ಯುವಾಬ್ರಿಗೇಡ್ ಸದಾ ಸಮಾಜಮುಖಿ‌ ಕೆಲಸಗಳನ್ನು ಮಾಡುತ್ತಾ ಬಂದಿರುವ ಸಂಘಟನೆ.  ಕಳೆದೆರಡು ವರ್ಷಗಳಲ್ಲಿ ಹಲವಾರು 120 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದೆ. ಈ ವರ್ಷ ಯುವಾಬ್ರಿಗೇಡ್ ಕೈಹೆತ್ತಿಕೊಂಡ ಮತ್ತೊಂದು ಮಹತ್ತರ ಕೆಲಸವೆಂದರೆ ನದಿಗಳ ಸ್ವಚ್ಛತೆ. ನೇತ್ರಾವತಿ ನದಿಗೂ ಮುನ್ನ ಕಟೀಲಿನಲ್ಲಿ ನಂದಿನಿ, ಸುಳ್ಯದ ಪಯಸ್ವಿನಿ, ‌ಕೊಲ್ಲೂರಿನ ಸೌಪರ್ಣಿಕಾ,‌ ಕಪಿಲಾ ಮತ್ತು ಕಾವೇರಿಯನ್ನು ಯುವಾಬ್ರಿಗೇಡ್ ಸ್ವಚ್ಛಗೊಳಿಸಿದೆ. ಕಾವೇರಿ ಸ್ವಚ್ಛತೆ 5 ದಿನಗಳ ಕಾಲ ನಡೆದಿತ್ತು. ಅದರ ನಂತರ ನೇತ್ರಾವತಿ ನದಿ ಸ್ವಚ್ಛತಾ ಯೋಜನೆಯನ್ನು ಯುವಾಬ್ರಿಗೇಡ್ ಹಮ್ಮಿಕೊಂಡಿತು.

ಧರ್ಮಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗೆ ಬಂದ ಭಕ್ತರು ನೇತ್ರಾವತಿಗೆ ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಪ್ಲಾಸ್ಟಿಕ್‌ ಅಷ್ಟೇ ಅಲ್ಲದೇ, ಸ್ನಾನ ಮಾಡಿ‌ ಉಟ್ಟ ಸೀರೆ, ಪ್ಯಾಂಟುಗಳನ್ನೂ ನದಿಗೆ ಹಾಕುತ್ತಾರೆ. ಇದರ ಜೊತೆಗೆ ತಿಂದು, ತೇಗಿ, ಕಸವನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಹೀಗಾಗಿ ಮಲಿನಗೊಂಡ ನೇತ್ರಾವತಿಯನ್ನು ಸ್ವಚ್ಛಗೊಳಿಸುವುದು ದೊಡ್ಡ ಕೆಲಸವೇ ಆಗಿತ್ತು!

ಜೂನ್ 3 ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದೆವು. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಸುಮಾರು 500 ಕ್ಕೂ‌ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.‌ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಸ್ಚಚ್ಛತಾ ಕಾರ್ಯ ಕೊನೆಗೊಂಡಿತು. ನದಿಯಲ್ಲಿ ಕಸವಷ್ಟೇ ಅಲ್ಲದೇ ಬೇಡವೆಂದು ಬಿಸಾಡಿದ ದೇವರ ಪಟಗಳೂ ಸಿಕ್ಕಿದವು. ಅವುಗಳನ್ನು ಬೇರ್ಪಡಿಸುವ ಕಾರ್ಯವನ್ನೂ ಮಾಡಲಾಯಿತು.

13 ಟ್ರಾಕ್ಟರಿಗೂ ಮಿಕ್ಕಿ ಕಸವನ್ನು ನದಿಯಿಂದ ಹೊರತೆಗೆಯಲಾಯಿತು. ಸ್ವಚ್ಛತಾಕಾರ್ಯ ಮುಗಿಯುತ್ತಿದ್ದಂತೆ ದೇವತೆಗಳ ಅನುಗ್ರಹವೋ ಎಂಬಂತೆ ವರುಣನ ಆಹ್ವಾನವಾಯಿತು! ನಂತರ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಯುವಾಬ್ರಿಗೇಡ್ ನ ಕಾರ್ಯವನ್ನು ಶ್ಲಾಘಿಸಿದರು.