ಆತ್ಮೀಯ ಮಿತ್ರರೇ,

ಅಣುರೇಣುವಿನಲ್ಲೂ ಭಗವಂತ ತಾನೇ ತಾನಾಗಿ ಕುಳಿತಿದ್ದಾನೆ. ಅವನನ್ನು ನಾವು ಮೂರ್ತಿಗಳಲ್ಲಿ ಪಟಗಳಲ್ಲಿ ಕಂಡು ಆರಾಧಿಸಿದ್ದೇವೆ. ಹೀಗಾಗಿಯೇ ಈ ಪಟಗಳು ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದಾಗ ಕಣಕಣದಲ್ಲೂ ಅಡಗಿರುವ ಶಿವನೇ ಪಟಗಳ ಮೂಲಕ ಅಲ್ಲಿ ತೊಳಲಾಡುತ್ತಿದ್ದಾನೆ ಎನಿಸುವಂತ ಭಾವ ಮೂಡುವುದು ಸಹಜ. ಬೆಂಗಳೂರಿನ ಕಾರ್ಯಕರ್ತರು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಈ ಪಟಗಳನ್ನು ಸಂಗ್ರಹಿಸಿ, ಅವುಗಳನ್ನು ಬೇರ್ಪಡಿಸಿ, ಪಟಗಳನ್ನು ಹಳ್ಳದಲ್ಲಿ ಹೂತು, ಅದರ ಮೇಲೆ ಅರಳಿ ಗಿಡ ನೆಟ್ಟಿದ್ದಾರೆ. ಸಮಸ್ತ ಜನರಿಂದ ವ್ಯಾಪಕ ಗೌರವಕ್ಕೆ ಪಾತ್ರವಾದ ಅಪರೂಪದ ಕಾರ್ಯ ಇದು. ದೊಡ್ಡ-ದೊಡ್ಡ ಕಾರ್ಯಗಳಷ್ಟೇ ಸಂಘಟನೆಯ ದೊಡ್ಡತನವನ್ನು ಅಳೆಯುವುದಲ್ಲ. ಅತ್ಯಂತ ಚಿಕ್ಕ ಕೆಲಸವನ್ನೂ ಅದೆಷ್ಟು ಶ್ರದ್ಧೆಯಿಂದ ಮಾಡಬಲ್ಲೆವೆಂಬುದೇ ಸಂಘಟನೆಯೊಂದರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ.
ಹಾಗಂತ ಚಿಕ್ಕ ಕೆಲಸಗಳನ್ನಷ್ಟೇ ಮಾಡುತ್ತ ಉಳಿಯಲಿಲ್ಲ ಯುವಾಬ್ರಿಗೇಡ್. ಬೆಳಗಾವಿಯ ಸಾಹಿತ್ಯ ಸಮ್ಮೇಳನದ ಸಮಾರೋಪ ಎಲ್ಲರ ಹುಬ್ಬು ಮೇಲೇರುವಂತೆ ಆಚರಿಸಲ್ಪಟ್ಟಿತು. ಕಾರ್ಯಕರ್ತರ ಶ್ರಮ, ಉತ್ಸಾಹ, ಆಸಕ್ತಿ ಶ್ರದ್ಧೆಗಳು ಎಲ್ಲರ ಕಣ್ಣು ಕುಕ್ಕುವಂತಿದ್ದವು. ಸಾಹಿತ್ಯ ಕ್ಷೇತ್ರ ಒಂದೇ ಸಿದ್ಧಾಂತದವರ ಸ್ವತ್ತು ಎಂದು ಜನ ಭಾವಿಸಿದ್ದ ಹೊತ್ತಲ್ಲಿ ಯುವಾಬ್ರಿಗೇಡ್ ಅದಕ್ಕೊಂದು ಬೇರೊಂದು ರೂಪ ಕೊಟ್ಟು ಸೈ ಎನಿಸಿಕೊಂಡಿತು.

ಚೀನಾದ ವಿರುದ್ಧ ಹೋರಾಟಕ್ಕೆ ಎಲ್ಲರೂ ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸುವಾಗ ಯುವಾಬ್ರಿಗೇಡ್ ಚೀನಾ ವಸ್ತುಗಳನ್ನು ವಿರೋಧಿಸಲೆಂದೇ ಪುಟ್ಟ ಪುಟ್ಟ ವಿಡಿಯೋಗಳನ್ನು ತಯಾರಿಸಿ ಸಮಾಜದಲ್ಲಿ ಜಾಗೃತಿಯಸಂಚಲನ ಉಂಟುಮಾಡಿತು. ಈ ಬಾರಿಯ ದೀಪಾವಳಿಗೆ ಶಿವಕುಮಾರ್ ಹೊಸಮನಿಯವರು ಬಾಲಾಪರಾಧಿಗಳನ್ನು ಬಳಸಿ ತಯಾರಿಸಿರುವ ಆಕಾಶಬುಟ್ಟಿಗಳನ್ನು ಸಮಾಜಕ್ಕೆ ಪರಿಚಯಿಸಿ ಚೀನಾ ಮುಕ್ತ ದೀಪಾವಳಿಗೆ ಪ್ರೇರೇಪಣೆ ನೀಡಿತು.
ಪ್ರತಿಯೊಂದು ಕೆಲಸಕ್ಕೂ ಸಮಾಜದಿಂದ ಸಿಗುವ ಪ್ರತಿಕ್ರಿಯೆ ಕಂಡಾಗ ನಮ್ಮ ಜವಾಬ್ದಾರಿ ನೂರು ಪಟ್ಟು ಜಾಸ್ತಿಯಾಗುತ್ತದೆ. ಹದವರಿತು ನಡೆಯುವ ಪ್ರಯತ್ನ ನಾವೆಲ್ಲರೂ ಮಾಡುತ್ತಿದ್ದೇವೆ. ಎಡವದಂತೆ ನಡೆಯುವ ಶಕ್ತಿಯನ್ನು ದಿವ್ಯತ್ರಯರು ಅನುಗ್ರಹಿಸಲಿ ಅಷ್ಟೇ.

ಧನ್ಯವಾದಗಳು
anna

ವಂದೇ