ವಿಶ್ವಗುರು ಭಾರತವನ್ನಾಗಿ ನಿರ್ಮಿಸುವ ಸಂಕಲ್ಪ ದಿನೇ ದಿನೇ  ಸಾಕಾರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಯುವಾಬ್ರಿಗೇಡಿಗಂತೂ ಉದ್ದೇಶ, ಮಾರ್ಗ, ಗುರಿ ಎಲ್ಲವೂ ಅದೊಂದೇ. ಹೀಗಾಗಿಯೇ ಅಂದುಕೊಂಡಿದ್ದೆಲ್ಲವೂ ನೆರವೇರುತ್ತಿರುವಂತೆ ಭಾಸವಾಗುತ್ತಿರೋದು. ಕಳೆದ ವರ್ಷ ಮಣ್ಣಿನ ಗಣಪನ ಪ್ರತಿಷ್ಠಾಪಿಸಿ ಅದನ್ನೇ ಪೂಜಿಸಿರೆಂದು ಜಿದ್ದಿಗೆ ಬಿದ್ದು ಪ್ರಚಾರ ಮಾಡಿದ್ದೆವು. ಅನೇಕರು ನಕ್ಕಿದ್ದರು. ಆದರೆ ಈ ವರ್ಷ ಸ್ವತಃ ಪ್ರಧಾನಮಂತ್ರಿಯವರೇ ಆ ಕುರಿತಂತೆ ಮಾತನಾಡಿದರು. ಮುಖ್ಯಮಂತ್ರಿಯವರಂತೂ ಜನರನ್ನು ವಿನಂತಿಸಿಕೊಂಡು ಊರೂರಲ್ಲೂ ಈ ಕುರಿತಂತೆ ಪ್ರಚಾರಪತ್ರ ಹಾಕಿಸಿದರು. ಯುವಾಬ್ರಿಗೇಡ್ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ಗಣೇಶನ ಪ್ರತಿಷ್ಠಾಪಿಸಿ ಪಲ್ಲಕ್ಕಿಯಲ್ಲಿ ಹೊತ್ತು ಗಂಟೆ, ಜಾಗಟೆ ಭಜನೆಗಳೊಂದಿಗೆ ವಿಸರ್ಜನೆ ಮಾಡಿದ್ದು ಮಾದರಿಯಾಗಿತ್ತು. ಅತ್ತ ಮಂಗಳೂರಿನಲ್ಲಿ ಜಾತಿ-ಪಂಥ ಭೇದ ಮರೆತು ಸರ್ವರಿಂದಲೂ ಗಣೇಶನ ಪೂಜೆ ಮಾಡಿಸಿದ್ದು ಭಾವನಾತ್ಮಕವಾಗಿತ್ತು.

ನೀರಿನ ಕುರಿತಂತೆ ರಾಜ್ಯ ರಾಜ್ಯಗಳ ಕದನದಲ್ಲಿ ಕನ್ನಡಿಗರೂ ಪಾಲ್ಗೊಳ್ಳಬೇಕಾದ ಸ್ಥಿತಿ ಬಂದದ್ದು ದುರ್ದೈವ. ಕಳೆದ ಒಂದೆರಡು ವರ್ಷಗಳಲ್ಲಿ ಕೊಡಗು ಪ್ರಾಂತ್ಯದಲ್ಲಿ ಸಾವಿರಾರು ಮರಗಳನ್ನು ಕಡಿದು ಬಿಸಾಡಿದ ಸರ್ಕಾರ ಮಳೆ ಇಲ್ಲವೆಂದು ಕಣ್ಣೀರಿಟ್ಟರೇನು ಬಂತು? ನೀರಿನ ಸ್ರೋತವನ್ನು ಕಳೆದುಕೊಳ್ಳುತ್ತ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಜಿಲ್ಲೆಗಳೂ ಕಾದಾಡಬೇಕಾದ ಪರಿಸ್ಥಿತಿ ಬಂದೀತು. ಅದಕ್ಕೇ ಯುವಾಬ್ರಿಗೇಡ್ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು. ವಿಜಯಪುರದ ತರುಣರು ಈ ನಿಟ್ಟಿನಲ್ಲಿ ಮಾಡಿದ ಕೆಲಸ ಸ್ತುತ್ಯಾರ್ಹ.

ದೂರದ ಕಾಸರಗೋಡು ಬಲು ಜೋರಾಗಿ ಕೆಲಸ ಮಾಡುತ್ತಿದೆ. ಯುವಾಬ್ರಿಗೇಡಿನ ಪ್ರತಿಯೊಂದು ಚಟುವಟಿಕೆಗಳೂ ಅಲ್ಲಿ ನಡೆದೇ ನಡೆಯುತ್ತವೆ. ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿಯವರ ಪ್ರವಾಸವಾದ ನಂತರವಂತೂ ಇಡಿಯ ಕ್ಷೇತ್ರ ಚುರುಕಾಗಿಬಿಟ್ಟಿದೆ.

ಈ ನಡುವೆ ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ ತುಂಬಿದ್ದು ಗೊತ್ತೇ ಆಗಲಿಲ್ಲ. ನಮ್ಮೆಲ್ಲರಿಗೂ ಅಕ್ಕ-ತಂಗಿಯರಾಗಿ ಅವರು ಹರಿಸಿರುವ ಪ್ರೀತಿ ಅನನ್ಯ. ಅದಕ್ಕೂ ಮಿಗಿಲಾಗಿ ಸಮಾಜ ಜಾಗೃತಿಯ ಚಟುವಟಿಕೆಗಳಲ್ಲಿ ಅವರ ಕೊಡುಗೆಯನ್ನು ಮೆಚ್ಚಲೇಬೇಕು.

ಹೇಳುವುದನ್ನು ಮರೆತಿದ್ದೆ. ಪ್ರೊಜೆಕ್ಟರ್ ಕೊಡಿಸಿದ ಅಮೇರಿಕದ ಮಿತ್ರರು ಕಾರ್ಯಾಲಯಕ್ಕೆ ಬಂದಿದ್ದರು. ನಮ್ಮ ಚಟುವಟಿಕೆ ಅವರ ಮನಸ್ಸನ್ನು ಬಲುವಾಗಿ ಸೂರೆಗೊಂಡಿದೆ. ಸದಾ ನಮ್ಮ ಸಹಕಾರಕ್ಕೆ ನಿಲ್ಲುವ ಭರವಸೆ ನೀಡಿ ಹಾರೈಸಿ ಹೋದರು.

ಈ ತಿಂಗಳ ಯುವಾಬ್ರಿಗೇಡ್ ಆಟೋಗ್ರಾಫನ್ನು  ಓದಿ, ನಿಮ್ಮ ಮಿತ್ರರೊಂದಿಗೆ ಹಂಚಿಕೊಳ್ಳಿ. ನಮ್ಮ ಗೆಳೆತನ ಹೀಗೆ ಮುಂದುವರಿಯಲಿ.