

IMG_6730-300x200 IMG_6788-300x200 IMG_6801-300x200

IMG_6834-300x200 IMG_6821-300x200 IMG_6864-300x200

IMG_6977-300x200 IMG_69121-300x200 IMG_6892-300x200

 

ನಿಜವಾಗಿಯೂ ಶ್ರಮದಾನವೆಂದರೆ ಏನು? ಅಷ್ಟಕ್ಕೂ ಉಡುಪಿಯ ಮಠದಲ್ಲಿ ಮೇಲೆ ತಿಳಿಸಿದ ಅಷ್ಟೂ ಸ್ಥಳಗಳಲ್ಲಿ ಇಲ್ಲಿಯವರೆಗೂ ಯಾರೂ ಶುಚಿ ಮಾಡಿಯೇ ಇರಲಿಲ್ಲವೇನು? ಅಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿಲ್ಲವೇನು? ಯುವಾ ತಂಡ ಒಂದು ದಿನ ಹೋಗಿ ಶ್ರಮದಾನ ಮಾಡಿ ಬಂದರೆ ಕೆಲದಿನಕ್ಕೇ ಆ ಸ್ಥಳಗಳು ಯಥಾಸ್ಥಿತಿಗೆ ಮರಳುವುದಿಲ್ಲವೇನು?

ಇಂಥಾ ಪ್ರಶ್ನೆಗಳು ಸಹಜ. ಒಮ್ಮೊಮ್ಮೆ ಅಸಹನೀಯ. ಆದರೆ ಉತ್ತರವು ಸರಳ! ನಮ್ಮ ನಡೆಯಿದ್ದದ್ದು ಜಾಗೃತಿಗೆ ಸಂಬಂಧಿಸಿದಂತೆ. ನನ್ನಿಂದ ಇಷ್ಟೆಲ್ಲಾ ಆಯಿತು ಎನ್ನುವ ಹುಂಬತನಕ್ಕೆ ವಿರುದ್ಧವಾದ, ರಾಷ್ಟ್ರಕಾರ್ಯಕ್ಕೆ ನಾನೂ ಅಳಿಲಿನಂತೆ ಕೈಜೋಡಿಸುತ್ತೇನೆ ಎನ್ನುವ ಸಾತ್ವಿಕ ಜಾಗೃತಿಯೆಂಬ ಪ್ರಜ್ಞೆ ಹಾಗೂ ಪ್ರತಿಜ್ಞೆಯ ಅನಾವರಣಕ್ಕೆ. ಹಾಗೊಮ್ಮೆ ಅಳಿಲಾಗಬೇಕಾದರೆ ಅಲ್ಲೊಂದು ಶ್ರೀರಾಮನ ಸಂಕಲ್ಪವೂ ಇರಬೇಕಲ್ಲವೇ? ಸಂಕಲ್ಪ ಸಿದ್ಧವಿತ್ತು. ಜಾಗೃತಿಯೆಂಬ ಜ್ಯೋತಿಗೆ ತೈಲವಾಗುವ ನಿಷ್ಠೆಯೂ ಇತ್ತು.

ಹೌದು. ಕರ್ಪೂರವಾದರೆ ಕರಗುವಂತೆ, ಗಂಧವಾದರೆ ತೇಯುವಂತೆ, ಜ್ಯೋತಿಯಾದರೆ ಬೆಳಗುವಂತೆ ಹೇಗೇ ಯೋಚಿಸಿದರೂ ಅಲ್ಲೊಂದು ಸಮರ್ಪಣೆ ಇತ್ತು. ಹೇಳೀಕೇಳೀ ಇದು, ಆಘ್ರಾಣಿಸಿದ ಸಿಹಿತಿಂಡಿಯ ಘಮಕ್ಕೇ ಹಣ ವಸೂಲು ಮಾಡುವ ಕಾಲ! ಯಾವ ಕೆಲಸ ಮಾಡಿದರೂ ಏನು ಪ್ರಯೋಜನ? ಎಂಬ ಪ್ರಶ್ನೆಯೇ ಮಾತಿಗಿಂತಲೂ ಮೊದಲು ಮನಸ್ಸಿನಲ್ಲಿ ನುಸುಳುವುದೂ ಸತ್ಯ. ಹೀಗಿರುವಾಗ, ಬೇರೆ ಬೇರೆ ಪ್ರಾಂತ್ಯದ, ಬೇರೆ ಬೇರೆ ವಯೋಮಾನದ, ಬೇರೆಯದೇ ಹವ್ಯಾಸದ ಸಾವಿರಾರು ಮಂದಿ ನಿಷ್ಠೆಯಿಂದ ಶ್ರಮದಾನಕ್ಕೆ ಮುಂದಾದಾಗ, ಹೀಗೊಂದು ನಿಷ್ಠೆಗೆ ಬೆನ್ನು ತಟ್ಟದೇ, ಬಗ್ಗಿದ ಕ್ಷಣವೇ ಛಡಿಯೇಟು ನೀಡಲು ಇನ್ನಿಲ್ಲದಂತೆ ಕಾದಿದ್ದ ಮಂದಿಯ ಅಸಹನೆ ಮತ್ತೂ ಹೆಚ್ಚಾಗಿದ್ದು, ಭಾರತದ ಬೇರಿನಲ್ಲಿಯೇ ಸೇರಿಹೋದ ಹಲವು ಜಾತಿಗಳ ಪರಮಪೂಜ್ಯ ಗುರುಗಳು ಇಡೀ ಸಮಾರಂಭಕ್ಕೆ ಬೆನ್ನೆಲುಬಾಗಿ ನಿಂತಿದ್ದರು ಎಂಬ ಕಾರಣಕ್ಕೆ! ಒಡೆಯಬೇಕೆಂಬ ಅದಮ್ಯ ಇಚ್ಛೆಯಿದ್ದರೂ ಒಡೆಯಲಾಗುತ್ತಿಲ್ಲವಲ್ಲಾ ಎಂಬ ಸೋಲು, ತಡೆಯಬೇಕೆಂದು ತಕರಾರು ತೆಗೆದರೂ ಕೆಲಸ ನಡೆದೇ ತೀರುತ್ತದಲ್ಲಾ ಎಂಬ ಕ್ರೋಧ ಅಧಿಕಾರವಿರುವವರನ್ನು ಇನ್ನಿಲ್ಲದಂತೆ ದಹಿಸುತ್ತಿತ್ತು.

ದಲಿತರನ್ನು ಬ್ರಾಹ್ಮಣರು ಹಾಗೂ ಮೇಲ್ವರ್ಗದವರು ಶೋಷಿಸುತ್ತಾರೆ, ಅವರಿಗೆ ಮಠದೊಳಗೆ ಬೇರೆಯದೇ ಪಂಕ್ತಿಯಲ್ಲಿ ಊಟ ಬಡಿಸಲಾಗುತ್ತದೆ, ಅವರನ್ನು ಬೇರೆಯವರು ಮುಟ್ಟಿಸಿಕೊಳ್ಳುವುದಿಲ್ಲ… ಇತ್ಯಾದಿ ಹತ್ತು ಹಲವು ಅಪಸವ್ಯಗಳನ್ನು ಮೇಲಿಂದ ಮೇಲೆ ಹೇಳುತ್ತಾ ಪುಕಾರು ಹಬ್ಬಿಸಿ, ಮನಸ್ಸಿನಲ್ಲಿ ಇಲ್ಲದ ಕಿಚ್ಚು ಹೊತ್ತಿಸಿ, ಸಂಘಟಿಸಬೇಕಾದ ಮನುಷ್ಯರನ್ನು ಹೋಳುಹೋಳುಗಳಾಗಿ ಒಡೆಯುವಲ್ಲಿ ಯಾರಿಗೆ ಲಾಭವಿದೆಯೋ ತಿಳಿದಿಲ್ಲ. ಹಾಗೆಂದು ಜಾತಿಪದ್ಧತಿ ಇಲ್ಲವೇ ಇಲ್ಲ ಎನ್ನುವಂತಿಲ್ಲ. ಹಿಂದೆ ಇದ್ದದ್ದು ನಿಜ. ಆದರೆ ಇಂದೂ ಅದರ ಛಾಯೆಯು ದಟ್ಟವಾಗಿ ಉಳಿದಿರುವುದನ್ನು ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಅದನ್ನು ಬುಡಸಮೇತ ಕೀಳುವ ಪ್ರಯತ್ನಕ್ಕೆ ನಾವು ಕೈಜೋಡಿಸಬೇಕು ಎನ್ನುವುದು ಪರಮಪೂಜ್ಯ ಪೇಜಾವರಶ್ರೀಗಳ ಸಂಕಲ್ಪ.

IMG_7022-1024x683

ಶ್ರಮದಾನ ಮಾಡಿದವರಲ್ಲಿ ಸಕಲ ಜಾತಿ ಜನಾಂಗದವರೂ ಇದ್ದದ್ದು ಸತ್ಯ. ಹಾಗೆಯೇ, ಶ್ರಮದಾನದ ನಂತರ, ಒಂದೇ ಸೂರಿನ ಅಡಿಯಲ್ಲಿ ಸರ್ವರಿಗೂ ಸಹಪಂಕ್ತಿಯಲ್ಲಿ ಭೋಜನಕ್ಕೆ ಅವಕಾಶವಿತ್ತಿದ್ದೂ ಸತ್ಯ. ತದನಂತರ ಯತಿಗಳಿಂದ ಪ್ರತಿಯೊಬ್ಬರಿಗೂ ಪ್ರಸಾದದ ಜೊತೆಗೆ, ಮಂತ್ರಾಕ್ಷತೆಯ ಆಶೀರ್ವಚನವು ಪ್ರಾಪ್ತವಾಗಿದ್ದೂ ಅಷ್ಟೇ ಸತ್ಯ! ಸತ್ಯವನ್ನು ಸುಳ್ಳೆಂದು ಜರಿದರೂ, ಬರೆದರೂ ಸತ್ಯ ಮಂಕಾಗುವುದಿಲ್ಲ ಅಲ್ಲವೇ?

14895500_1134101299958339_895119360_o

14877860_1570957346263484_1914153026_n

14877026_1570957482930137_19067579_n

ಸರಿ. ಇಷ್ಟೆಲ್ಲಾ ಆದನಂತರ ಕನಕ ನಡೆಯ ಸಭಾ ಕಾರ್ಯಕ್ರಮವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಯತಿವರ್ಯರಾದ ವಿಶ್ವಪ್ರಸನ್ನ ತೀರ್ಥರು, ಅಭಿನವ ಹಾಲಶ್ರೀ ಸ್ವಾಮೀಜಿಯವರು, ಯುವಾ ಬ್ರಿಗೇಡಿನ ರಾಜ್ಯಸಂಚಾಲಕರಾದ ನಿತ್ಯಾನಂದ ವಿವೇಕವಂಶಿಯವರು ಹಾಗೂ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ನಡೆಯಿತು. ಇಡಿಯ ಕಾರ್ಯಕ್ರಮದಲ್ಲಿ ಅದಾರೋ ಮಾತನಾಡುವ, ಮತ್ಯಾರೋ ಕಿವಿಯಾಗುವ ಭಾವವಿರಲಿಲ್ಲ.. ಅಲ್ಲಿ ಎಲ್ಲವೂ ನಾವೇ ಎಂಬಂಥಾ ಏಕಭಾವ! ಎಲ್ಲರೂ ಸೇರಿ ರಾಷ್ಟ್ರ ರಥದ ತೇರಿಗೆ ಹೆಗಲು ಕೊಟ್ಟ ಸಂತೃಪ್ತಿಯ ಭಾವ!

14885936_804384626368221_1558404342_n

ಕಾರ್ಯಕ್ರಮಕ್ಕೆ ಯುವ ಮನಸ್ಸುಗಳನ್ನು ಸಜ್ಜು ಮಾಡುವ ಸವಾಲಿನ ಕೆಲಸದಲ್ಲಿಯೇ ಪಾಸಾಗಿಬಿಟ್ಟರೂ, ಜಾತಿಯೆಂಬ ಭೂತದ ಎದುರು ಯುವಕರು ಮಂಕಾಗಬಹುದಿತ್ತು, ಮೇಲು ಕೀಳು, ಬಡವ ಬಲ್ಲಿದ ಎಂಬ ಅದೆಷ್ಟೋ ಅಸಮಾನತೆಯ ಪದಗಳನ್ನು ಜೋಡಿಪದದಂತೆ ಬಳಸಿ ಸವೆಸಿದ್ದರೂ ಜಾತೀಯತೆ ಸವೆದಿಲ್ಲ, ನಶಿಸಿಲ್ಲ. ಈ ಸತ್ಯದ ಅಂಗಳದಲ್ಲಿಯೇ ಎಲ್ಲರೂ ಬದುಕಬೇಕು, ಸ್ವಲ್ಪ ಹಳಿ ತಪ್ಪಿದರೂ ಅಸಹನೆಯ ಹೊಗೆ ದಟ್ಟವಾಗಿಬಿಡುತ್ತಿತ್ತು. ಆದರೆ, ಚಕ್ರವರ್ತಿ ಅಣ್ಣನವರ ನೇತೃತ್ವದಲ್ಲಿ ಅಂಥಾ ಹುಸಿಭಾವನೆಗಳಿಗೆ ಅವಕಾಶವೇ ಇರಲಿಲ್ಲ. ನಾಡು ನುಡಿ, ನೆಲ ಜಲವನ್ನು ಸಂರಕ್ಷಿಸಲು ಕಂಕಣ ತೊಟ್ಟ ಮೇಲೆ ರಾಷ್ಟ್ರ ರಕ್ಷಣೆಯೆಂಬ ಸಹಸ್ರಬಾಹು ಆವಾಹನೆಯಾಗದಿದ್ದರೆ ಹೇಗೆ?

ದಲಿತರನ್ನು ಸಮಾನವಾಗಿ ಕಾಣುವ, ಅವರ ಕಲ್ಯಾಣಕ್ಕಾಗಿ ದುಡಿಯುವ, ಅವರನ್ನು ಸುಶಿಕ್ಷಿತರನ್ನಾಗಿ ಮಾಡುವ, ಅವರ ಸ್ವಾವಲಂಬನೆಯ ಬದುಕಿಗೊಂದಷ್ಟು ಅಡಿಪಾಯ ಹಾಕುವ ಉತ್ತಮೋತ್ತಮ ಕೆಲಸಗಳನ್ನು ಇಷ್ಟೂ ವರ್ಷಗಳಲ್ಲಿ ಪೂರೈಸಿಕೊಂಡೇ ಬಂದಿರುವ ಉಡುಪಿಯ ಮಠಕ್ಕೆ ಬಹಿರಂಗವಾಗಿ ಮುತ್ತಿಗೆ ಹಾಕುತ್ತೇವೆ ಎಂಬ ದಬ್ಬಾಳಿಕೆಯ ದರ್ಪದ ಮಾತುಗಳಿಂದ ಕಿಂಚಿತ್ ಕದಲುವಿಕೆಗಳಾಗಿರಬಹುದು, ಆದರೆ ಆ ಕಾರಣಕ್ಕೆ ಮುಂದೆ ನಡೆಯುವ ಯಾವ ಸಮಾಜಮುಖಿ ಕೆಲಸಗಳಲ್ಲೂ ರಾಜಿಯಿಲ್ಲ. ರಾಜಿಯಿರಬೇಕಾದುದು ನಮ್ಮ ನಮ್ಮ ಅಹಮಿಕೆಗಳಲ್ಲಿ, ಆಗಾಗ ಹೆಡೆಯೆತ್ತಿ ತನ್ನ ಇರುವನ್ನು ಪ್ರದರ್ಶಿಸುವ ಮೇಲು ಕೀಳಿನ ಭಾವನೆಗಳಲ್ಲಿ!

ಇಡಿಯ ಕಾರ್ಯಕ್ರಮವು ಕಣ್ಣಿಗೆ ಕಟ್ಟಿದ ಹಬ್ಬದ ಸಡಗರವೇ. ಒಮ್ಮೆ ಅಪಪ್ರಚಾರದ ಬೇಸರವಿದ್ದರೆ, ಮತ್ತೊಮ್ಮೆ ಶ್ರಮದಾನದ ಸಡಗರ, ಎಲ್ಲರೂ ಕುಳಿತು ಸಹಪಂಕ್ತಿಯಲ್ಲಿ ಭೋಜನ ಸ್ವೀಕರಿಸುವಾಗ ‘ಅರೆ, ನಮ್ಮ ಪರಿವಾರ ಇಷ್ಟು ದೊಡ್ಡದೇ?’ ಎಂಬ ಸೋಜಿಗ, ಆಶೀರ್ವಚನದ ಸಮಯದಲ್ಲಿ ಭಗವಂತನ ಸಾಕ್ಷಾತ್ಕಾರವೇ ಆದಂಥ ಹೃದಯ ತುಂಬಿದ ಅನುಭವ!

ನಿಜ. ಏನು ದಕ್ಕಿತು ಎಂದು ಕೇಳಿದರೆ, ಒಂದು ಮಾತಿನಲ್ಲಿ ಹೇಳುವಂಥದ್ದು ಬುದ್ಧಿಗೆ ತೋಚದಿರಬಹುದು, ಹಾಗೆಂದು ಕನಕ ನಡೆಯ ಸಾರ್ಥಕತೆಯನ್ನು ಕಣ್ಣಾಲಿಗಳಾದರೂ ಹೇಗೆ ಅಡಗಿಸೀತು?

14872465_804384669701550_897633517_n

14885951_804384639701553_848890288_n

ನಿಶ್ಚಲವಾಗಿರುವುದರಲ್ಲೂ ಅಚಲವಾಗಿರುವುದರಲ್ಲೂ ಮೇಲ್ನೋಟಕ್ಕೆ ವ್ಯತ್ಯಾಸ ಕಾಣಿಸದಿರಬಹುದು. ಆದರೆ ಅಚಲವಾಗಿರುವುದರಲ್ಲಿ ನಿರಂತರ ‘ಪ್ರತಿರೋಧ’ವಿದೆ. ನಿಶ್ಚಲದಲ್ಲಿ ಅದಿಲ್ಲ ಅಷ್ಟೇ. ನಾವುಗಳು ಪ್ರತಿರೋಧವನ್ನು ಒಡ್ಡುತ್ತಲೇ ನಿಶ್ಚಲವಾಗಿರುವ ಪ್ರಯತ್ನವನ್ನು ಜಾರಿಯಲ್ಲಿಟ್ಟುಕೊಂಡಿದ್ದೇವೆ. ಅಂಥಾ ನಿಶ್ಚಲತೆಯನ್ನು ಹೊಂದಲು ಇನ್ನೊಂದಷ್ಟು ‘ನಡೆ’ಗಳನ್ನು ಉಪಕ್ರಮಿಸಬೇಕು. ಆ ಸಂಕಲ್ಪ ಸಿದ್ಧಿಗಾಗಿ ಎಲ್ಲರೂ ಒಟ್ಟಾಗಬೇಕು, ಒಗ್ಗಟ್ಟಾಗಲೇಬೇಕು!ಇದರ ಹೊರತಾಗಿ ನನ್ನ ಅರಿವಿಗೆ ಮತ್ತೇನೂ ಬರಲಿಲ್ಲ.

[ಕನಕ ನಡೆಯ ವಿಹಂಗಮ ನೋಟ]

 

 

Leave a Reply

Your email address will not be published. Required fields are marked *

You May Also Like

ಸ್ವಚ್ಛತೆಯೇ ಆರೋಗ್ಯ

ಸ್ವಚ್ಛತೆ ಆರೋಗ್ಯದೆಡೆಗಿನ ಮೊದಲ ಹೆಜ್ಜೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ರೋಗ-ರುಜಿನಗಳು ಹರಡುವುದನ್ನು ತಡೆಗಟ್ಟಬಹುದು. ಆದರೆ, ಆರೋಗ್ಯ ಹದಗೆಟ್ಟಲ್ಲಿ ನೋಡಿಕೊಳ್ಳಬೇಕಾದ ಸರ್ಕಾರಿ ಆಸ್ಪತ್ರೆಗಳೇ ಸ್ವಚ್ಛವಾಗಿರುವುದಿಲ್ಲ! ಸರ್ಕಾರಿ ಆಸ್ಪತ್ರೆಗಳ ಈ ದೈನೀಸಿ ಸ್ಥಿತಿಯನ್ನು ಕಂಡು ಯುವಾಬ್ರಿಗೇಡ್ ‘ಸ್ವಚ್ಛತೆಯೇ ಆರೋಗ್ಯ’ ಎಂಬ ಹೆಸರಿನಡಿಯಲ್ಲಿ ಹಲವು…
View Post