ನಂದಾದೀಪ

Total
0
Shares

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ ಮನೆಯಲ್ಲಿ ವಾದವಿವಾದಗಳೇ ಇರೋಲ್ಲ. ಈ ಮರೆವು ಇರಲಿ ಬಿಡಿ. ಒಂಥರಾ ನಿರುಪದ್ರವಿ ಈ ಕೌಟುಂಬಿಕ ಮರೆವು.

ಇನ್ನೊಂಥರಾ ಮರೆವಿದೆ, ರಾಜಕೀಯದ ಮರೆವು. ಜಾಣ ಮರೆವು ಅಂತ್ಲೂ ಕರೆಯಬಹುದು. ಈ ಬಾರಿ ಚುಣಾವಣೆಯ ಪ್ರಣಾಳಿಕೆಯ ಎಲ್ಲಾ ಅಂಶಗಳನ್ನೂ ಈಡೇರಿಸಬೇಕು ಅಂತ ನೆನಪಾಗೋದು ಮುಂದಿನ ಚುನಾವಣಾ ಪ್ರಚಾರಕ್ಕೆ ಹೋಗೋವಾಗ ಮಾತ್ರ. ಅಲ್ಲಿಯ ತನಕ ಢೋಂಗಿ ನೇತಾರರಿಗೆ ಇದರ ನೆನಪೇ ಇರೋಲ್ಲ. ಹೇಳಿಕೆ ಕೊಟ್ಟ ಅವರಿಗೇ ನೆನಪಿನಲ್ಲಿಲ್ಲದೆ ಇರೋವಾಗ ಬರಿ ಗಾಳೀಲಿ ಬಂದ ಸುದ್ದೀನ ಕೇಳಿದ ನಮಗೆಲ್ಲಿ ನೆನಪಿರುತ್ತೆ ? ಈ ವಿಷಯದಲ್ಲಿ “ PUBLIC MEMORY IS SHORT” ಅನ್ನೋ ಗಾದೆ ನಿಜವಾಗಲೂ ಸಮಂಜಸವೇ ಸರಿ. ಇದರಿಂದ ಅನೇಕ ತೊಂದರೆಗಳಿದ್ರೂ, ನಮನಿಮಗೆ ದಿನಾ ಹೋರಾಡುವುದಕ್ಕೆ ವಿಷಯ ಬೇಡವೇ? ಹಾಗಾಗಿ ಈ ಮರೆವು ಇದ್ದರೂ ಪರವಾಗಿಲ್ಲ.

ಮತ್ತೊಂದು ಮರೆವಿದೆ. “ಸಾಮಾಜಿಕ ಮರೆವು”. ಹುಟ್ಟಿದಂದಿನಿಂದ ಹೋಗೋವರೆಗೂ ನಾವೆಲ್ಲರೂ ಸಮಾಜದಿಂದ ಏನಾದರೂ ತೊಗೊಳ್ತಾನೇ ಇರ್ತೀವಿ. ಅದು ವಸ್ತುವಾಗಿರಬಹುದು, ವಿಷಯವಾಗಿರಬಹುದು, ವಿದ್ಯೆಯಾಗಿರಬಹುದು, ಅಥವಾ ಬದುಕೇ ಆಗಿರಬಹುದು. ಹೌದು, ನಾವೆಲ್ಲ ಭಾರತೀಯರು ಇಂದು ಅನುಭವಿಸುತ್ತಾ ಇರೋ ನೆಮ್ಮದಿಯ ಸ್ವತಂತ್ರ ಬದುಕು, ಹಿಂದೆ ಎಷ್ಟೋ ವೀರ ಸ್ವಂತಂತ್ರ ಸೇನಾನಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ – ಗಳಿಸಿಕೊಂಡು, ನಮಗೆ ಉಡುಗೊರೆಯಾಗಿ ಕೊಟ್ಟು ಹೋದದ್ದು. ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ, ಗುಲಾಮಗಿರಿಯಿಂದ, ದಾಸ್ಯದಿಂದ ತಾಯಿ ಭಾರತಿಯನ್ನ ಬ್ರಿಟೀಷರ ಸಂಕೋಲೆಗಳಿಂದ ಬಿಡಿಸಿಕೊಳ್ಳುವ ಉದ್ದೇಶ ಸಾಧನೆಗೆ, ಹಟಕ್ಕೆ ಬಿದ್ದವರಂತೆ ಇಡೀ ಜೀವನ ಸವೆಸಿದ್ದಷ್ಟೆ ಅಲ್ಲದೆ ತಮ್ಮ ಪ್ರಾಣಾರ್ಪಣೆಗೈಯುವ ಸಮಯ ಬಂದಾಗ ಅರೆಕ್ಷಣ ಯೋಚಿಸದೇ, ಮುಂದಿನ ಪೀಳಿಗೆಗೆ ಒಂದು ಉದಾತ್ತ ಆದರ್ಶವನ್ನು ಕೊಟ್ಟ ಶ್ರೇಷ್ಠ ಚೇತನಗಳನ್ನ ನೆನೆಯದೆ ಹೋದರೆ ಅದು ” ಅಕ್ಷಮ್ಯ ಅಪರಾಧ”.

ಯುವಬ್ರಿಗೇಡ್ , ಇದೇ ಮಾರ್ಚ್ ೨೩ರ ಬಲಿದಾನ ದಿವಸದಂದು ದೇಶಕ್ಕಾಗಿ ಹೋರಾಡಿ ಹುತಾತ್ಮರಾದವರನ್ನು ನೆನೆಯಲು ” ನಂದಾದೀಪ” ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮನೆಯ ಮುಂದೆ ಪುಟ್ಟ ದೀಪವೊಂದನ್ನು ಬೆಳಗಿ, ಸಾಧ್ಯವಾದರೆ ಅಕ್ಕಪಕ್ಕದ ಮನೆಯವರೊಂದಿಗೋ, ಬಡಾವಣೆಯಲ್ಲೋ, ಅಥವಾ ಪ್ರಮುಖ ಸ್ಥಳಗಳಲ್ಲೋ ” ಭಗತ್ ಸಿಂಗ್, ರಾಜ್‌ಗುರು, ಸುಖದೇವ್” ರ ಭಾವ ಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಿ, ಅವರ ವಿಚಾರಗಳು, ಜೀವನಗಾಥೆಯನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳಿ ಎಂಬ ಕರೆಗೆ ಸಮಸ್ತ ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಿಂದಲೂ ಪ್ರಶಂಸನೀಯ ಪ್ರತಿಕ್ರಿಯೆಗಳು ಬಂದಿತ್ತು. ಬೆಂಗಳೂರಿನಲ್ಲಿ ಅಂದು ಸಂಜೆ ನಡೆದ ಯುವಬ್ರಿಗೇಡ್ನ ಮುಖ್ಯ ಕಾರ್ಯಕ್ರಮದಲ್ಲಿ ನಾವೆಲ್ಲ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದೆವು.

ಮೆಲ್ಲಗೆ ಬಿಸಿಲಿನ ಝಳ ಇಳಿಯುತ್ತಿತ್ತು, ಗಾಳಿ ನೆಲವನ್ನು ತಂಪಾಗಿಸುವ ಹವಣಿಕೆಯಲ್ಲಿತ್ತು. ಮಳೆ ಬರುತ್ತದೆ ಎಂದು “GOOGLE WEATHER REPORT” ಹೆದರಿಸಿ ಕೂರಿಸಿತ್ತು. ಆದರೆ ವರುಣದೇವ ನಮ್ಮೊಡನಿದ್ದ. ಕೋಟಿ ಮನಸುಗಳು ಆಸೆಯಿಂದ ಕೈಗೆತ್ತಿಕೊಂಡಿದ್ದ ಮಹತ್ಕಾರ್ಯವೊಂದನ್ನು ತಾನು ಅಡ್ಡಗಟ್ಟಬಾರದೆಂದು ಅವನೂ ಸಹ ನಿರ್ಧರಿಸಿದಂತಿತ್ತು. ಸೌತ್ ಎಂಡ್ ಸರ್ಕಲ್ಲಿನ ಬಳಿಯಿರುವ, ” ಅಂಬರ ಚುಂಬನ” ಸಂಜೆಗತ್ತಲನ್ನು ಸ್ವಾಗತಿಸಿ ತನ್ನ ಬಣ್ಣಬಣ್ಣದ ಬೆಳಕನ್ನು ಚಿಮ್ಮಿಸುತ್ತಿತ್ತು. ಅದರ ಕೆಳಗೆ ಕೆಲ ಕೈಗಳು ಚಕಚಕನೆ ಪಂಜುಗಳನ್ನು ಸಿದ್ಧಮಾಡುತ್ತಿದ್ದವು. ಆಸಕ್ತ ತರುಣ ತರುಣಿಯರು, ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಊರಿನ ಮೂಲೆಮೂಲೆಗಳಿಂದ ಬಂದು ಸೇರುತ್ತಿದ್ದರು.

” ಭಗತ್ ಸಿಂಗ್, ರಾಜ್ಗುರು, ಸುಖದೇವ್”ರನ್ನು ಇಂದಿಗೆ ಸರಿ ಸುಮಾರು ೮೬ ವರ್ಷಗಳ ಹಿಂದೆ, ಬ್ರಿಟಿಷರು ನ್ಯಾಯಬಾಹಿರವಾಗಿ, ಅಂದರೆ ನ್ಯಾಯಾಲಯ ಗೊತ್ತುಪಡಿಸಿದ್ದಕ್ಕಿಂತ ಒಂದು ದಿನ ಮುಂಚಿತವಾಗಿಯೇ ಕದ್ದುಮುಚ್ಚಿ ಗಲ್ಲಿಗೇರಿಸಿದ್ದರು. ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಭಾರತದ ಪ್ರತಿ ಮನೆಗೂ ಮುಟ್ಟಿಸಿ, ಒಬ್ಬ ಕ್ರಾಂತಿಕಾರಿಯ ಬಲಿದಾನ ನೂರು ಕ್ರಾಂತಿಕಾರಿಗಳ ಉದಯಕ್ಕೆ ಪ್ರೇರಣೆ, ಇಂತಹ ನೂರಾರು ಕ್ರಾಂತಿಕಾರಿಗಳ ಚರಮಗೀತೆಯಲ್ಲಿ ಭಾರತ ಮಾತೆಯ ರಾಷ್ಟ್ರ ಗಾನವು ಮೊಳಗಲಿದೆ ಎಂಬ ಸಂದೇಶವನ್ನು ದೇಶಭಕ್ತರೆಲ್ಲರ ಮನಸ್ಸಿನಲ್ಲಿ ಛಾಪಿಸಿತ್ತು. ಹುತಾತ್ಮರಾದವರ ವಯಸ್ಸು ೨೫ನ್ನೂ ದಾಟಿರಲಿಲ್ಲ. ಅವರ ವಿಚಾರಗಳು ಇಂದಿನ ತರುಣರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಈ ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಸುಮಾರು ೭.೩೦ರ ಹೊತ್ತಿಗೆ, ೪೦೦ಕ್ಕೂ ಹೆಚ್ಚು ಯುವಕ ಯುವತಿಯರು ಅಲ್ಲಿ ನೆರೆದಿದ್ದೆವು. “ಅಂಬರ ಚುಂಬನ” ಮುಗಿಲಿಗೆ ರಂಗನ್ನು ಚೆಲ್ಲುತ್ತಿದ್ದರೆ, ನೆರೆದಿದ್ದವರ ಜೈಘೋಷಗಳು ಮುಗಿಲನ್ನು ಝೇಂಕಾರದಿಂದ ತುಂಬುತ್ತಿತ್ತು. “ಭಾರತ್ ಮಾತಾಕೀ ಜೈ, ವಂದೇ ಮಾತರಂ, ಭಾರತ್ ಕೀ ರಕ್ಷಾ ಹಮ್ ಕರೆಂಗೆ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ” ಇನ್ನೂ ಮುಂತಾದ ಘೋಷಗಳು ನೆರೆದಿದ್ದವರ ಎದೆಯಲ್ಲಿ ದೇಶ ಭಕ್ತಿಯ ತರಂಗಗಳನ್ನೆಬ್ಬಿಸುತ್ತಿತ್ತು. ಅದೇ ವೇಗದಲ್ಲಿ ಪಂಜುಗಳು ಚಕಚಕನೆ ಹೊತ್ತಿಕೊಂಡವು. ಅದನ್ನು ಮುಗಿಲೆತ್ತರಕ್ಕೆ ಹಿಡಿಯುವಂತೆ ಕೈಗಳನ್ನು ಎತ್ತಿ, ಜೈಕಾರಗಳ ಉನ್ಮಾದದಲ್ಲಿ ಶಿಸ್ತಿನ ತರುಣರ ಪಂಜಿನ ಮೆರವಣಿಗೆ ಶುರುವಾಗಿತ್ತು. ವಾಹನಗಳ ಓಡಾಟಕ್ಕೆ ತೊಂದರೆಯಾಗದಂತೆ, ರಸ್ತೆಯ ಒಂದು ಬದಿಯಲ್ಲಿ ಮೆರವಣಿಗೆಯ ಸಾಲುಗಳು ಹರಿಯುತ್ತಿದ್ದರೆ, ಆ ಸುಂದರ ದೃಶ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಆಸಕ್ತರು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಕೆಲ ಉತ್ಸಾಹಿಗಳು ನಮ್ಮ ಘೋಷಗಳ ಜೊತೆಗೆ ಅವರನ್ನು ತೊಡಗಿಸಿಕೊಂಡು ಸಂಭ್ರಮಿಸುತ್ತಿದ್ದರು.

ಭಾರತವನ್ನು ಒಡೆಯುವ ಕುತಂತ್ರಿಗಳಿಗೆ ಕೇವಲ ಹಣ, ಅಥವಾ ಕುಮ್ಮಕ್ಕು ಸಿಗಬಹುದು, ಆದರೆ ತಾಯಿ ಭಾರತಿಯನ್ನು ನಾವೇ ಮುಂದೆ ನಿಂತು ರಕ್ಷಿಸುತ್ತೇವೆ ಎನ್ನುವವರಿಗೆ ಈ ಮಣ್ಣಿನ ಮಕ್ಕಳ ಪ್ರೀತಿ ಒತ್ತಾಸೆ ಬೆಂಬಲ ಸದಾ ಬೆನ್ನಿಗಿದ್ದೇ ಇರುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ. ಈ ಮಣ್ಣಿನಲ್ಲೇ ಅಲ್ಲವೇ ಎಲ್ಲ ಜಾತಿ ಮತ ಧರ್ಮಗಳವರು ಆಡಿ ಬೆಳೆದಿದ್ದು? ಪ್ರೀತಿಯ ಮಡಿಲು ಎಂದರೆ ಹೆತ್ತಮ್ಮನ ಜೊತೆಗೆ ನೆನಪಾಗುವುದು ನೆಲದಮ್ಮ ಅಲ್ಲವೇ? ಅಮ್ಮ ಎಂದರೆ ಎಲ್ಲರಿಗೂ ಪ್ರೀತಿ ಒಂದು ಹಿಡಿ ಹೆಚ್ಚೇ ಅಲ್ಲವೇ? ಭಾರತ ಮಾತೆಗೆ ಜೈ ಎಂದಾಗ, ಮೇಲೆ ವಿರೋಧಿಸಿದರೂ ಎದೆಯಾಳದಲ್ಲಿ ಗೌರವಿಸದೆ ಇರುವವರು ಇರುವುದಿಲ್ಲ ಅಲ್ಲವೇ?

ಪಂಜಿನ ಬೆಳಕು ತರುಣರ ತಂಡದ ಸಂಭ್ರಮದ ಹೆಜ್ಜೆಗಳಿಗೆ ದಾರಿ ತೋರುತ್ತಿದ್ದವು. ಮನದಲ್ಲಿ ರಾಷ್ಟ್ರಭಕ್ತಿಯ ಆವಾಹನೆಯಾಗುತ್ತಿತ್ತು. ನೆರೆದಿದ್ದ ಸಾರ್ವಜನಿಕರ ಎದೆಯಲ್ಲೂ ಮೆರವಣಿಗರ ಅಮಿತೋತ್ಸಾಹ, ದೇಶಭಕ್ತಿಯ ಕಿಚ್ಚನ್ನು ಹೊತ್ತಿಸುವಂತಿತ್ತು. ಸುಮಾರು ಅರ್ಧ ಗಂಟೆಯ ಮೆರವಣಿಗೆ ” ವಿದ್ಯಾಶ್ರೀ” ಶಾಲೆಯ ಆವರಣವನ್ನು ತಲುಪಿತ್ತು. ಗುರಿ ತಲುಪಿದ ಎಲ್ಲ ತರುಣರ ಮುಖದಲ್ಲೂ ಹೂವೊಂದನ್ನು ಭಕ್ತಿ ಗೌರವಗಳಿಂದ ತಾಯಿಗೆ ಅರ್ಪಿಸಿದ್ದೇವೆಂಬ ಧನ್ಯತಾ ಭಾವ ಮೂಡಿತ್ತು.

ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಡಾ. ದೇವಾ ರವರು,” ಇಂತಹ ಅಪುರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸುತ್ತಾ, ನೆರೆದಿದ್ದವರಿಗೂ, ಪಾಲ್ಗೊಂಡವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಅನಂತರ ಅಂದಿನ ಮುಖ್ಯ ಭಾಷಣದಲ್ಲಿ ಚಕ್ರವರ್ತಿ ಅಣ್ಣ, ಭಗತ್ಸಿಂಗರ ಜೀವನವನ್ನು ನಮ್ಮ ಕಣ್ಣಿಗೆ ಕಟ್ಟುವ ಹಾಗೆ, ಮನಸ್ಸನ್ನು ಮುಟ್ಟುವ ಹಾಗೆ ಬಣ್ಣಿಸಿದರು.

ನಮ್ಮ ದೇಶ ಅನೇಕ ಲಕ್ಷ ಮಹಾತ್ಮರನ್ನು ಕಂಡಿದೆ. ಕಾಲಕಾಲಕ್ಕೆ, ಅಗತ್ಯವಿದ್ದಲ್ಲೆಲ್ಲ ಅವಶ್ಯವಿದ್ದಷ್ಟು ಮಹಾಪುರುಷರು ಈ ನೆಲದಲ್ಲಿ ಅವತರಿಸಿದ್ದಾರೆ. ಅವರಲ್ಲಿ ಕೆಲವರು ಶ್ರೇಷ್ಟ ಜ್ಞಾನಿಗಳು, ಮತ್ತೆ ಕೆಲವರು ಶ್ರೇಷ್ಟ ಸೈನಿಕರು. ಆದರೆ, ” ಬ್ರಾಹ್ಮ – ಕ್ಷಾತ್ರ ” ತೇಜಸ್ಸುಗಳೆರೆಡರ ಅಪೂರ್ವ ಸಂಗಮದಂತೆ ಅವತರಿಸಿದ ಶ್ರೀ ಕೃಷ್ಣ, ಚಾಣಕ್ಯರ ಸಾಲಿನಲ್ಲಿ ನಿಲ್ಲಬಲ್ಲ ಮತ್ತೊಬ್ಬ ಪ್ರಚಂಡ ‘ ಭಗತ್ ಸಿಂಗ್. ಯುದ್ಧದಲ್ಲಿ ಶಸ್ತ್ರ ಹಿಡಿಯುವುದಕ್ಕಷ್ಟೇ ಅಲ್ಲ, ಅಗತ್ಯ ಬಿದ್ದಾಗ ಶಾಸ್ತ್ರಗಳನ್ನೂ ಬಳಸಿಕೊಂಡು, ಸಮಯ ಸ್ಪೂರ್ತಿಯಿಂದ ಕಾರ್ಯಸಾಧನೆ ಮಾಡಿಕೊಳ್ಳುವವರಲ್ಲಿ ಇವರೆಲ್ಲ ಮುಂಚೂಣಿಯವರು.

ಮಧುರವಾದ ಪರಿಮಳವನ್ನು ಚೆಲ್ಲುವ ಹೂವು ಅರಳಲು ಹೇಗೆ ಗಿಡದ ಆಸರೆ ಬೇಕೋ ಹಾಗೆಯೇ, ವ್ಯಕ್ತಿಯ ಸಾಧನೆಯಲ್ಲಿ ಸ್ವಸಾಮರ್ಥ್ಯದ ಜೊತೆಗೇ ಕುಟುಂಬವು ಕೂಡ ಅವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ನೆರವಾಗುತ್ತದೆ. ಭಗತ್ಸಿಂಗ್ರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿತ್ತು. ತಂದೆ ” ಕಿಶನ್ಸಿಂಗ್ ತಾವು ಮುನ್ನೆಲೆಗೆ ಬಾರದೆ, ಭೂಗತರಾಗಿ ಚಟುವಟಿಕೆ ಮಾಡುತ್ತಿದ್ದ ಸೈನಿಕರಿಗೆ ಆಶ್ರವನ್ನು ಕೊಟ್ಟು ಕ್ರಾಂತಿಕಾರ್ಯಕ್ಕೆ ಸಹಕಾರ ನೀಡುತ್ತಿದ್ದರು. ಚಿಕ್ಕಪ್ಪಂದಿರಾದ ಸ್ವರ್ಣಸಿಂಗ್ ಮತ್ತು ಅಜಿತ್ಸಿಂಗ್ರಂತೂ ತಾವೇ ಸ್ವತಹ ಚಳುವಳಿಗಳಲ್ಲಿ ಭಾಗಿಯಾಗುತ್ತಿದ್ದರು. ಸ್ವರ್ಣಸಿಂಗ್, ಕನಸಿನಲ್ಲೆಲ್ಲಿ ಬಂದು ಕಾಡುತ್ತಾನೋ ಎಂದು ಹೆದರಿ ಹೆದರಿ ಬ್ರಿಟಿಷರು ನಿದ್ದೆ ಮಾಡುವುದನ್ನೇ ಮರೆತಿದ್ದರು. ಕೊನೆಗೆ ಕುತಂತ್ರದಿಂದ ಅವರನ್ನು ಬಂಧಿಸಿ, ಚಿತ್ರ ಹಿಂಸೆ ಕೊಟ್ಟು, ನರಕಯಾತನೆಗೀಡು ಮಾಡಿ, ತನ್ನ ೨೩ ನೆಯ ವಯಸ್ಸಿಗೆ ಹೀಗೆ ಬ್ರಿಟಿಷರ ನಿದ್ದೆಗೆಡಿಸಿದ್ದ ವೀರನನ್ನು ಹೀನಾಯವಾಗಿ ಕೊಂದು ತಮ್ಮ ವಿಕೃತಿಯನ್ನು ಮೆರೆದಿದ್ದರು.

ಹೀಗೆ ಸ್ವಂತಂತ್ರ್ಯ ಹೋರಾಟದ ಜಪದಲ್ಲಿ ತೊಡಗಿದ್ದವರ ವಂಶದಲ್ಲಿ ” ಅಪ್ಪಾ, ಈ ಬಾರಿ ಹೊಲದಲ್ಲಿ ಗೋಧಿಯ ಬದಲಿಗೆ, ಬಂದೂಕಿನ ಬೀಜವನ್ನು ನೇಡೋಣ, ಗೋಧಿ ತೆನೆಯಲ್ಲಿ ಕಾಳುಗಳು ಮೊಳೆಯುವಂತೆ ಬಂದೂಕುಗಳು ಮೊಳೆಯುತ್ತವೆ, ಅದನ್ನು ಬಳಸಿಕೊಂಡರೆ ಸ್ವತಂತ್ರ ಹೋರಾಟಕ್ಕೆ ಇನ್ನೂ ಹೆಚ್ಚಿನ ಬಲ ಸಿಗುತ್ತದೆ” ಎಂದಿದ್ದ ಸಿಂಹದ ಮರಿಯಲ್ಲದೆ ಮತ್ತಾರು ಹುಟ್ಟಲಿಕ್ಕೆ ಸಾಧ್ಯ. ಇಂತಹ ಹೋರಾಟದ ದಾಹವಿದ್ದ ಸಿಂಹಕ್ಕೆ ಸ್ಪೂರ್ತಿ ಮತ್ತೊಬ್ಬ ದೇಶಪ್ರೇಮೀ ಕರ್ತಾರ್ಸಿಂಗ್. ಅಮೇರಿಕದಲ್ಲಿ ದೇಶಪ್ರೇಮಿ ಸಿಖ್ಖರು ಸ್ಟಾಪಿಸಿದ್ದ ಘದರ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅನೇಕ ರೀತಿಯ ಹೋರಾಟಗಳ ಅರಿವಿದ್ದ ೧೬ ವರ್ಷದ ಕರ್ತಾರ್ಸಿಂಗ್, ಭಾರತಕ್ಕೆ ಬಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ. ಈ ಸಿಂಹದ ಆರ್ಭಟವನ್ನು ಹತ್ತಿಕ್ಕಲಾರದೆ ತೊಳಲಾಡಿದ ಬ್ರಿಟಿಷರು, ಹೊಸದೊಂದು ಷಡ್ಯಂತ್ರವನ್ನು ಹೆಣೆದು ಬಂಧಿಸಿ, ಅವನ ವಯಸ್ಸನ್ನೂ ಲೆಕ್ಕಿಸದೆ ಮರಣ ದಂಡನೆ ವಿಧಿಸಿದ್ದರು. ಬಂಧೀಖಾನೆಯಲ್ಲಿ ಅನುಭವಿಸುತ್ತಿದ್ದ ತರತರದ ಶಿಕ್ಷೆಗಳಿಗೆ ಬಳಲಿ, ಬೆಂಡಾಗಿ, ಸಾಯುವ ಮುನ್ನಿನ ಕೊನೆಯ ದಿನಗಳಲ್ಲಿಯೇ ನರಕದ ದರ್ಶನ ಮಾಡಿ, ಈ ಬದುಕು ಸಾಕು ಎಂದು ಚಡಪಡಿಸುತ್ತಿದ್ದವರ ನಡುವೆ ಅದೇ ಶಿಕ್ಷೆಯನ್ನು ಅನುಭವಿಸುತ್ತಾ, ” ಹೊರಗೆ ಬಹಳ ಕೆಲಸದೊತ್ತಡವಿತ್ತು, ಸಂಗ್ರಾಮವನ್ನು ಮುನ್ನಡಸಬೇಕಾದ ಜವಾಬ್ದಾರಿಗಳಿದ್ದವು. ಆದರೆ ಈಗ ಜೈಲಿನಲ್ಲಿ ಏನೂ ಒತ್ತಡವಿಲ್ಲ, ತಿಂದುಂಡು ಅರಾಮಗಿದ್ದೆ” ಎಂದು ನಗುನಗುತ್ತಾ ನೇಣುಕುಣಿಕೆಗೆ ಶರಣಾದ ಕೇಸರಿಯನ್ನು ಆದರ್ಶವಾಗಿರಿಸಿಕೊಂಡಿದ್ದ ಭಗತ್, ತನ್ನ ೨೦ನೆಯ ವಯಸ್ಸಿಗೆ ವಿಶ್ವದಾದ್ಯಂತ ನಡೆದಿದ್ದ ಅನೇಕ ಹೋರಾಟಗಳ ಸ್ವರೂಪವನ್ನು ಚೆನ್ನಾಗಿ ಅಭ್ಯಸಿಸಿದ್ದ. ನಮ್ಮ ಹೋರಾಟದ ಹಾದಿ ಹೀಗಿರಬೇಕು ಎಂಬ ಸ್ಪಷ್ಟ ನಿಲುವನ್ನು ತಾಳಿದ್ದ. ” ಲಾಲ ಲಜಪತ್ ರಾಯ್ ರನ್ನು ಅಕಾರಣವಾಗಿ ಕೊಂದ ಸ್ಕಾಟ್ನನ್ನು ಹತ್ಯೆಗೈಯುವ ಯೋಜನೆಯನ್ನು ರೂಪಿಸಿ, ಅವನನ್ನು ಕೊಂದದ್ದೇಕೆ ಎಂಬುದು ಎಲ್ಲರಿಗೂ ಗೊತ್ತಾಗಬೇಕೆಂದು ಹತ್ಯೆಯ ಉದ್ದೇಶವನ್ನು ಕರಪತ್ರಗಳಲ್ಲಿ ಬರೆದು ಆ ಪತ್ರಗಳನ್ನು ಹತ್ಯಾ ನಂತರ ಊರಲ್ಲೆಲ್ಲ ಹಂಚಿ ಬಂದಿದ್ದ. ಆದರೆ ಸತ್ತದ್ದು ಸ್ಕಾಟ್ ಅಲ್ಲ ಸಾಂಡರ್ಸ್ ಎಂದು ತಿಳಿದಾಗ ಮತ್ತೆ ಊರಿನೊಳಕ್ಕೆ ನುಸುಳಿ ಆ ಕರಪತ್ರಗಳಲ್ಲಿ ಸ್ಕಾಟ್ನ ಹೆಸರನ್ನು ಅಳಿಸಿ ಸಾಂಡರ್ಸ್ನ ಹೆಸರನ್ನು ಬರೆದು, ಬ್ರಿಟಿಷರಿಗೆ ಸಿಗದೆ ಪರಾರಿಯಾಗಿದ್ದ ಅಸಾಮಾನ್ಯ ಚತುರ. ಇಂತಹ ಉದಾಹರೆಣೆಗಳು ಅದೆಷ್ಟೋ ಇದ್ದರೂ, ಭಗತ್ ಪ್ರತ್ಯೇಕವಾಗಿ ನಿಲ್ಲುವುದು ಅವನ ವಿಚಾರಶೀಲತೆಯಿಂದ. ಆಸಕ್ತಿಯಿಂದ ಬೆಳೆಸಿಕೊಂಡಿದ್ದ ಸಾಹಿತ್ಯದ ರುಚಿ ಅವನನ್ನೊಬ್ಬ ಉತ್ತಮ ಬರಹಗಾರನನ್ನಾಗಿಯೂ, ಪ್ರಖರ ವಾಗ್ಮಿಯನ್ನಾಗಿಯೂ ಅರಳಿಸಿತ್ತು, ಅಷ್ಟೇ ಅಲ್ಲ ಭಾರತ ಸ್ವಾತಂತ್ರ್ಯ ಗಳಿಸಲು ಸಾಗಬೇಕಾದ ದಾರಿಯೆಡೆಗೆ ಅವನನ್ನು ಸೆಳೆದೊಯ್ಯುತ್ತಿತ್ತು.

ಅಲ್ಲಿಯವರೆಗೂ “ HIT AND RUN POLICY” ಯನ್ನು ಪಾಲಿಸುತ್ತಿದ್ದ ಕ್ರಾಂತಿಕಾರಿಗಳಿಗೆ, ಭಗತ್ ಹೊಸದೊಂದು ಆಲೋಚನೆ ತೇಲಿಬಿಟ್ಟ. ಯಾರಿಗೂ ತೊಂದರೆಯಾಗದಂತೆ ಪಾರ್ಲಿಮೆಂಟಿನಲ್ಲಿ ನಾಡ ಬಾಂಬನ್ನು ಎಸೆದು, ಪೊಲೀಸರಿಗೆ ಶರಣಾಗಿ, ಕೋರ್ಟಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿ ಅದನ್ನು ಸಾಧ್ಯವಾದಷ್ಟರ ಮಟ್ಟಿಗೆ ವಿಶ್ವದೆಲ್ಲೆಡೆ ತಲುಪಿಸಿ, ಸಮಾನ ಮನಸ್ಕರೆಲ್ಲರ ಸಹಾಯ ಪಡೆಯಬಹುದು ಮತ್ತು ರಾಷ್ಟ್ರೀಯ – ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರಾಂತಿಯ ಸ್ವರೂಪವನ್ನು ಪರಿಚಯಿಸಬಹುದು ಎಂಬ ಭಗತ್ನ ಯೋಜನೆ ಕಾರ್ಯ ರೂಪಕ್ಕೆ ಬಂದಿತ್ತು. ಅವನ ಜೊತೆ ” ರಾಜ್‌ಗುರು, ಮತ್ತು ಸುಖ್ ದೇವ್ ” ಸಹ ಈ ಹೊಸ ಹೋರಾಟದ ದಿಕ್ಕಿಗೆ ಪಂಜುಗಳಾಗಿ ನಿಲ್ಲಲು ತಮ್ಮನ್ನು ಸಮರ್ಪಿಸಿಕೊಂಡು, ಭಗತ್ ನ ವಿಚಾರಗಳನ್ನು ಎಲ್ಲರಿಗೂ ತಲುಪಿಸಲು ಸಾಧನಗಳಾದರು. ಯೋಜನೆಯಂತೆ ಬಾಂಬನ್ನು ಎಸೆದು, ಪೊಲೀಸರಿಗೆ ಶರಣಾದರು. ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು, ತಾರತಮ್ಯ ನೀತಿ,ಮೂಲಭೂತ ಸೌಲಭ್ಯಗಳ ಕೊರತೆ ಮುಂತಾದ ಅಂಶಗಳನ್ನು ವಿರೋಧಿಸಿ ಅವುಗಳನ್ನು ಸರಿಪಡಿಸುವವರೆಗೂ ಆಮರಣಾಂತ ಉಪವಾಸವನ್ನು ಕೈಗೊಂಡು ಸರ್ಕಾರದ ಕಣ್ಣು ತೆರೆಸಿದರು. ೮೫ ದಿನಗಳ ಕಾಲ ನಡೆದ ಈ ಸತ್ಯಾಗ್ರಹದಲ್ಲಿ ದೇಶದಾದ್ಯಂತ ಸೆರೆಮನೆಗಳಲ್ಲಿದ್ದ ಸಾವಿರಾರು ಮಂದಿ ಪಾಲ್ಗೊಂಡರು. ಜತಿನ್ ದಾ ಸೇರಿದಂತೆ ಅನೇಕರು ಈ ಹೋರಾಟದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದರು. ಈ ಸತ್ಯಾಗ್ರಹ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ಗ್ರಹಿಸಿದ ಅಧಿಕಾರಿಗಳು, ಇವರ ಬೇಡಿಕೆಗಳನ್ನು ಈಡೇರಿಸಲೇಬೇಕಾಗಿ ಬಂತು. ಭಗತ್ನ ಜನಪ್ರಿಯತೆ ಉತ್ತುಂಗಕ್ಕೆ ಏರತೊಡಗಿತು.

ಭಗತ್ ನಿಗೆ ಇನ್ನೂ ಹೆಚ್ಚು ಕಾಲವಾಕಾಶ ಕೊಟ್ಟರೆ ಸ್ವಾತಂತ್ರ್ಯ ಹೋರಾಟ ತೀವ್ರವಾಗುವುದರಲ್ಲಿ ಅನುಮಾನವೇ ಇರಲಿಲ್ಲ. ಮಂದಗಾಮಿಗಳಾಗಿ ಹೋರಾಟ ಮಾಡುತ್ತಿದ್ದವರು ಭಗತ್ ಸಿಂಗ್ ನ ಕ್ರಾಂತಿಯ ವಿಚಾರದೆಡೆಗೆ ಧಾವಿಸಿದರೆ, ತಾವು ಭಾರತವನ್ನು ಇನ್ನೂ ಬೇಗ ತೊರೆಯಬೇಕಾಗುತ್ತದೆ ಎಂಬ ಸುಳಿವು ಹಿಡಿದ ಬ್ರಿಟಿಷರು ” ಪಾರ್ಲಿಮೆಂಟಿನಲ್ಲಿ ಬಾಂಬ್ ಎಸೆದು ಜೀವ ಹಾನಿಗೆ ಪ್ರಯತ್ನಿಸಿದರು ಎಂಬ ಕಾರಣವನ್ನು ಒಡ್ಡಿ ಮೂವರನ್ನೂ ಮರಣ ದಂಡನೆಗೆ ಗುರಿಪಡಿಸಿದರು. ಮಾರ್ಚ್ ೨೪, ೧೯೩೧ ಕ್ಕೆ ನಿಗದಿಯಾಗಿದ್ದ ಶಿಕ್ಷೆಯನ್ನು ಕೊನೆಕ್ಷಣದಲ್ಲಿ ಆಗಬಹುದಾದ ಹೋರಾಟ ಹಕ್ಕೊತ್ತಾಯಗಳಿಗೆ ಹೆದರಿ ೧ ದಿನ ಮುಂಚಿತವಾಗಿಯೇ ಜಾರಿಗೊಳಿಸಿಬಿಟ್ಟರು.

ಕಾಲಕ್ರಮೇಣ ದೇವರು, ಧರ್ಮದ ಹುಡುಕಾಟದಲ್ಲಿದ್ದವನ ವಿಚಾರಗಳು ಪಾಶ್ಚಿಮಾತ್ಯ ಚಿಂತನೆಗಳ ಕಡೆಗೆ ಹರಿದು ” ತಾನೊಬ್ಬ” ನಾಸ್ತಿಕ ಎಂದು ಹೇಳಿಕೊಂಡದ್ದನ್ನೇ ಉಬ್ಬಿಸಿ ಹೇಳಿ, ಅವನೊಬ್ಬ ಹಿಂದೂ ಧರ್ಮ ವಿರೋಧಿ ಎಂದು ಪ್ರಚಾರ ಮಾಡಿಟ್ಟಿರುವ ಕಮ್ಮುನಿಷ್ಟರು, ಹುಟ್ಟಿನಿಂದ ಆರ್ಯ ಸಮಾಜಿಯಾಗಿದ್ದ ಭಗತ್, ಯಾವೊಬ್ಬ ಆರ್ಯ ಸಮಾಜಿಯೂ ನಾಸ್ತಿಕನಾಗಲಾರ ಎಂದು ಹೇಳಿಕೊಂಡಿದ್ದನ್ನು ಮಾತ್ರ ಅಪ್ಪಿ ತಪ್ಪಿಯೂ ನೆನೆಯುವುದಿಲ್ಲ. ಭಗವಂತನನ್ನು ನಂಬದವ ನಾಸ್ತಿಕನಲ್ಲ – ಸತ್ಯ, ಅಹಿಂಸೆಯನ್ನು ಪಾಲಿಸದವನು, ದಯೆ, ಅನುಕಂಪಗಳನ್ನು ತೋರದವನು ನಾಸ್ತಿಕ ಎನ್ನುವ ನಿಜಾರ್ಥದ ಅರಿವು ಅವರಿಗೆಲ್ಲಿಂದ ಬರಬೇಕು.

ರಾಜ್‌ಗುರು, ಸುಖ್ದೇವ್, ರಾಮಪ್ರಸಾದ್ ಬಿಸ್ಮಿಲ್, ಅಶ್ವಖುಲ್ಲಾ ಖಾನ್, ಚಂದ್ರ್ ಶೇಖರ್ ಆಜ಼ಾದ್, ದುರ್ಗ ಭಾಬಿ ಇನ್ನೂ ಮುಂತಾದವರ ಸಿಂಹ ಸೈನ್ಯದಲ್ಲಿದ್ದ ಒಂದೊಂದು ಸಿಂಹದ ಕಥೆಯೂ, ಒಂದು ಗ್ರಂಥಕ್ಕಾಗುವಷ್ಟು ವಿಚಾರಗಳನ್ನು ನಮ್ಮ ಪೀಳಿಗೆಗೆ ತಲುಪಿಸಬಲ್ಲವು” ಎಂದು ಅಣ್ಣ ಮಾತುಗಳನ್ನು ಮುಗಿಸಿದ ನಂತರವೂ ನಾವಿನ್ನೂ ಆ ಗುಂಗಿನಿಂದ ಹೊರ ಬಂದಿರಲೇ ಇಲ್ಲ.

ಒಂದು ದೀಪ ಹಚ್ಚಿ ಬಿಟ್ಟರೆ ಏನು ದೇಶ ಉಧ್ಧಾರವಾಗಿಬಿಡುತ್ತಾ? ಎಂದು ಆಡಿಕೊಂಡು ನಕ್ಕವರಿಗೆ, ಒಂದೇ ದೀಪದಿಂದ ಹೊತ್ತಿಕೊಂಡು ನೂರಾರು ಸಾವಿರಾರು ಜ್ಯೋತಿಗಳಾಗಿ ಹರಡಿ, ವಿಚಾರ ಕ್ರಾಂತಿಯನ್ನು ದಿಗಂತದೆಲ್ಲೆಡೆ ಹರಡಬಹುದೆಂಬ ಸತ್ಯ ಬಹು ಬೇಗನೆ ಅರಿವಾಗಲಿದೆ. ಕೋಟಿ ಮನಸುಗಳು ಎಚ್ಚರದಿಂದ ಮುನ್ನುಗ್ಗುತಲಿರುವಾಗ, ಸುಂದರ ಸಧೃಢ ಭಾರತದ ಕನಸು ಕಾಣುತ್ತಲಿರುವಾಗ, ಭಗತ್ಸಿಂಗ್,ರಾಜ್‌ಗುರು, ಸುಖ್ದೇವ್, ಮತ್ತೆಲ್ಲ ರಾಷ್ಟ್ರ ಸಮರ್ಪಿತಾತ್ಮರು ಆಶೀರ್ವದಿಸಿದರೇನೋ ಎಂಬಂತೆ ನಾವು ಹೊರಡಿಸುತ್ತಿದ್ದ ಭಾರತ್ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳು ಆಗಸವನ್ನು ಮುತ್ತಿಕ್ಕಿ ಮಾರ್ದನಿಸುತ್ತಿದ್ದವು. ದೇಶದ ನೆಮ್ಮದಿಯ ಇಂದಿಗಾಗಿ ತಮ್ಮ ಪ್ರಾಣ ನಿವೇದನೆಗೈದವರ ಸ್ಮರಣೆ ನೆರೆದಿದ್ದವರೆದೆಯಲ್ಲಿ ಪ್ರಜ್ವಲಿಸುತ್ತಿತ್ತು, ಎಲ್ಲರ ಮನದೊಳಗೊಂದು ಪುಟ್ಟ ನಂದಾದೀಪ ಬೆಳಗುತ್ತಿತ್ತು.

[ಯುವಾ ಬ್ರಿಗೇಡ್ ಕಡೆಯಿಂದ ರಾಜ್ಯವ್ಯಾಪಿ ಎಲ್ಲ ಜಿಲ್ಲೆಗಳಲ್ಲಿ ನಂದಾದೀಪ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿತು]

 

ವಂದೇ ಮಾತರಂ,

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post

“ನಿವೇದನಾ”

ದೇಶಭಕ್ತಿ ಅಂದ್ರೆ ಏನು? ಸುಮ್ನೆ ಹೀಗೆ ಘೋಷಣೆ ಕೂಗೋದಾ? ಒಂದು ಹತ್ತು ಜನರನ್ನ ಗುಂಪು ಹಾಕಿಕೊಂಡು, ಮೈಕಿನ ಮುಂದೆ ನಿಂತು ಭಾಷಣ ಕುಟ್ಟೋದ ? ದೇಶ – ಅದಕ್ಕೊಂದು ಇತಿಹಾಸ ಅಂತೆಲ್ಲ ಇಲ್ಲದೆ ಇರೋ ಕತೆ ಕವನ ಹೇಳೋದಾ? ಮಾತಿಗೆ ಮುಂಚೆ…
View Post

ಏಕತೆಗಾಗಿ‌ ಭಗತ್

ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.…
View Post

ದಿಗ್ವಿಜಯ ದಿವಸ್ – ಪಕ್ಷಿನೋಟ

ಅಂದು ಸೋಮವಾರ.. ದಿನಾಂಕ 11, ಸೆಪ್ಟೆಂಬರ್ 1893ನೇ ಇಸವಿ. ಅಮೆರಿಕಾದ ಚಿಕಾಗೋ ನಗರದಲ್ಲಿ ಏರ್ಪಡಿಸಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಭಾರತದ ಅಸ್ಮಿತೆಯನ್ನು ವಿಶ್ವದ ಮುಂದೆ ಎತ್ತಿಹಿಡಿಯಲು ಕೇಸರಿ ಸಿಂಹವೊಂದು ವೇದಿಕೆಯಲ್ಲಿ ತಲೆಯೆತ್ತಿ ನಿಂತಾಗ ಈ ದಿನ, ಭಾರತೀಯರ ಪಾಲಿಗೆ ‘ದಿಗ್ವಿಜಯದ ದಿನ’ವಾಗುತ್ತದೆಂಬ…
View Post