‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು.

ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ ವಿದೇಶದವಳಾಗಿದ್ದರೂ ಭಾರತದ ಜೀವನ ಪದ್ಧತಿಯನ್ನು, ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ಬದುಕಿದವಳು. ಭಾರತೀಯರಿಗಿಂತಲೂ ಹೆಚ್ಚಾಗಿ ಭಾರತವನ್ನು ಪ್ರೀತಿಸುತ್ತಿದ್ದಳು ಅಕ್ಕ. ಹೆಣ್ಣುಮಕ್ಕಳಿಗೆ ಶಾಲೆ ಪ್ರಾರಂಭಿಸಿದಳು, ಪ್ಲೇಗ್ ರೋಗಿಗಳ ಸೇವೆ ಮಾಡಿದಳು, ಕ್ರಾಂತಿಕಾರಿಗಳಿಗೆ ಪ್ರೇರಣಾಶಕ್ತಿಯಾಗಿ ನಿಂತಳು. ವಿದೇಶೀಯರಿಗೆ ತನ್ನ ಭಾಷಣ ಮತ್ತು ಬರಹಗಳ ಮೂಲಕ ಭಾರತದ ಪರಿಚಯವನ್ನು ಮಾಡಿಸಿದಳು ಅಕ್ಕ. ಭಾರತದ ಜೀವನ ಪದ್ಧತಿಯ, ಸಂಸ್ಕೃತಿಯ, ಹಿಂದೂ ಧರ್ಮ ರಾಷ್ಟ್ರೀಯ ಶಿಕ್ಷಣ ಪದ್ಧತಿ, ಭಾರತದ ಇತಿಹಾಸ, ಕಲೆ ಇವೆಲ್ಲವುಗಳ ಕುರಿತು ಅಕ್ಕ ಪುಸ್ತಕಗಳನ್ನು ಬರೆದಳು. ಭಾರತೀಯರಿಗೂ ಅರ್ಥವಾಗದ ಕಾಳಿಯನ್ನು ಅಕ್ಕ ಅರ್ಥೈಸಿಕೊಂಡದ್ದಷ್ಟೇ ಅಲ್ಲ ಕಾಳಿಯನ್ನು ಬಿಗಿದಪ್ಪಿಕೊಂಡಳು. ‘ಕಾಳಿಯೇ ತಾಯಿ’ ಎಂಬ ಆಕೆಯ ಪುಸ್ತಕದಲ್ಲಿ ಆಕೆ ಕಾಳಿಯ ವರ್ಣನೆಯನ್ನು ಕಟ್ಟಿಕೊಡುವುದನ್ನು ಓದಿದರೆ ಕಾಳಿಯೆಡೆಗಿನ ಪ್ರೇಮ ನೂರ್ಮಡಿಯಾಗುತ್ತದೆ.

ಸ್ವಾಮಿ ವಿವೇಕಾನಂದರ ಸಾಹಿತ್ಯವಾದರೂ ಜನರಿಗೆ ಪರಿಚಯವಿದೆ. ಅಕ್ಕನ ಸಾಹಿತ್ಯದ ಪರಿಚಯವಿರುವುದು ಅತಿ ವಿರಳ. ಸ್ವಾಮಿ ವಿವೇಕಾನಂದರನ್ನು ಓದಿದರೆ ಭಾರತ ಅರ್ಥವಾಗುತ್ತದೆ ಮತ್ತು ನಿವೇದಿತಾಳ ಬರಹವನ್ನು ಓದಿದರೆ ಸ್ವಾಮಿ ವಿವೇಕಾನಂದರ ಪರಿಚಯವಾಗುತ್ತದೆ ಎಂಬ ಸುಭಾಷ್ ಬೋಸರ ಮಾತು ಅಕ್ಷರಶಃ ಸತ್ಯ! ಆಕೆಯ ಸಾಹಿತ್ಯ ರಾಶಿಯ ಪರಿಚಯವಾಗಲೆಂದೇ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಯೋಜನೆಗೊಂಡದ್ದು. ಸೋದರಿ ನಿವೇದಿತೆಯ ನೂರೈವತ್ತನೇ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಬೇಕೆಂಬ ಕನಸನ್ನು ಹೊತ್ತು ನಡೆಯುತ್ತಿರುವಾಗ ಸಾಹಿತ್ಯ ಸಮ್ಮೇಳನದ ಮೂಲಕ ಆಚರಿಸುವ ಕಲ್ಪನೆ ಮೊಳಕೆಯೊಡೆಯಿತು. ಕಾಲೇಜೊಂದರಲ್ಲಿ ಸಣ್ಣ ಮಟ್ಟದಲ್ಲಿ ಮಾಡಬೇಕೆಂದು ಪ್ರಾರಂಭಿಸಿದ ಈ ಯೋಜನೆ ಗರಿಗೆದರಿ, ಇಡಿಯ ದೇಶದಲ್ಲಿಯೇ ಸದ್ದು ಮಾಡುವ ಮಟ್ಟಕ್ಕೆ ಬಂದು ತಲುಪಿತು.

ಮಂಗಳೂರಿನಲ್ಲಿ ಮೊದಲ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಫೆಬ್ರವರಿಯಲ್ಲಿ ನಡೆಯಿತು. ಈ ಸಾಹಿತ್ಯ ಸಮ್ಮೇಳನ ವಿವೇಕಾನಂದ-ನಿವೇದಿತೆಯರ ಸಾಹಿತ್ಯವನ್ನು ಪರಿಚಯಿಸಿದ್ದಲ್ಲದೇ, ಯುವಕರಿಗೆ ಸಮಾಜಕ್ಕಾಗಿ ಬದುಕುವ ಪ್ರೇರಣೆಯನ್ನು ನೀಡಿತು. ಸ್ವಾಮಿ ವಿವೇಕಾನಂದ ಮತ್ತು ನಿವೇದಿತೆಯರ ಸಾಹಿತ್ಯ ರಾಶಿಯೇ ಅಂಥದ್ದು. ಒಮ್ಮೆ ಓದಿದರೆ ನಮ್ಮನ್ನು ಸುಮ್ಮನೆ ಕೂರಲು ಬಿಡುವುದಿಲ್ಲ. ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನದ ಸಮಾರೋಪವೆಂದೂ ಅಂದೇ ನಿಶ್ಚಯ ಮಾಡಿಯಾಗಿತ್ತು. ಈ ನಡುವೆ ಕರ್ನಾಟಕದಾದ್ಯಂತ ಲಘು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ನಿರ್ಧಾರ ಮಾಡಿತು ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ.

20728936_842643222563931_4679150673826804612_o 20768128_842643255897261_7033365158595424297_n 20988196_1158216954279516_3765468855847718437_o

ಮೈಸೂರು, ಮಂಡ್ಯ, ಗೌರಿಬಿದನೂರು, ಹುಬ್ಬಳ್ಳಿ, ರಾಣೆಬೆನ್ನೂರು, ಕಾಸರಗೋಡು ಹೀಗೆ ಹಲವು ಕಡೆಗಳಲ್ಲಿ ಅರ್ಧ ದಿನದ ಅಥವಾ ಒಂದು ದಿನದ ಲಘು ಸಾಹಿತ್ಯ ಸಮ್ಮೇಳನಗಳು ನಡೆದವು. ಈ ಸಮ್ಮೇಳನಗಳು ವಿವೇಕಾನಂದ-ನಿವೇದಿತೆಯರ ಸೇವೆ, ತ್ಯಾಗ ಮನೋಭಾವ, ದೇಶಭಕ್ತಿ, ರಾಷ್ಟ್ರೀಯತೆ ಹೀಗೆ ಹತ್ತು ಹಲವು ಆಯಾಮಗಳನ್ನು ಯುವಕರಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಇವರೀರ್ವರ ಜೀವನವನ್ನು ಅಧ್ಯಯನ ಮಾಡಿರುವ, ಅವರ ಜೀವನವನ್ನೇ ಆದರ್ಶವಾಗಿಸಿಕೊಂಡಿರುವ ವ್ಯಕ್ತಿಗಳನ್ನು ಕರೆಸಲಾಯಿತು.

22278590_738164186371271_543673837_n

ಕಾಲೇಜುಗಳಲ್ಲಿ ಏರ್ಪಡಿಸಿದ್ದ ಲಘು ಸಾಹಿತ್ಯ ಸಮ್ಮೇಳನಗಳು ತರುಣ-ತರುಣಿಯರ ಮೇಲೆ ಅತ್ಯಂತ ಗಾಢ ಪ್ರಭಾವವನ್ನು ಬೀರಿದವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿ ಗೋಷ್ಠಿಯ ನಂತರ ವಿದ್ಯಾರ್ಥಿಗಳು ಭಾಷಣಕಾರರಿಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳುತ್ತಿದ್ದರು. ಹುಬ್ಬಳ್ಳಿಯಲ್ಲಿ ಸಮ್ಮೇಳನ ಮುಗಿದ ನಂತರ ಪುಸ್ತಕ ಮಳಿಗೆಯಲ್ಲಿದ್ದ ಅಷ್ಟೂ ನಿವೇದಿತೆಯ ಪುಸ್ತಕಗಳೂ ಮಾರಾಟಗೊಂಡದ್ದು ವಿಶೇಷವೇ ಸರಿ! ಗೌರಿಬಿದನೂರಿನಲ್ಲಿ ಅಕ್ಕನ ಜೀವನವನ್ನು ಕೇಳಿ ಜನರು ಅಕ್ಷರಶಃ ಕಣ್ಣೀರಿಟ್ಟಿದ್ದರು. ಕಾಸರಗೋಡಿನ ಸಾಹಿತ್ಯ ಸಮ್ಮೇಳನದಲ್ಲಿ ವಿವೇಕಾನಂದ-ನಿವೇದಿತೆಯರ ಜೀವನದ ಕುರಿತಾದ ಪ್ರದರ್ಶಿನಿ ಬಂದವರನ್ನು ಆಕರ್ಷಿಸಿತ್ತು.

ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಯತ್ನವಾದ ಈ ಸಾಹಿತ್ಯ ಸಮ್ಮೇಳನಗಳ ಮೂಲಕ ಯುವಜನತೆ ವಿವೇಕಾನಂದ-ನಿವೇದಿತೆಯರ ಬದುಕಿನಿಂದ ಪ್ರೇರಣೆಗೊಂಡು ಸಮಾಜದ ಒಳಿತಿಗಾಗಿ ಬದುಕು ಕಟ್ಟಿಕೊಳ್ಳುವಂತಾದರೆ ಸಾರ್ಥಕ ಭಾವ.