“ನಿವೇದನಾ”

Total
0
Shares

ದೇಶಭಕ್ತಿ ಅಂದ್ರೆ ಏನು? ಸುಮ್ನೆ ಹೀಗೆ ಘೋಷಣೆ ಕೂಗೋದಾ? ಒಂದು ಹತ್ತು ಜನರನ್ನ ಗುಂಪು ಹಾಕಿಕೊಂಡು, ಮೈಕಿನ ಮುಂದೆ ನಿಂತು ಭಾಷಣ ಕುಟ್ಟೋದ ? ದೇಶ – ಅದಕ್ಕೊಂದು ಇತಿಹಾಸ ಅಂತೆಲ್ಲ ಇಲ್ಲದೆ ಇರೋ ಕತೆ ಕವನ ಹೇಳೋದಾ? ಮಾತಿಗೆ ಮುಂಚೆ ಹಿಂದೂ ಧರ್ಮ ಈ ದೇಶದ ಅಂತರಾತ್ಮ ಅನ್ನೋ ಧರ್ಮಾಂಧತೆ ತುಂಬುವುದೇ ದೇಶ ಭಕ್ತಿನಾ?…………… ಮಾತಿಗೆ ಸಿಕ್ಕ ಪರಿಚಿತರೊಬ್ಬರು ಹೀಗೆ ಚರ್ಚೆಗಿಳಿದಿದ್ದರು. ನಮ್ಮಲ್ಲಿ ಯಾರಿಗೂ ಇಂತಹ ಚರ್ಚೆ ಹೊಸದಲ್ಲ ಬಿಡಿ. ನಾನಂತೂ ಮಧ್ಯಾನ್ಹ ಭರ್ಜರಿ ಊಟ ಮಾಡಿ ಇನ್ನೂ ಅದೇ ಗುಂಗಿನಲ್ಲಿದ್ದೆ. ಇವರಿಗೆ ಉತ್ತರಾನೂ ಅದೇ ಧಾಟಿಯಲ್ಲೇ ಕೊಟ್ಟೆ.

 

ದೇಶ ಭಕ್ತಿ ಅನ್ನೋದು ಒಳ್ಳೆ ಅಡುಗೆ ಇದ್ದಹಾಗೆ !!. ತಕ್ಕಷ್ಟು ಪ್ರಮಾಣದಲ್ಲಿ ಉಪ್ಪು, ಹುಳಿ, ಖಾರ, ರುಚಿಗೆ ಇನ್ನಷ್ಟು ಮಸಾಲೆ, ಆರೋಗ್ಯಕ್ಕಾಗಿ ತರಕಾರಿ, ಬೇಳೆ, ಕಾಳು, ಬೆಲ್ಲ ಎಲ್ಲವನ್ನೂ ಹದವಾಗಿ ಬೆರೆಸಿ, ಕೊನೇಲಿ ತುಪ್ಪದ ಒಗ್ಗರಣೆ ಮಾಡಿ ಇಂಗನ್ನು ಹಾಕೋದೇ ತಡ, ಆಹಾ ಒಂದು ಘಮ ಬರುತ್ತೆ ನೋಡಿ…. ಅದೇ ದೇಶಭಕ್ತಿ !! ಅಂದೆ. ಎಷ್ಟೋ ದಿನದಿಂದ ನಕ್ಕೇ ಇರ್ಲಿಲ್ವೇನೋ ಆ ಮನುಷ್ಯ ಕಣ್ಣಿನಲ್ಲಿ ನೀರು ತುಂಬಿಕೊಳ್ಳೋ ಹಾಗೆ ನಕ್ಕುಬಿಟ್ರು. ಏನೋ ಕೇಳಿದ್ರೆ ಇನ್ನೇನೋ, ಅಡಿಗೆ ಒಗ್ಗರಣೇನೇ ದೇಶಭಕ್ತಿ ಅಂತೀರಲ್ರೀ ಅಂದ್ರು. ನಾನಂದೆ, ” ಹೌದು ಕಣ್ರೀ, ಒಂದೊಳ್ಳೆ ಅಡುಗೆ ಸಿದ್ಧವಾಗಿದ್ರೆ ಹೇಗೆ ಅದರ ಸುವಾಸನೆಯ ಘಮ ಎಲ್ಲ ಕಡೆ ಹರಡುತ್ತೋ ದೇಶಭಕ್ತಿನೂ ಹಾಗೆ. ಮನಸ್ಸಿನಲ್ಲಿ ನಿಜವಾಗ್ಲೂ ದೇಶಭಕ್ತಿ ಇದ್ದರೆ, ಅದು ಕೃತಿಯ ಮೂಲಕವೋ ಅಥವಾ ಇನ್ನ್ಯಾವುದರ ಮೂಲಕವೋ ಜಗತ್ತಿಗೆ ತನ್ನ ಇರುವನ್ನು ಪ್ರಸ್ತುತಪಡಿಸಿಯೇ ಸಿದ್ಧ. ಕೇವಲ ಸುವಾಸನೇನೇ ಅಡಿಗೆ ಅಲ್ಲ. ಆದರೆ ಒಳ್ಳೆ ಅಡಿಗೆ ಆಗಿದ್ರೆ ಅಲ್ಲಿಂದ ಸುವಾಸನೆ ಬಂದೇ ಬರುತ್ತೆ. ಘೋಷಣೆ ಕೂಗೋದೊಂದೇ ದೇಶಭಕ್ತಿ ಅಲ್ಲ ನಿಜ. ಆದರೆ, ಎಲ್ಲರಿಗೂ ಒಳಿತು ಮಾಡೋ ಉದ್ದೇಶದಿಂದ ದೇಶ ಸೇವೆ ಮಾಡ್ತ ಇರೋವಾಗ ಅದರ ಜೊತೆ ಉತ್ತೇಜನಕ್ಕೋಸ್ಕರವೋ ಅಥವಾ ಭಾವಭಿವ್ಯಕ್ತಿಗೊ ಕೂಗೋ ಘೋಷಣೆಗಳ ಬಗ್ಗೆ ಯಾಕಿಷ್ಟು ತಲೆ ಕೆಡಿಸ್ಕೊತೀರಿ. ಮಾಡ್ತಾ ಇರೋ ಕೆಲಸಗಳ ವಿಮರ್ಶೆ ಮಾಡಿ. ಸರಿ ಅನ್ನಿಸಿದರೆ ಕೈ ಜೋಡಿಸಿ ಅಂದೆ.

 

ಎರೆಡು ನಿಮಿಷ ಅಲ್ಲೂ ಮಾತಿಲ್ಲ. ಇಲ್ಲೂ ಮಾತಿಲ್ಲ. ಆ ಮೌನ ಯಾವುದೋ ಒಂದು ಸರಿಯಾದ ಭಾವತಂತಿಯನ್ನ ಮೀಟಿದಂತೆ ಭಾಸವಾಯಿತು. ಅವರೇ ಮೌನ ಮುರಿದು, ಏನು ನಿಮ್ಮ ಯುವಬ್ರಿಗೇಡ್ನ ಇತ್ತೀಚಿನ ಕಾರ್ಯಕ್ರಮಗಳು ಅಂದ್ರು. !!! ಹರಿಯುತಿರುವ ತುಂಗಾ ನದಿಯಲ್ಲಿ “ಎಲ್ಲಿ ಚೆನ್ನಾಗಿರೋ ನಾಲ್ಕು ಮೀನನ್ನ ತೋರಿಸು” ಅಂದಹಾಗಿತ್ತು ಅವರ ಪ್ರಶ್ನೆ. !!!..

 

ನಾನೂ ಮೌನ ಮುರಿದೆ.

 

*********************

 

ನಿವೇದನಾ

ಯುಧ್ಧ ವಿಮಾನಗಳ ಹಾರಾಟವನ್ನ ನಾನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಅಬ್ಬಾ! ಆ ಸದ್ದು. ” ಕಿವಿಗಡಚಿಕ್ಕುವ ಸದ್ದು ” ಅನ್ನುವ ಪದವನ್ನ ಓದಿ ತಿಳಿದಿದ್ದೆ. ಆದರೆ ಅನುಭವಿಸಿ ಅರಿತಿದ್ದು ಆ ದಿನ ಸಂಜೆ. ಜಕ್ಕೂರು ಮಿಲಿಟರಿ ವಿಮಾನಶ್ರಯದ ಪಕ್ಕದಲ್ಲೇ ಇರುವ ಮೇಜರ್ ಸಂದೀಪ್ ರ ಮನೆಯಲ್ಲಿ. ಮೇಜರ್ ಸಂದೀಪ್ರ ತಂದೆ ತಾಯಿ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ೧೫ರಂದು ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ಹಿಂದಿನ ಕೆಲವು ವರ್ಷಗಳಿಂದ ಯುವಬ್ರಿಗೇಡ್ ಈ ಆಚರಣೆಯಲ್ಲಿ ಭಾಗಿಯಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಈ ಬಾರಿಯ ಹಬ್ಬಕ್ಕೆ ಒಂದು ವಿಶಿಷ್ಟ ಮೆರುಗನ್ನು ತರಬಯಸಿ, ನಿಸ್ವಾರ್ಥದಿಂದ ಇಡೀ ಜಗತ್ತನ್ನು ತಬ್ಬಿ ಹಿಡಿದಿರುವ ಅನೇಕ ನಿವೇದಿತರಲ್ಲಿ, ರಾಷ್ಟ್ರಕ್ಕಾಗಿ ಜೀವನ ಕುಸುಮಗಳನ್ನು ಅರ್ಪಿಸಿರುವ ಕೆಲ ಶ್ರೇಷ್ಟರನ್ನು, ಒಂದೇ ವೇದಿಕೆಯಲ್ಲಿ ಗೌರವಿಸಬೇಕು. ಆ ಮೂಲಕ ಅವರ ಸಾಧನೆಯನ್ನು ಅವರ ಮಾತುಗಳಲ್ಲೇ ಕೇಳಬೇಕು, ಅದರಿಂದ ಸಾವಿರಾರು ಯುವಜನರು ಪ್ರೇರಣೆ ಪಡೆಯಬೇಕು ಎಂಬ ಸಂಕಲ್ಪ ಸಾಕಾರಗೊಳ್ಳುತ್ತಿತ್ತು.

ಶ್ರೀಮತಿ ಉಪಾಸನಾ ಮೋಹನ್ ಮತ್ತವರ ಶಿಷ್ಯವೃಂದ ಸುಶ್ರಾವ್ಯವಾಗಿ ದೇಶಭಕ್ತಿಗಳನ್ನು ಹಾಡುತ್ತಿದ್ದರು. ಛಂದೋ ಬಧ್ಧವಾಗಿ, ಸುಮಧುರ ಕಂಠಗಳು ಒಂದುಗೂಡಿ ಸೃಜಿಸುತ್ತಿದ್ದ ಗೀತಾಮೃತವು ನೆರೆದಿದ್ದವರೆಲ್ಲರ ಮನದ ತೆರೆಗಳನ್ನಪ್ಪಳಿಸಿ ಹೊಸಲಯವನ್ನು ಹುಟ್ಟುಹಾಕುತ್ತಿತ್ತು. ಚಕ್ರವರ್ತಿ ಅಣ್ಣ ಕಾರ್ಯಕ್ರಮದ ನಿರೂಪಣೆಗೆ ನಿಂತರು.

ಸಣ್ಣ ಪುಟ್ಟ ತ್ಯಾಗಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ “ಕೆಲವರ ಆತ್ಮಶಕ್ತಿಗೆ” ಮಾತ್ರ ಅತ್ಯುನ್ನತ ತ್ಯಾಗವನ್ನು ಮಾಡುವ, ತನ್ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಯಶೋಗಾಥೆಯನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಬಿಡುವ ಅಪುರೂಪದ ಅವಕಾಶ ಸಿಕ್ಕಿಬಿಡುತ್ತದೆ.

ಅಂದು ಮುಂಬೈನ ಪ್ರತಿಷ್ಟಿತ ತಾಜ್ ಹೋಟೆಲ್ ಉಗ್ರರ ದಾಳಿಯಲ್ಲಿ ನಲುಗಿತ್ತು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಿಗೆ ನೂರಾರು ಅಮಾಯಕ ಒತ್ತೆಯಾಳುಗಳನ್ನು ಭಯೋತ್ಪಾದಕರ ಕಪಿಮುಷ್ಟಿಯಿಂದ ರಕ್ಷಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಯಾವುದೇ ಕೆಲಸವನ್ನು ಶ್ರಧ್ಧೆಯಿಂದ ಸ್ವೀಕರಿಸುವ ಗುಣ ಹೊಂದಿದ್ದ ಮೇಜರ್ ಸಂದೀಪ್, ಈ ಕರ್ತವ್ಯ ನಿರ್ವಹಣೆಯ ರೂಪುರೇಷೆ ನಿರ್ಧರಿಸಿ, ಹೋರಾಟಕ್ಕೆ ತಕ್ಷಣವೇ ಅಣಿಯಾದರು. ವೈರಿಗಳೆಡೆಗೆ ದಾಪುಗಾಲಿಡುತ್ತಾ, ಹೋಟೆಲಿನ ಒಂದೊಂದೇ ಭಾಗವನ್ನು ವಶಕ್ಕೆ ತೆಗೆದುಕೊಳ್ಳುತ್ತಾ, ಸಿಡಿದು ಬರುತ್ತಿದ್ದ ಗುಂಡುಗಳಿಗೆ ಪ್ರತ್ಯುತ್ತರವನ್ನಿಯುತ್ತಾ ಇವರ ತಂಡ ಉಗ್ರರಿಗೆ ಸೋಲಿನ, ಸಾವಿನ ಉಡುಗೊರೆಯನ್ನು ನೀಡಲು ಮುನ್ನುಗ್ಗುತ್ತಿದ್ದಾಗ, ವೈರಿಪಡೆಯ ಗುಂಡು ನಮ್ಮ ಸೈನಿಕನೊಬ್ಬನನ್ನು ಘಾಸಿಗೊಳಿಸಿತು. ಅವನನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಸಂದೀಪ್, ಎದುರಾಳಿಯನ್ನು ಹೊಡೆದುರಳಿಸ ಬೇಕು ಇಲ್ಲವೇ ಅವರ ಗುಂಡು ತನ್ನವರನ್ನು ತಾಕುವ ಮೊದಲು ತನ್ನ ಮೈಯನ್ನು ದಾಟಿಯೇ ಬರಬೇಕೆಂದು ನಿರ್ಧರಿಸಿ, ” ಮೇಲಕ್ಕೆ ನೀವು ಯಾರು ಬರಬೇಡಿ, ನಾನೊಬ್ಬನೇ ನೋಡಿಕೊಳ್ಳುತ್ತೇನೆ” ಎಂದು ಆಜ್ಞೆಯಿತ್ತು, ಮೇಲಿನ ಮಹಡಿಗೆ ಧಾವಿಸಿದರು. ಶರವೇಗದಲ್ಲಿ ಉಗ್ರರ ಎದುರಿಗೆ ಬಂದ ಸಂದೀಪರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಯಿತು. ಭುಜಗಳನ್ನು ಹೊಕ್ಕಗುಂಡು ಅವರನ್ನು ನಿತ್ರಾಣಗೊಳಿಸುತ್ತದೆ ಎಂದುಕೊಂಡ ಉಗ್ರರಿಗೆ ಅತ್ಯುಗ್ರವಾಗಿ ತನ್ನ ಬಂದೂಕಿನಿಂದ ಪ್ರತ್ಯುತ್ತರವನ್ನಿತ್ತ ಸಂದೀಪ್ ತೀವ್ರವಾಗಿ ಗಾಯಗೊಂಡಿದ್ದರೂ ಎದುರಾಳಿಯನ್ನು ಸಾಕಷ್ಟು ಘಾಸಿಗೊಳಿಸಿದ್ದರು. ಭಾರತಮಾತೆಗೆ ಒಮ್ಮೆ ಮಾತ್ರ ನೀಡಬಹುದಾದ ಪ್ರಾಣದಾರತಿಯನ್ನು ಬೆಳಗಿಬಿಟ್ಟರು. ರಣರಂಗದಲ್ಲಿ ಭಾರತ ಮಾತೆಯ ಸೇವೆ ಮಾಡುತ್ತಾ ಶತ್ರುಗಳ ಏಟಿಗೆ ಎದಿರೇಟನ್ನು ವೀರಾವೇಶದಿಂದ ನೀಡಿ, ಅರ್ಪಿಸಿದ್ದ ಆ ಶ್ರೇಷ್ಟ ನೈವೇದ್ಯ ನೇರ ಭಗವಂತನ ಸನ್ನಿಧಿಯನ್ನು ತಲುಪಿತ್ತು. ಮೇಜರ್ ಸಂದೀಪ್ ರ ಈ ಅತ್ಯುನ್ನತ ಅರ್ಪಣೆಯನ್ನುಗೌರವಿಸಿ ಭಾರತ ಸರ್ಕಾರ ” ಅಶೋಕ ಚಕ್ರ” ಪ್ರಶಸ್ತಿಯನ್ನು ನೀಡಿತು. ಹುಟ್ಟು ಹಬ್ಬದಂದು ಅವರ ಈ ತ್ಯಾಗ ಬಲಿದಾನಗಳನ್ನು ಇಡೀ ದೇಶವೇ ಹೆಮ್ಮೆಯಿಂದ ನೆನೆಯುತ್ತಿರುವಾಗ, ಎಲೆಮರೆಯ ಕಾಯಿಗಳಂತೆ ಇದ್ದುಕೊಂಡು ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ ದೇಶಕ್ಕಾಗಿ ಸೇವೆಮಾಡಿದವರನ್ನು, ಮಗನನ್ನು ದೇಶಕ್ಕರ್ಪಿಸಿದ ತಾಯಿಯ ಮುಂದೆ ಗೌರವಿಸುವ ಆಲೋಚನೆ ಸಮಂಜಸವೇ ಆಗಿತ್ತು.

ನಿವೇದಿತರ ನೆನಪಿನಲ್ಲಿ ” ನಿವೇದನಾ” ಡೈರಿಯನ್ನು ಸಹ ಬಿಡುಗಡೆ ಮಾಡಲಾಯಿತು.

“ವಿಲಾಸ್ ನಾಯಕ್, ದೇಶವಿದೇಶಗಳಲ್ಲಿ ತಮ್ಮ fast painting ನ ಮೂಲಕ ಪ್ರಖ್ಯಾತಿ ಪಡೆದಿರುವ ಇವರು, ” ಕಂಧೋನ್ ಸೆ ಮಿಲ್ ತೇ ಹೈ ಕಂಧೆ ” ( ಲಕ್ಷ್ಯ) ಚಿತ್ರಗೀತೆಯ ಹಿನ್ನಲೆಯಲ್ಲಿ ಕ್ಯಾನ್ವಾಸಿನ ಮೇಲೆ ಅದ್ಭುತ ಕಲಾಕೃತಿಯನ್ನು ಅರಳಿಸಿದರು. ಹಾಡಿನ ಆರಂಭದಿಂದ ಅಂತ್ಯದವರೆಗೂ ತಮ್ಮ ಎರೆಡೂ ಕೈಗಳನ್ನು ಬಳಸಿಕೊಂಡು ಕ್ಯಾನ್ವಾಸಿನ ಮೇಲೆ ಚಿತ್ತಾರ ಬಿಡಿಸುತ್ತಿದ್ದರು. ಹಾಡು ಮುಗಿಯುತ್ತಾ ಬಂದಿತ್ತಾದರೂ ಅವರು ಬರೆದದ್ದೇನೆಂದು ಯಾರು ಊಹಿಸಲಾಗಲೇ ಇಲ್ಲ. ಅಷ್ಟರಲ್ಲೇ ಇಡೀ ಕ್ಯಾನ್ವಾಸನ್ನು ತಲೆ ಕೆಳಗು ಮಾಡಿ ನಿಲ್ಲಿಸಿದರು ವಿಲಾಸ್. ನಮ್ಮ ತ್ರಿವರ್ಣ ಧ್ವಜವನ್ನು ಹಲವಾರು ಜನ ಎತ್ತಿ ಹಿಡಿದಿರುವ ಸುಂದರ ದೃಶ್ಯ ಅಲ್ಲಿ ಜೀವತಳೆದಿತ್ತು. ಈ ಮೂಲಕ ಭಾರತೀಯರೆಲ್ಲರಿಗೂ ಅನನ್ಯ ಗೌರವ ಸೂಚಿಸಿದ ವಿಲಾಸ್ರನ್ನು ನಮ್ಮೆಲ್ಲರ ಪರವಾಗಿ ಸಂದೀಪ್ ರ ತಂದೆ ತಾಯಿ ಸ್ಮರಣಿಕೆಯೊಂದನ್ನು ನೀಡಿ ಗೌರವಿಸಿದರು.

ಭಾರತ ದೇಶ ಅನೇಕ ಕಲೆಗಳಿಗೆ ತವರು. ಯುಧ್ಧ ಕಲೆಗಳು ಸಹ ಇದರ ಒಂದು ಅವಿಭಾಜ್ಯ ಅಂಗ. ಭಾಗಶಃ ಕೇರಳದಲ್ಲಿ ಇಂದಿಗೂ ಬಹಳ ಆಸಕ್ತಿಯಿಂದ ಕಲಿಯಲ್ಪಡುವ ಯುಧ್ಧಕಲೆ “ಕಳರಿಪಯಟ್ಟು”. ಇದನ್ನು ನಮಗೆ ಪರಿಚಯಿಸಲು ಚೆನ್ನೈನ ವಿದ್ಯಾರ್ಥಿಗಳ ತಂಡವೊಂದು ನಮ್ಮನ್ನು ಕೂಡಿಕೊಂಡಿತ್ತು. ಸುಮಾರು ಅರ್ಧ ಗಂಟೆ, ದೇಹವನ್ನು ತಮ್ಮ ಆಣತಿಯಂತೆ ಹುರಿಗೊಳಿಸಿಕೊಂಡಿದ್ದ ಪಟುಗಳು, ವೀರಕಲೆಯೊಂದನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಆರೋಗ್ಯವರ್ಧನೆಗೆ ದೇಹದಂಡನೆಯೊಂದೇ ಮಾರ್ಗ. ಆಲಸಿಗಳಾದರೆ ರೋಗರುಜಿನಗಳು ಕಟ್ಟಿಟ್ಟಬುತ್ತಿ. ಈ ಕಲೆಗಳನ್ನು ಕಲಿಯುವುದರಿಂದ ಎರಡು ಲಾಭಗಳಿವೆ. ನಮ್ಮ ಪಾರಂಪರಿಕ ಕಲೆಗಳನ್ನು ಮುಂದಿನ ಜನಾಂಗಕ್ಕೂ ಕಾಪಿಟ್ಟು ದಾಟಿಸುವ ಲಾಭ ಒಂದಾದರೆ, ಖಾಯಿಲೆ ಕಸಾಲೆಗಳನ್ನು ನೂರಡಿ ದೂರದಲ್ಲಿಟ್ಟು ಆರೋಗ್ಯವಾಗಿ ತುಂಬು ಜೀವನ ನಡೆಸುವ ಲಾಭ ಮತ್ತೊಂದು. ದೇಹ ಮತ್ತು ಮನಸ್ಸುಗಳನ್ನು ಏಕಾಗ್ರತೆಯಿಂದ ಒಂದೆಡೆ ಕಟ್ಟಿ ಹಾಕುವ ಈ ಕಲೆ ನಮ್ಮ ತರುಣರಿಗೆ ಅತ್ಯಾವಶ್ಯಕ. ಈ ಪ್ರದರ್ಶನದ ನಂತರ ನಮ್ಮಲ್ಲಿ ಎಷ್ಟೋ ಮಂದಿ “ಕಳರಿಪಯಟ್ಟು”ಅನ್ನು ಕಲಿಯುವ ಮನಸ್ಸು ಮಾಡಿರಲಿಕ್ಕೆ ಸಾಕು. ತಂಡದ ಈ ಉತ್ತಮ ಕಾರ್ಯವನ್ನು ಶ್ಲಾಘಿಸಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ನಂತರ ವೇದಿಕೆಗೆ ” ಶ್ರೀ ಸದಾನಂದ ಮಯ್ಯ” ಅವರನ್ನು ಕರೆತರಲಾಯಿತು. ಮಯ್ಯರವರು, ಉದ್ಯಮಿಗಳಾಗಿಯೂ, ಬಾಣಸಿಗರಾಗಿಯೂ, ಎಲ್ಲರಿಗೂ ಚಿರಪರಿಚಿತರು. ಸದಾ ಹಸನ್ಮುಖಿ, ಸ್ನೇಹಜೀವಿ, ಬಿಚ್ಚು ಮನಸಿನ ಮಾತುಗಾರರಾದ ಅವರು ತಮ್ಮ ಜೀವನದಲ್ಲಿ ನಡೆದ ಅಪುರೂಪದ ಸನ್ನಿವೇಶಾವಕಾಶವನ್ನು ನಮ್ಮೊಡನೆ ಹಂಚಿಕೊಂಡರು. ಸರಿಯಾಗಿ ೨೦ ವರ್ಷಗಳ ಹಿಂದೆ, ಆಗಿನ ಎಂ.ಟಿ.ಆರ್ ನ ಒಡೆಯರಾಗಿದ್ದ ಮಯ್ಯರಿಗೆ, ” ಕೇಂದ್ರದ ರಕ್ಷಣಾ ಸಚಿವಾಲಯದಿಂದ ತುರ್ತಾಗಿ ದೆಹಲಿಗೆ ಬರುವಂತೆಯೂ, ಪ್ರಯಾಣಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಮಾಡಿರುವುದಾಗಿಯೂ ಒಂದು ಕರೆ ಬಂದಿತು. ಆ ಕರೆಯನ್ನು ಮನ್ನಿಸಿ ಅವರು ದೆಹಲಿಗೆ ಹೊರಟರು. ಅಲ್ಲಿ ಅವರ ನೇರ ಭೇಟಿ ಅಂದಿನ ರಕ್ಷಣಾ ಮಂತ್ರಿ ” ಜಾರ್ಜ್ ಫರ್ನಾಂಡಿಸ್”ರ ಜೊತೆ. ಎಲ್ಲಿಯೂ ಅರೆಕ್ಷಣ ವ್ಯರ್ಥವಾಗದ ಹಾಗೆ ಅವರ ಭೇಟಿಯನ್ನು ಯೋಜಿಸಲಾಗಿತ್ತು. ಉಭಯ ಕುಶಲೋಪರಿ ನಂತರ ಫರ್ನಾಂಡಿಸ್ ರು, ಮಯ್ಯರನ್ನು ಕುರಿತು “ಸೈನಿಕರು ಎಲ್ಲ ರೀತಿಯ ಭೂ ಪ್ರದೇಶಗಳಲ್ಲಿ ಕೆಲಸ ಮಾಡ ಬೇಕಾಗುತ್ತದೆ. ಪರ್ವತ, ಸಮನೆಲ, ಕಡಿದಾದ ಇಳಿಜಾರು, ಪ್ರಪಾತಗಳೆಲ್ಲವೂ ಅವರು ಕ್ರಮಿಸ ಬೇಕಾದ ದಾರಿಯಲ್ಲಿರುತ್ತವೆ. ಇಂತಹ ದುರ್ಗಮ ಪ್ರದೇಶಗಳಲ್ಲಿ ಆವಶ್ಯಕ ಸಾಮಗ್ರಿಗಳನ್ನು ಹೊತ್ತು ಅವರು ಸಾಗಬೇಕಾಗುತ್ತದೆ. ಇಲ್ಲೆಲ್ಲಾ ನಡೆಯುವುದೇ ಕಷ್ಟ, ಹೀಗಿರುವಾಗ ಅಗತ್ಯವಾಗಿ ಬೇಕಾದ ನೀರು, ಆಹಾರ ಪದಾರ್ಥ, ಒಲೆ, ಮತ್ತು ಇತರೆ ಪದಾರ್ಥಗಳ ಸುಮಾರು ೩೭ ಕೆಜಿ ಪ್ಯಾಕೇಜನ್ನು ಹೊತ್ತು ಹೋಗಬೇಕಾದದ್ದು ಅನಿವಾರ್ಯ. ಈ ಪ್ಯಾಕೇಜ್ ನ ಭಾರವನ್ನು ೩೦ ಕೆಜಿಗೆ ಮಾಡಲು ಸಾಧ್ಯವಾ?”. ಎಂದು ಕೇಳಿದರು. ಎರಡು ನಿಮಿಷ ಯೋಚಿಸಿದ ಮಯ್ಯರು ” ನನಗೆ ೧೫ ದಿನಗಳ ಕಾಲಾವಕಾಶ ಕೊಡಿ. ಅಷ್ಟರೊಳಗೆ ಸಾಧ್ಯವಾದಷ್ಟು ಭಾರವನ್ನು ತಗ್ಗಿಸುವ ಪ್ರಯತ್ನ ಮಾಡಿಕೊಡುತ್ತೇನೆ” ಎಂದರು. ತಕ್ಷಣ ಫರ್ನಾಂಡಿಸ್ ರು, “ಧನ್ಯವಾದಗಳು, ಆದರೆ ೧೫ ದಿನ ಸಮಯವಿಲ್ಲ, ೩ ದಿನದಲ್ಲಿ ಈ ಕೆಲಸ ಆಗಬೇಕೆಂದು ಹೇಳಿ, ೩ ದಿನದ ನಂತರ ಮತ್ತೊಂದು ಭೇಟಿಗೆ ಸಮಯ ನಿಗದಿ ಮಾಡಿ ಹೊರಟೆ ಬಿಟ್ಟರು. ತಕ್ಷಣ ಕಾರ್ಯಪ್ರವೃತ್ತರಾದ ಮಯ್ಯ ರು, ತಮ್ಮ ಅಧಿಕಾರಿಗಳು, ಮತ್ತು ಮುಖ್ಯಸ್ಥರೊಂದಿಗೆ ಮಾತನಾಡಿ, ವಿಷಯ ತಿಳಿಸಿ, ಆಗಬೇಕಾದ ಕೆಲಸಗಳನ್ನು ನಿಷ್ಕರ್ಷಿಸಿ ಸೈನಿಕರ ಶ್ರಮವನ್ನಿಳಿಸುವ ಮಹತ್ ಕಾರ್ಯವನ್ನು ಕೈಗೆತ್ತಿಕೊಂಡರು. ಕೇವಲ ೩ ದಿನದಲ್ಲಿ ಎಲ್ಲರ ಪರಿಶ್ರಮದಿಂದ ೩೭ ಕೇಜಿಯ ಆ ಪ್ಯಾಕೇಜ್, ೨೫ಕೆಜಿ ಯಾಗಿಬಿಟ್ಟಿತು. ಹೊಸ ಒಲೆ, ಮಂಜಿನ ನೀರನ್ನು ತೆಗೆದು ಅದನ್ನೇ ಕಾಯಿಸಿಕೊಳ್ಳುವ ವಿಧಾನವೂ ಸಹ ತಯಾರಾಗಿತ್ತು. ಮುಂದಿನ ಭೇಟಿಯಲ್ಲಿ ಫರ್ನಾಂಡಿಸ್ ಈ ಹೊಸ ಪ್ಯಾಕೇಜನ್ನು ಪರೀಕ್ಷಿಸಿ ಕೆಲ ಲಕ್ಷ ಪ್ಯಾಕೇಜುಗಳು ಬೇಕೆಂದು ಅದನ್ನು ಪೂರೈಸಲು ೧೫ ದಿನಗಳ ಸಮಯವನ್ನುಕೊಡುವುದಾಗಿಯೂ ಹೇಳಿದಾಗಲಂತೂ, ಮಯ್ಯರಿಗೆ ನಗಬೇಕೋ ಅಳಬೇಕೋ ತಿಳಿಯದಂತಾಯಿತು. ಆದರೆ, ಸೇನೆಗೆ ಇದರ ಅವಶ್ಯಕತೆಯ ಅರಿವಿದ್ದ ತಂಡ ಹಗಲು ರಾತ್ರಿ ದುಡಿದು, ಅವಶ್ಯಕತೆಯನ್ನು ಪೂರೈಸಿತು. ಸದಾನಂದ ಮಯ್ಯರು ಭಾರತ ಮಾತೆಗೆ ಮಾಡಿದ ಈ ಸೇವೆ ತಮ್ಮದೇ ಖರ್ಚಿನಲ್ಲಿರಲಿ ಎಂದು ಹೇಳಿ ಹೊರಟು ಬಂದರಂತೆ. ಈ ಮಾತುಗಳನ್ನು ಕೇಳುತ್ತಾ ಕುಳಿತಿದ್ದ ಎಲ್ಲರ ಕೈಗಳು ಅಪ್ರಯತ್ನ ಪೂರ್ವಕವಾಗಿ ಅವರಿಗೆ ವಂದಿಸಿದವು. ಯುವಬ್ರಿಗೇಡ್ನ ಪರವಾಗಿ ಸಂದೀಪ್ ರ ತಂದೆ ತಾಯಿ ಸ್ಮರಣಿಕೆಯೊಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಮತ್ತೊಮ್ಮೆ ವೇದಿಕೆಗೆ ಬಂದ ವಿಲಾಸ್ ನಾಯಕ್, ” ಏ ಮೇರೆ ವತನ್ ಕೆ ಲೋಗೋ” ಹಾಡಿನ ಹಿನ್ನಲೆಯಲ್ಲಿ ಮತ್ತೆ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು. ಸಂದೀಪ್ ಉನ್ನಿಕೃಷ್ಣನ್ ರ ಸುಂದರ ಮುಖ ಆ ಭಿತ್ತಿಯ ಮೇಲೆ ಅರಳಿತು. ಆ ಅಪುರೂಪದ ಕಲಾಕೃತಿಯನ್ನು ಸಂದೀಪರ ತಂದೆ ತಾಯಿಗಳಿಗೆ ಉಡುಗೊರೆಯಾಗಿ ಕೊಟ್ಟ ಆ ಭಾವುಕ ಕ್ಷಣಗಳಲ್ಲಿ ನೆರೆದಿದ್ದವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಸಂದೀಪರ ಅಮ್ಮನಿಗೆ ಆ ಕ್ಷಣ ವಿಲಾಸ್ ರಲ್ಲಿ ಮಗನನ್ನು ಕಂಡ ಅನುಭವವಾಗಿದ್ದಿರಬೇಕು, ಪುಟ್ಟ ಮಗುವನ್ನು ತಬ್ಬಿಕೊಂಡಂತೆ ಎರಡೂ ಕೈಗಳಿಂದ ಅವರನ್ನು ಅಪ್ಪಿಕೊಂಡು ಮಗನ ನೆನಪುಗಳಲ್ಲಿ ಮತ್ತೊಮ್ಮೆ ಜೀವಿಸಿದರು. ಮಾತೃ ವಾತ್ಸಲ್ಯದ ಸವಿ ಹಂಚಿದರು.

ನಂತರ ಮಾಲತಿ ಹೊಳ್ಳ ರವರನ್ನು ವೇದಿಕೆಗೆ ಕರೆತರಲಾಯಿತು. ಹಕ್ಕಿಯಂತೆ ಹಾರಬೇಕೆಂಬ ಧೃಡ ಸಂಕಲ್ಪಕ್ಕೆ ಆತ್ಮವಿಶ್ವಾಸವೇ ರೆಕ್ಕೆಗಳು. ಕಾಲುಗಳು ಸಹಕರಿಸದಿದ್ದರೇನು ಕೈಗಳು ಸಶಕ್ತವಾಗಿದ್ದವಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮಾಲತಿ ಅಕ್ಕ, ಗೆದ್ದ ಪದಕಗಳು ೪೦೦ಕ್ಕೂ ಹೆಚ್ಚು. ಎಷ್ಟಾದರೂ ಹೆಣ್ಣಲ್ಲವೆ ಎಂದು ಕೆಣಕಿದ್ದವರಿಗೆ ೩೮೦ಕ್ಕಿಂತಲೂ ಹೆಚ್ಚಿನ ಚಿನ್ನದ ಪದಕಗಳನ್ನು ಗೆದ್ದು, “ಹೌದು, ಎಷ್ಟಾದರೂ ಹೆಣ್ಣಲ್ಲವೆ, ಚಿನ್ನದ ವ್ಯಾಮೋಹ ಜಾಸ್ತಿ ಎಂದುತ್ತರಿಸಿದ ಛಾತಿಯ ಹೆಣ್ಣು. Wheel chair ಅನ್ನು ತನ್ನ ಕಾಲುಗಳನ್ನಾಗಿಸಿಕೊಂಡು, ಪ್ಯಾರ ಒಲಂಪಿಕ್ಸ್ ನಲ್ಲಿ wheel chair race, shot put ನಂತಹ ಕ್ರೀಡೆಗಳಲ್ಲಿ ಅದ್ವಿತೀಯ ಸಾಧನೆಗೈದ ಮಾಲತಿ ಅಕ್ಕ, ಯುವಕರ ಮನಸುಗಳಿಗೆ ಪ್ರೇರಣೆ ನೀಡುವಂತಹ ನಾಲ್ಕು ಮಾತುಗಳನ್ನು ಹೇಳಿದರು. “ನಾವು ಹಣ ಗಳಿಸಬೇಕೆಂದು ಬಯಸಿದರೆ ಒಂದು ಕಂಪನಿಯನ್ನು ಕಟ್ಟುತ್ತೇವೆ. ಆದರೆ ನಾವು ಜನ ಗಳಿಸಬೇಕೆಂದು ಬಯಸಿದರೆ ಒಂದು ಸಾಮ್ರಾಜ್ಯವನ್ನೇ ಕಟ್ಟುತ್ತೇವೆ”. ಎಂಬ ಗೌತಮ ಬುದ್ಧನ ಮಾತು ನಮಗೆ ಪ್ರೇರಣಾದಾಯಿ. ಬಾಹ್ಯ ಸೌಂದರ್ಯ ಕ್ಷಣಿಕ, ಆದರೆ ಅಂತಃ ಸೌಂದರ್ಯ ಶಾಶ್ವತ. ಬಲೂನಿನ ಬಣ್ಣ ಕಪ್ಪಾದರೂ, ಬಿಳಿಯದಾದರೂ, ಕೆಂಪಾದರೂ, ಎಲ್ಲವೂ ಮೇಲೇರಲು ಸಾಧ್ಯ. ಕಾರಣ, ಬಲೂನು ಮೇಲೇರುವುದಿಲ್ಲ – ಅದರೊಳಗಿನ ಗಾಳಿ ಅದನ್ನು ಮೇಲಕ್ಕೇರಿಸುತ್ತದೆ. ಹಾಗೆಯೇ ಹೊರಗಿನ ತಳುಕು ಬಳುಕಿಗಿಂತ ಒಳಗೆ ಪ್ರೀತಿ ವಾತ್ಸಲ್ಯ ಕರುಣೆಗಳನ್ನು ತುಂಬಿಸಿಕೊಳ್ಳೋಣ. ನಾವು ಸಹ ಶ್ರೇಷ್ಟ ವ್ಯಕ್ತಿಗಳಾಗೋಣ” ಎಂದು ತಮ್ಮ ಮಾತುಗಳನ್ನು ಮುಗಿಸಿದರು. . ಸಾಧಕರೊಬ್ಬರ ಅಂತಃ ಕರಣ ಶುದ್ಧವಾಗಿದ್ದರೆ ಅವರ ಬಳಿಗೆ ಹೋಗುವ ನೂರಾರು ಯುವಕರ ಆತ್ಮಶಕ್ತಿಗೆ ನೂರು ಅಶ್ವ ಶಕ್ತಿಯ ಬಲವನ್ನು ನೀಡಿಬಿಡುತ್ತಾರೆ. ಇಡೀ ಜೀವನವನ್ನು ರಾಷ್ಟ್ರಕ್ಕೆ ನಿವೇದಿಸಿದ ಮಾಲತಿ ಅಕ್ಕನನ್ನು ನಮ್ಮೆಲ್ಲರ ಪರವಾಗಿ ಸಂದೀಪ್ ರ ತಂದೆ ತಾಯಿ ಪ್ರೀತಿ ಗೌರವಗಳಿಂದ ಸನ್ಮಾನಿಸಿದರು.

ನಂತರ ರವೀಂದ್ರ ದೇಶ್‌ಮುಖ್ ರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಇಂದು ಮಾಧ್ಯಮ ಸಮಾಜದ ಹುಳುಕುಗಳನ್ನು ತೋರಿಸುವ ಕನ್ನಡಿಯಾಗಿದೆ. ಆದರೆ ಈ ಹುಚ್ಚಿಗೆ ಬಿದ್ದು ಧನಾತ್ಮಕ ಅಂಶಗಳನ್ನು ಸಂಪೂರ್ಣ ಕಸದ ತೊಟ್ಟಿಗೆ ಎಸೆದು ಕೇವಲ ಕೆಟ್ಟದ್ದನ್ನು ವಿಜೃಂಭಿಸಿ ತೋರಿಸಿ ತನ್ಮೂಲಕ trp ಗಾಗಿಯೇ ಬಾಳುತ್ತಿರುವವರ ನಡುವೆ ಒಬ್ಬ ಸರಳ ಸಜ್ಜನ ” ಬರಹಗಾರರ ಕೆಲಸ ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳನ್ನ ಹೆಕ್ಕಿ ತೆಗೆದು, ಅದನ್ನು ನೂರು ಜನರಿಗೆ ಪ್ರಚಾರ ಮಾಡುವುದು” ಎಂದು ನಂಬಿ, ಅದನ್ನು ” ಜರೂರ್ ಮಾತು” ಅಂಕಣದ ಮೂಲಕ ಸದ್ದಿಲ್ಲದೆ ಮಾಡುತ್ತಿರುವವರು ರವೀಂದ್ರ ದೇಶ್‌ಮುಖ್. ಅವರ ಮಾತುಗಳಲ್ಲಿ ” ಲೋಕ ಎಷ್ಟೊಂದು ಸುಂದರವಾಗಿದೆ! ಎಷ್ಟೋ ಜನ ಸಾಧಕರ, ಸಜ್ಜನರ ನಡುವೆ ನಾವೆಲ್ಲ ನಮಗರಿವಿಲ್ಲದಂತೆಯೇ ಬಾಳುತ್ತಿದ್ದೇವೆಯಲ್ಲ ಎಂದು ನೆನಪಾಗಿ ನೆಮ್ಮದಿ, ಧೈರ್ಯ, ಸಂತಸಗಳು ಮನಸ್ಸನ್ನು ಆವರಿಸಿದವು. ಅವರಿಗೂ ಸಹ ಸಂದೀಪ್ ರ ತಂದೆ ತಾಯಿ ಸ್ಮರಣಿಕೆಯನ್ನು ಕೊಟ್ಟು ಗೌರವ ಸಮರ್ಪಿಸಿದರು.

ವೀರ ಸೈನಿಕನೊಬ್ಬನ ಹುಟ್ಟು ಹಬ್ಬವನ್ನು ಆಚರಿಸುತ್ತಾ ನೂರಾರು ಯುವ ಮನಸ್ಸುಗಳು ದೇಶ ಕಂಡ ಅನೇಕ ಮಹಾನ್ ಚೇತನಗಳನ್ನು ಹುಡುಕಿಕೊಂಡವು, ಶ್ರೇಷ್ಠ ನಿವೇದನೆಗಳನ್ನ ಅರ್ಪಿಸಿದವರ ಕಥೆಗಳನ್ನು ತುಂಬಿಕೊಂಡವು. ಅಷ್ಟು ಹೊತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದೀಪರ ಅಪ್ಪ ಅಮ್ಮ ವೇದಿಕೆಯ ಮೂಲಕ ಕೆಲ ಆಸೆ ಕನಸುಗಳನ್ನು ನಮ್ಮೊಡನೆ ಹಂಚಿಕೊಂಡರು.

ಅಮ್ಮ, “ ಇನ್ನೂ ಜೀವನ ಪೂರ್ತಿ ಮಾತಾಡುವಷ್ಟು ವಿಷಯವಿದೆ. ಆದರೆ ಅವನೇ ಇಲ್ಲ” ಎಂದಾಗ ಹೃದಯ ಭಾರವಾಗಿತ್ತು. ಉನ್ನಿಕೃಷ್ಣನ್ ರವರು ಮಾತನಾಡಿ, ನಮ್ಮ ಸೈನಿಕರು ಸ್ವಾಭಿಮಾನಿಗಳು. ಸಂದೀಪ್ ಟ್ರಸ್ಟ್ ನ ಮೂಲಕ ಇದುವರೆಗೂ ಮಾಡಿರುವ ಕೆಲಸಗಳೆಲ್ಲಾ ಸ್ವತಹ ತಾವು ಹುಡುಕಿಕೊಂಡು ಮಾಡಿದ್ದೆ ಆಗಿದೆ. ಒಬ್ಬ ಸೈನಿಕ ಅಥವಾ ಆತನ ಮನೆಯವರು, ನಮಗೆ ತೊಂದರೆ ಇದೆ ಎಂದು ಸಹಾಯ ಬೇಡಿ ಬಂದದ್ದೇ ಇಲ್ಲ ಎಂದಾಗ ಸೈನಿಕರ ಬಗ್ಗೆ ಇದ್ದ ಗೌರವ ನೂರ್ಮಡಿಯಾಯಿತು. ನಮ್ಮ ಅನುಪಸ್ಥಿತಿಯಲ್ಲಿಯೂ ಈ ಟ್ರಸ್ಟ್ ನ ಕಾರ್ಯಕ್ರಮಗಳು ನಿಲ್ಲಬಾರದು. ನೀವೆಲ್ಲರೂ ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಒತ್ತಾಯದಲ್ಲಿ ಒಬ್ಬ ದೇಶಭಕ್ತ ತಂದೆಯನ್ನು, ಪ್ರೇಮ ಮೂರ್ತಿ ತಾಯಿಯನ್ನು ಕಂಡೆವು.

ಸಾರ್ಥಕ ಕಾರ್ಯಕ್ರಮವೊಂದು ಸಂಪನ್ನವಾಯಿತು.

*****************

ಇಷ್ಟನ್ನು ಹೇಳಿ, ನನ್ನೆದುರಿಗೆ ಚರ್ಚೆಗೆ ಕುಳಿತಿದ್ದವರ ಮುಂದೆ ಕೆಲ ಪ್ರಶ್ನೆಗಳನ್ನಿಟ್ಟೆ.

ಇಡೀ ಕಾರ್ಯಕ್ರಮವನ್ನು ವಿಶೇಷವಾಗಿ ನಿರೂಪಿಸಿದ ಚಕ್ರವರ್ತಿ ಅಣ್ಣ, ಸಮಯೋಚಿತ, ಸಂಧರ್ಭೋಚಿತ ಕಥೆಗಳು, ಸ್ವಾನುಭವಗಳು, ಸಾಧನೆಯ ಹಾದಿಯ ಸಾಧಕ ಬಾಧಕಗಳನ್ನು ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತ ಸುಂದರ ಸಂಜೆಯನ್ನು ಅರ್ಥಪೂರ್ಣಗೊಳಿಸಿಬಿಟ್ಟರು. ಈ ಮಟ್ಟದ ಬಧ್ಧತೆಗೆ ದೇಶಪ್ರೇಮವೇ ಪ್ರೇರಣೆಯಲ್ಲವೇ?

ಸಂದೀಪರ ತಂದೆ ತಾಯಿ ಕಾರ್ಯಕ್ರಮದುದ್ದಕ್ಕೂ ಸಕ್ರಿಯವಾಗಿ ಭಾಗಿಯಾಗಿದ್ದದ್ದು, ತಮ್ಮ ಪ್ರೀತಿಯ ಮಗನನ್ನು ದೇಶಕ್ಕೆ ಸಮರ್ಪಿಸಿ ಅವನ ಕಾಲಾನಂತರವು ದೇಶ ಸೇವೆ ಮಾಡಬೇಕೆಂದು ಅಚಲವಾಗಿ ನಿರ್ಧರಿಸಿ ಆ ದಾರಿಯಲ್ಲಿ ಮುನ್ನಡೆಯುತ್ತಿರುವ ಅವರ ಆಶೀರ್ವಾದದಲ್ಲಿ ದೇಶಭಕ್ತಿಯ ದರ್ಶನವಾಗಲಿಲ್ಲವೇ?

ಸದಾನಂದ ಮಯ್ಯರು ಲಕ್ಷಾಂತರ ಕಿಟ್ಟುಗಳನ್ನು ದೇಶ ಕಾಯುವ ಸೈನಿಕರಿಗೆ ಉಡುಗೊರೆಯಾಗಿ ಕೊಟ್ಟಿದ್ದು ದೇಶಭಕ್ತಿಯಲ್ಲವೇ?

ಕಾಲುಗಳೇ ಇಲ್ಲದೆ ಸ್ವತಂತ್ರವಾಗಿ ನಡೆದಾಡಲೂ ಸಾಧ್ಯವಿಲ್ಲದ ಯುವತಿ, ದೇಶಕ್ಕೆ ೪೦೦ ಪದಕಗಳನ್ನು ಗಳಿಸಿಕೊಡಲು ಲೋಹದ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿದ್ದು ದೇಶಭಕ್ತಿಯಲ್ಲವೇ?

ವಿಲಾಸ್ ನಾಯಕ್, ತಿಂಗಳೊಂದಕ್ಕೆ ಲಕ್ಷಾಂತರ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು, ಚಿಕ್ಕಂದಿನಿಂದ ಆಸಕ್ತಿಯಿದ್ದ ಚಿತ್ರಕಲೆಯೆಡೆಗೆ ತಮ್ಮ ಮುಂದಿನ ಜೀವನವನ್ನು ಮುಡಿಪಾಗಿಡುವ ಸಂಕಲ್ಪ ಮಾಡಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತಹ ಕೆಲಸ ಮಾಡಲು ಪ್ರೇರಣೆ ದೇಶಭಕ್ತಿಯಲ್ಲವೇ?

ಪತ್ರಿಕೋದ್ಯಮವನ್ನು ಪ್ರೀತಿಯಿಂದ ವೃತ್ತಿಯನ್ನಾಗಿ ಆರಿಸಿಕೊಂಡು, ಒಳ್ಳೆಯ ವಿಚಾರಗಳನ್ನು ಎಲ್ಲೆಡೆ ಹರಡುತ್ತಿರುವ ರವೀಂದ್ರ ದೇಶ್‌ಮುಖರು ದೇಶಭಕ್ತರಲ್ಲವೇ?

ರೆಟ್ಟೆಯಲ್ಲಿ ಬಲ, ಮೆದುಳಿನಲ್ಲಿ ಬುಧ್ಧಿಯಿರುವ ಎಲ್ಲ ಮಾನವರು ಒಂದೇ. ಈ ಬಲವನ್ನೂ, ಬುಧ್ಧಿಯನ್ನು ಎಲ್ಲರ ಒಳಿತಿಗಾಗಿ, ” Live and Let Live” policy ಪಾಲಿಸುತ್ತಾ, ನಾಲ್ಕು ಜನರೆದುರು ಹೆಮ್ಮೆಯಿಂದ ಬದುಕುವ, ಆತ್ಮೀಯತೆಯಿಂದ ಬಾಳುವ ಕಲೆಗೆ ಸ್ಪೂರ್ತಿ ದೇಶಭಕ್ತಿಯಲ್ಲವೇ?

ಹಿಂದೂ ಧರ್ಮ ಒಂದು ಜೀವನ ವಿಧಾನ. ಧರ್ಮ ಎಂದರೆ ” ಕಣ್ಣು ಮುಚ್ಚಿ ಕುಳಿತುಕೊಳ್ಳುವ, ಮಣಮಣ ಮಂತ್ರ ಹೇಳುತ್ತಾ ಮಾಡುವ ಪೂಜೆಯಲ್ಲ. ಯಾವ ಸಮಯದಲ್ಲಿ ಯಾವಕೆಲಸವನ್ನು ಹೇಗೆ ಮಾಡಬೇಕೆಂದು ನಿಷ್ಕರ್ಷಿಸಲು ಬುಧ್ಧಿ ಮನಸುಗಳಿಗೆ ಚೈತನ್ಯಕೊಡುವ ವಿಷಯದ ಜ್ಞಾನವೇ ಧರ್ಮ. ” ಇಂತಹ ಜ್ಞಾನವನ್ನು ಭಾರತದ ಆತ್ಮ ಎನ್ನಬಾರದೆ? ಕೈಕಟ್ಟಿ ಕೂರುವುದಲ್ಲ. ಪುರುಷಾರ್ಥವೆ ಜೀವನ. ಪರೋಪಕಾರ, ಸತ್ಯ, ಸರಳತೆ, ಐಕ್ಯತೆ,ಮಿತ್ರತ್ವ, ವೀರತ್ವ, ಸಂತೋಷ, ಸತ್ಸಂಗ, ಅಹಿಂಸೆ, ಕೃತಜ್ಞತೆಗಳೇ ಜೀವನ ಧರ್ಮ ಎಂದು ಸಾರುವುದೇ ಹಿಂದುತ್ವ. ಇದರಲ್ಲಿ ಒಂದು ತಪ್ಪನ್ನು ಹುಡುಕಿಕೊಡಿ. ನಾವು ಮಾಡಬಾರದ್ದೇನು ಇದರಲ್ಲಿದೆ ತೋರಿಸಿ ಎಂದು ಕೇಳಿ ನಾನು ಮತ್ತೊಮ್ಮೆ ಮೌನಕ್ಕೆ ಶರಣಾದೆ.

 

ವಂದೇ ಮಾತರಂ,

Leave a Reply

Your email address will not be published. Required fields are marked *

You May Also Like

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post

ಏಕತೆಗಾಗಿ‌ ಭಗತ್

ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.…
View Post

ದಿಗ್ವಿಜಯ ದಿವಸ್ – ಪಕ್ಷಿನೋಟ

ಅಂದು ಸೋಮವಾರ.. ದಿನಾಂಕ 11, ಸೆಪ್ಟೆಂಬರ್ 1893ನೇ ಇಸವಿ. ಅಮೆರಿಕಾದ ಚಿಕಾಗೋ ನಗರದಲ್ಲಿ ಏರ್ಪಡಿಸಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಭಾರತದ ಅಸ್ಮಿತೆಯನ್ನು ವಿಶ್ವದ ಮುಂದೆ ಎತ್ತಿಹಿಡಿಯಲು ಕೇಸರಿ ಸಿಂಹವೊಂದು ವೇದಿಕೆಯಲ್ಲಿ ತಲೆಯೆತ್ತಿ ನಿಂತಾಗ ಈ ದಿನ, ಭಾರತೀಯರ ಪಾಲಿಗೆ ‘ದಿಗ್ವಿಜಯದ ದಿನ’ವಾಗುತ್ತದೆಂಬ…
View Post