YuvaBrigade Jala Jana

ಜಲ ಜನ ಸಂಪರ್ಕ ಸೇತು

ಹನಿ ಹನಿ ನೀರೂ ಅಮೂಲ್ಯ - ಬನ್ನಿ, ನೀರು ಉಳಿಸೋಣ.

ಮುಂದಿನ ಯುದ್ಧವೇನಾದರೂ ಆಗುವುದಿದ್ದರೆ ಅದು ನೀರಿಗಾಗಿ ಮಾತ್ರ, ಅದಕ್ಕೆ ಅವಕಾಶ ಕೊಡದಿರೋಣ.

ನೀರು ಉಳಿಸಲು ಕೆಲವೊಂದು ಉಪಾಯಗಳು :

1.  ಸ್ನಾನ ಮಾಡಲು ಯಥೇಚ್ಛವಾಗಿ ನೀರನ್ನು ಬಳಸದೇ ಒಂದೇ ಒಂದು ಬಕೆಟ್‍ಗೆ ಸೀಮಿತಗೊಳಿಸೋಣ.
2. ವಾಟರ್ ಪ್ಯೂರಿಫಯರ್ ನಿಂದ ಹೊರಬರುವ ನೀರನ್ನು ಸಿಂಕಿಗೆ ಬಿಡದೇ ಪಾತ್ರೆ ತೊಳೆಯಲು ಉಪಯೋಗಿಸೋಣ.
3. ಸೋರುತ್ತಿರುವ ನಲ್ಲಿಗಳನ್ನು ಮತ್ತು ಫ್ಲಶ್ ಟ್ಯಾಂಕ್‍ಗಳನ್ನು ಈ ಕೂಡಲೇ ರಿಪೇರಿ ಮಾಡಿಸೋಣ.
4. ಶೌಚಾಲಯದ ಬಳಕೆಗೆ ಕಮೋಡ್‍ಗಿಂತಾ ಇಂಡಿಯನ್ ಟಾಯ್ಲೆಟ್ ಬಳಸಿ ಯಥೇಚ್ಛ ನೀರಿನ ಬಳಕೆಯನ್ನು ತಪ್ಪಿಸೋಣ.
5. ಸಂಪು ಅಥವಾ ಕೊಳವೆ ಬಾವಿಯಿಂದ ನೀರನ್ನು ಓವರ್ ಹೆಡ್ ಟ್ಯಾಂಕ್‍ಗೆ ಪಂಪ್ ಮಾಡುವಾಗ ಟ್ಯಾಂಕ್ ತುಂಬಿ ಸುರಿಯುವುದನ್ನು ತಪ್ಪಿಸೋಣ.
6. ಬಟ್ಟೆಗಳನ್ನು ಎಷ್ಟು ಬೇಕಾದರೂ ಬೇಕಾಬಿಟ್ಟಿ ಬಳಸಿ ತೊಳೆಯಲು ಹಾಕುವುದಕ್ಕಿಂತಾ ಯಥೋಚಿತವಾಗಿ ಅವಶ್ಯಕತೆ ಇರುವಷ್ಟು ಮಾತ್ರ ಬಳಸೋಣ.
7. ವಾಷಿಂಗ್ ಮೆಷೀನ್‍ನಲ್ಲಿ ಬಟ್ಟೆ ಒಗೆಯುವಾಗ ಪೂರ್ತಿ ಮೆಷನ್ ಸಾಮಥ್ರ್ಯವನ್ನು ಬಳಸಿಕೊಳ್ಳೋಣ. ಅಂದರೆ 2-3 ಜೊತೆ ಬಟ್ಟೆಗೋಸ್ಕರ ಮೆಷಿನ್
   ಬಳಸುವುದು ಬೇಡ.
8. ಪೈಪ್ ಹಿಡಿದು ಕಾರು ತೊಳೆಯುವ ಕೆಟ್ಟ ಬುದ್ಧಿಯನ್ನು ಬಿಟ್ಟು ಬಕೀಟ್ ನಲ್ಲಿ ನೀರು ತುಂಬಿಸಿ ಕಡಿಮೆ ನೀರಿನಲ್ಲಿ ಕಾರು ಬೈಕ್ ಮತ್ತಿತರ
   ವಾಹನಗಳನ್ನು ತೊಳೆಯೋಣ.
9. ಮೂತ್ರ ವಿಸರ್ಜನೆಗೆ ಕಮೋಡ್ ಬಳಕೆಗಿಂತಾ ಯೂರಿನಲ್ಸ್‍ಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡೊಣ.
10. ತಾರಸಿ ಮೇಲೆ ಬೀಳುವ ಶುದ್ಧ ಮಳೆಯ ನೀರನ್ನು ಚರಂಡಿಗೆ ಹರಿದು ಹೋಗಲು ಬಿಡದೇ ಪೈಪುಗಳ ಮೂಲಕ ಸಂಪಿನಲ್ಲಿ ಅಥವಾ ಟ್ಯಾಂಕಿನಲ್ಲಿ
    ಸಂಗ್ರಹಿಸಿ ಬಳಕೆ ಮಾಡೋಣ.
11. ಆಫೀಸಿಗೆ ಮಧ್ಯಾಹ್ನದ ಊಟಕ್ಕೆ ಬಾಕ್ಸ್ ತೆಗೆದುಕೊಂಡು ಹೋಗುವವರು ಮತ್ತೆ ಅದರಿಂದ ತೆಗೆದು ತಟ್ಟೆಗೆ ಹಾಕಿಕೊಂಡು ತಿನ್ನುವುದನ್ನು ಬಿಟ್ಟು
   ಬಾಕ್ಸ್‍ನಲ್ಲೇ ತಿನ್ನುವುದರಿಂದ ತಟ್ಟೆ ತೊಳೆಯಲು ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದು.
12. ಉತ್ತರ ಭಾರತದಲ್ಲಿ ಉಪಯೋಗಿಸುವಂತೆ ಟೀ ಕಾಫಿ ಕುಡಿಯಲು ಯ್ಯೂಸ್ ಅಂಡ್ ಥ್ರೋ ಮಣ್ಣಿನ ಕಪ್‍ಗಳನ್ನು ಬಳಸುವ ಪ್ರಯತ್ನ
    ಮಾಡಬಹುದು.
13. ಅಕ್ಕಿ, ತರಕಾರಿ ಮತ್ತು ಹಣ್ಣುಗಳನ್ನು ತೊಳೆದ ನೀರನ್ನು ವ್ಯರ್ಥಮಾಡದೆ ಗಿಡಗಳಿಗೆ ಹಾಕೋಣ.
14. ವಾಶ್ ಬೇಸಿನ್‍ನಲ್ಲಿ ನಲ್ಲಿ ನೀರು ಆನ್ ಮಾಡಿಕೊಂಡೇ ಹಲ್ಲುಜ್ಜುವುದು, ಶೇವಿಂಗ್ ಮಾಡುವುದನ್ನು ಬಿಟ್ಟು ಅವಶ್ಯಕತೆ ಇರುವಷ್ಟೇ ನೀರು ಬಳಸೋಣ.
15. ವಾಶ್ ಬೇಸಿನ್ ಮತ್ತು ಇತರೆಡೆಗಳಿಗೆ ಪ್ರೆಸ್ ಮಾಡಿ ನೀರು ಬಿಡುವ ನಲ್ಲಿಗಳನ್ನು ಹಾಕಿಸೋಣ.
16. ಹೊಸದಾಗಿ ಮನೆ ಕಟ್ಟಿಸುವವರಿಗೆ ಮಳೆ ನೀರನ್ನು ಸಂಗ್ರಹಿಸಲೆಂದೇ ದೊಡ್ಡ ಸಂಪುಗಳನ್ನು ನಿರ್ಮಿಸಲು ಸಲಹೆ ನೀಡೋಣ. ನಾವು ಮನೆ
    ಕಟ್ಟಿಸಿದರೂ  ಹಾಗೇ ಮಾಡೋಣ.
17. ಮದುವೆ ಮನೆಗಳಲ್ಲಿ ಕುಡಿಯಲು ವಾಟರ್ ಬಾಟಲ್‍ಗಳಲ್ಲಿ ನೀರು ಕೊಡುವುದರಿಂದ ನೀರು ಅನವಶ್ಯಕ ವ್ಯಯವಾಗುತ್ತದೆ ಇದನ್ನು ತಪ್ಪಿಸೋಣ.
18. ಕಡಿಮೆ ಗಲೀಜಾದ ಅಡಿಗೆ ಮನೆಯ ನೀರನ್ನು ಗಿಡಗಳಿಗೆ ಹರಿಸಬಹುದಾ? ಶುದ್ಧೀಕರಿಸಿ ಮರುಬಳಕೆ ಮಾಡಬಹುದಾ? ಯೋಚಿಸೋಣ.
19. ಹೋಟೆಲ್ ಮತ್ತಿತರ ಕಡೆಗಳಲ್ಲಿ ಸೋಲಾರ್ ನಲ್ಲಿಯಲ್ಲಿ ಬಿಸಿ ನೀರು ಬರುವವರೆಗೆ ಬರುವ ಒಂದೆರಡು ಬಕೀಟ್ ನೀರನ್ನು ಸುರಿದು ವ್ಯರ್ಥ ಮಾಡದೇ
    ಸದ್ಬಳಕೆ ಮಾಡಲು ಪ್ರಯತ್ನಿಸೋಣ.

20. ಈ ಮಾಹಿತಿಯನ್ನು ಬಂಧು ಮಿತ್ರ ಸ್ನೇಹಿತರಿಗೆಲ್ಲ ಫೇಸ್ ಬುಕ್, ವಾಟ್ಸಾಪ್, ಕರಪತ್ರದ ಮೂಲಕ ತಲುಪಿಸೋಣ.

ಜಲ ಜನ ಸಂಪರ್ಕ ಸೇತು ಅಭಿಯಾನದ ಕಾರ್ಯಶೈಲಿ
* ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಹಾಗಂತ ಮಳೆ ಬೀಳುತ್ತಿದೆ ಎಂದು ನೆಮ್ಮದಿಯಿಂದ ಇರುವಂತಿಲ್ಲ. ಸುಮ್ಮನೆ ಕೂರುವಂತಿಲ್ಲ. ಏಕೆಂದರೆ ಮಳೆ ಬಿದ್ದ ಮಾತ್ರಕ್ಕೆ ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ತಪ್ಪುವುದಿಲ್ಲ. ನೀರಿನ ಕೊರತೆಯಾಗದಂತೆ ಇರಲು  ಇರುವ  ದಾರಿಯೊಂದೇ.  ಅದೇನೆಂದರೆ, ಇರುವ ನೀರನ್ನು ವ್ಯರ್ಥ  ಮಾಡದೆ  ಉಪಾಯದಿಂದ ಬಳಸುವ ಮೂಲಕ
ಜಲಸಾಕ್ಷರರಾಗೋದು. ನಾವು ಜಲಸಾಕ್ಷರರಾದರೆ ಸಾಲದು, ನಮ್ಮ ಜನರನ್ನೂ ಜಲಸಾಕ್ಷರತೆಯೆಡೆಗೆ ಕರೆದೊಯ್ಯಬೇಕು. ಆಗಲೇ ನೀರಿನ ಸದ್ಬಳಕೆ ಸಾಧ್ಯ.
* ಯುವಾ ಬ್ರಿಗೇಡ್ ರಾಜ್ಯದಾದ್ಯಂತ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸುತ್ತಿರುವ ವಿಚಾರ ತಮಗೆಲ್ಲರಿಗೂ ಗೊತ್ತಿರುವಂಥದ್ದೇ. ಈ ಕೆಲಸ ಸಾಕಷ್ಟು ದೈಹಿಕ ಶ್ರಮ ಮತ್ತು ಸಮಯವನ್ನು ಬೇಡುತ್ತದೆ. ಎಲ್ಲರ ಕೈಲೂ ಇದು ಸಾಧ್ಯವಾಗುವ ಕೆಲಸವಲ್ಲ. ಆದರೆ ಹಾಗಂತ ಸುಮ್ಮನೆ ಕೂರಲಾದೀತೇ? ಇಲ್ಲ. ಅದಕ್ಕೆಂದೇ ಯುವಾ ಬ್ರಿಗೇಡ್ ಈ ಕರಪತ್ರವನ್ನು ಹೊರಡಿಸಿದೆ. ತನ್ಮೂಲಕ ಜಲ ಜನ ಸಂಪರ್ಕ ಸೇತು ಎಂಬ ಅಭಿಯಾನವನ್ನು ಆರಂಭಿಸುತ್ತಿದೆ.
*  ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ನೀವು ಮಾಡಬೇಕಾದುದಿಷ್ಟೇ, ನೀರುಳಿಸುವ ಕುರಿತಂತೆ ಯುವಾ ಬ್ರಿಗೇಡ್ ಬಿಡುಗಡೆ ಮಾಡಿರುವ ಈ ಕರಪತ್ರವನ್ನು ಮನೆ ಮನೆಗೆ ತೆರಳಿ ಹಂಚಿ ಅವರನ್ನು ನೀರುಳಿಸುವಂತೆ ಮನವಿ ಮಾಡುವುದು. ದಿನಕ್ಕೆ ಒಂದು ಗಂಟೆ ಈ ಕೆಲಸಕ್ಕೆ ನೀಡಿದರೆ ಒಂದು ತಿಂಗಳಲ್ಲಿ ಅದೆಷ್ಟು ಜನರನ್ನು ನೀವು ಜಲಸಾಕ್ಷರರಾಗುವಂತೆ ಮಾಡಬಹುದು ಯೋಚಿಸಿ. ಇದು ರಾಜ್ಯದಾದ್ಯಂತ ಇಂದಿನಿಂದಲೇ ಆರಂಭವಾಗಲಿದ್ದು ಬೇರೆ ರಾಜ್ಯಗಳಿಗೂ ಪಸರಿಸುವ ನಿರೀಕ್ಷೆ ಇದೆ.
*. ಮನೆ ಮನೆ ಸಂಪರ್ಕಕ್ಕೆ ನಾವು ಹೋದಾಗ, ನೀರುಳಿಸುವಂತೆ ಮನವಿ ಮಾಡುವುದರ ಜೊತೆಗೆ, ಹೊಸದಾಗಿ ಮನೆ ಕಟ್ಟಿಸುವವರಿಗೆ ಯಥಾಶಕ್ತಿ ಸಾಧ್ಯವಾದಷ್ಟು ದೊಡ್ಡದಾದ ಸಂಪನ್ನು (ನೀರಿನ ತೊಟ್ಟಿ) ಕಟ್ಟಿಸಿ ಮಳೆ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡುವಂತೆ ಸಲಹೆ ನೀಡಿ ಮನವೊಲಿಸಬೇಕು. ಈಗಾಗಲೇ ತೊಟ್ಟಿ ಇದ್ದರೆ ತಾರಸಿ ಮೇಲೆ ಬೀಳುವ ಮಳೆ ನೀರನ್ನು (ಮೊದಲ ಮಳೆಯ ನೀರನ್ನು ಬಿಟ್ಟು) ಸಂಪಿಗೆ ಹರಿಸಲು ಪೈಪುಗಳ ಮೂಲಕ ಜೋಡಿಸುವಂತೆ ಸಲಹೆ ನೀಡಬೇಕು.
*. ಕಾರ್ಯಕರ್ತರು ಸಾಧ್ಯವಾದರೆ ಪ್ಲಂಬರ್‍ಗಳ (ನಲ್ಲಿ ಕೆಲಸ ಮಾಡುವವರ) ಫೋನ್ ನಂಬರ್ ಅನ್ನು ಜೊತೆಯಲ್ಲಿಟ್ಟುಕೊಂಡು ಹೋಗಿ ಮನೆಯ ಮಾಲಿಕರು ಕೇಳಿದಾಗ ಕೊಟ್ಟರೆ ಸೋರುತ್ತಿರುವ ನಲ್ಲಿಗಳನ್ನು ರಿಪೇರಿ ಮಾಡಿಸಲು, ಓವರ್ ಹೆಡ್ ಟ್ಯಾಂಕಿನ ನೀರು ಪೋಲಾಗದಂತೆ ವ್ಯವಸ್ಥೆ ಮಾಡಿಸಲು, ಮಳೆ ನೀರು ಸಂಗ್ರಹಿಸಲು ಅವರಿಗೆ ಉಪಯೋಗವಾಗುತ್ತದೆ.
*. ಹಾಗೆಯೇ ಈ ವಿಚಾರವನ್ನು ಲೇಖನಗಳ ಮೂಲಕ, ವೀಡಿಯೋಗಳ ಮೂಲಕ, ಪತ್ರಿಕೆ, ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ ಜನರನ್ನು ನೀರುಳಿಸಲು ಮನವೊಲಿಸುವುದರಿಂದಲೂ ಸಕಾರಾತ್ಮಕ ಫಲಿತಾಂಶ ಕಾಣಬಹುದು. ಇಂದಿನಿಂದಲೇ ಈ ಕೆಲಸವನ್ನು ಆರಂಭಿಸೋಣ.
*. ಇನ್ನು ನೀವು ಜನರ ಬಳಿ ಹೋದಾಗ ಈ ವಿಚಾರಕ್ಕೆ ಕೆಲವರು ಸಹಕರಿಸದಿರಬಹುದು. ಉಡಾಫೆ ಮತ್ತು ವಿರೋಧದ ಮಾತುಗಳನ್ನೂ ಆಡಬಹುದು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನೀರು ಉಳಿಸುವುದೊಂದೇ ನಮ್ಮ ಗುರಿ ಎಂದು ಮುನ್ನಡೆದರೆ ಜಯ ಕಟ್ಟಿಟ್ಟ ಬುತ್ತಿ. ಬನ್ನಿ, ಯುವಾ ಬ್ರಿಗೇಡ್ ಕೈಗೆತ್ತಿಕೊಂಡಿರುವ ಈ “ಜಲ ಜನ ಸಂಪರ್ಕ ಸೇತು” ಅಭಿಯಾನವನ್ನು ಯಶಸ್ವಿಗೊಳಿಸೋಣ.