ಚಿತೇ ಕೀ ಚಾಲ್, ಬಾಜ್ ಕೀ ನಜರ್, ಔರ್ ಬಾಜೀರಾವ್ ಕೀ ತಲವಾರ್ ಪರ್ ಸಂದೇಹ್ ನಹೀ ಕರ್ತೇ, ಕಭೀ ಭೀ ಮಾಥ್ ದೇ ಸಕ್ತೀ ಹೈ!

ಇತ್ತೀಚೆಗೆ ಬಿಡುಗಡೆಯಾದ ‘ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಬಾಜಿರಾವ್ ಪದೇ ಪದೇ ಹೇಳುತ್ತಿದ್ದ ಈ ಡೈಲಾಗ್ ಕೇಳುತ್ತಿದ್ದ ಹಾಗೆ ಅನ್ನಿಸಿತ್ತು. ಒಂದು ಸಲ ಅವನಿದ್ದ ಜಾಗವನ್ನು ನೋಡಿ ಬಂದುಬಿಡಬೇಕು ಅಂತ. ನಲವತ್ತು ಯುದ್ಧಗಳನ್ನು ಕಾದು ಒಂದರಲ್ಲೂ ಸೋಲಲಿಲ್ಲವೆಂದರೆ ಅವನದು ಅದಿನ್ನೆಂತಾ ತಲವಾರ್ ಇದ್ದಿರಬೇಕು?

1

ಹೌದು! ಮರಾಠಾ ಇತಿಹಾಸವೇ ಅಂಥಾದ್ದು! ಛತ್ರಪತಿ ಶಿವಾಜಿ ಮಹಾರಾಜರು ಕಂಡಂತಾ ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಲು ಬಾಜೀರಾಯನಂತಾ ಅದೆಷ್ಟೋ ಜನ ತಮ್ಮ ರಕ್ತವನ್ನು ಧಾರೆಯಾಗಿ ಹರಿಸಿದರು. ಲಕ್ಷಾಂತರ ಮಂದಿ ನಿಷ್ಠಾವಂತ ಸೈನಿಕರು ಮಹಾನ್ ಕ್ರೂರಿಗಳಾಗಿದ್ದ ಮೊಘಲರ ಕತ್ತಿಗೆ ಬಿರುಸಿನ ಉತ್ತರ ನೀಡಿ ದೆಹಲಿಯವರೆಗೂ ತಮ್ಮ ರಾಜ್ಯವನ್ನು ವಿಸ್ತಾರ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ಪೇಶ್ವೆಗಳವರೆಗೆ ಮಹಾರಾಷ್ಟ್ರಾದ ಸಹ್ಯಾದ್ರಿ ಬೆಟ್ಟಗಳ ನಡುವೆ ಇವರು ಕಟ್ಟಿದ ದುರ್ಗಮ ಕೋಟೆಗಳನ್ನು ಬೇಧಿಸಿ ಸೋಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಈ ಮಣ್ಣಿನಲ್ಲಿ ಮರಾಠಾ ಸೈನ್ಯದ ಸಾಮಾನ್ಯ ಯೋಧನೂ ನರಸಿಂಹನಂತೆ ಕಾದಾಡಿದ ಪವಾಡಗಳು ನಡೆದಿವೆ. ಕೋಟೆಯನ್ನು ಗೆಲ್ಲುವುದಕ್ಕಾಗಿ ಮಗನ ಮದುವೆಯನ್ನು ತೊರೆದು ನರಕೇಸರಿಯಂತೆ ಹೋರಾಡಿ, ಗೆದ್ದು ಪ್ರಾಣ ಅರ್ಪಿಸಿದಂತವರ ತ್ಯಾಗದ ಇತಿಹಾಸವಿದೆ. ದೊರೆಯ ಪ್ರಾಣ ಉಳಿಸಲು ತಾನು ಕತ್ತಿಗೆ ಕೊರಳು ನೀಡಿದಂತವರ ಉದಾತ್ತ ಆದರ್ಶವಿದೆ. ಹುಟ್ಟಿದ ಮಗುವಿಗೆ “ಹಿಂದೂ ಸ್ವರಾಜ್ಯದ ಧರ್ಮಧ್ವಜವನ್ನು ಪುನರ್ ಸ್ಥಾಪಿಸುವ ಸಲುವಾಗಿಯೇ ನಿನ್ನ ಜನ್ಮವಾಗಿದ್ದು” ಎಂದು ಸಂಸ್ಕಾರ ನೀಡಿದ ತಾಯಂದಿರ ದೇಶಪ್ರೇಮವಿದೆ. ತನ್ನ ಒಡೆಯನನ್ನು ಉಳಿಸುವುದಕ್ಕಾಗಿ ಎರಡೂ ಕೈಲಿ ಕತ್ತಿ ಹಿರಿದು ನೂರಾರು ಜನ ಶತ್ರುಗಳೊಂದಿಗೆ ನರಶಾರ್ದೂಲದಂತೆ ಹೋರಾಡಿದ ವೀರ ಪುಂಗವನ ರೋಚಕ ಹೋರಾಟದ ವೀರಗಾಥೆಯಿದೆ. ಇಂಥಾ ಸಾವಿರಾರು ಘಟನೆಗಳನ್ನು ಕಣ್ಣಾರೆ ಕಂಡು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿರುವ ಆ ಸಹ್ಯಾದ್ರಿ ಶ್ರೇಣಿಯ ಕೋಟೆಗಳನ್ನು ನೋಡುವುದು ಕಣ್ಣಿಗೆ ಹಬ್ಬ, ಮನಸ್ಸಿಗೆ ಸ್ಫೂರ್ತಿ, ಬುದ್ಧಿಗೆ ಪುಷ್ಕಳವಾದ ಮೃಷ್ಟಾನ್ನ ಭೋಜನ, ಆತ್ಮಕ್ಕೆ ದೇಶಪ್ರೇಮದ ಅಮೃತ ಸ್ನಾನ.

ಇಂತಹಾ ವೀರ ಭೂಮಿಗೆ ಇತ್ತೀಚೆಗಷ್ಟೇ ಯುವಾ ಬ್ರಿಗೇಡ್ ನಿಂದ ಮುಂದಿನ ವರ್ಷ ಆಯೋಜಿಸಲಿರುವ “ಪ್ರೇರಣಾ ಪ್ರವಾಸ” ದ ತಯಾರಿಗೆ “ಮಾರ್ಗ ಸಮೀಕ್ಷೆ” ನಡೆಸಲು ನ ಧಾರವಾಡ ವಿಭಾಗದಿಂದ ಸಂಚಾಲಕರ ತಂಡ ಪ್ರವಾಸ ಹೊರಟಿತ್ತು. ಹನ್ನೆರಡು ಜನರು ಮಾತ್ರ ಹೋಗಬೇಕೆಂದು ತೀರ್ಮಾನಿಸಿದ್ದರೂ ಕೊನೆ ಕ್ಷಣದಲ್ಲಿ ಸಂಖ್ಯೆ 35 ಆಗಿಬಿಟ್ಟಿತು. ಬೆಳಗಾವಿಯ ವರ್ಧಮಾನ್, ಸಿದ್ದು ಮತ್ತು ಧಾರವಾಡದ ಕಿರಣ್ ಪಾಟೀಲರು ಎಲ್ಲ ವ್ಯವಸ್ಥೆಯನ್ನು ಅದಾಗಲೇ ಮಾಡಿದ್ದರು. ದಿನಾಂಕ 25 ರ ಸಂಜೆ ಎಲ್ಲರೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಇಂದ ಮೂರು ಟೆಂಪೋ ಟ್ರಾವೆಲರ್ಸ್ ಗಳಲ್ಲಿ ಪ್ರವಾಸ ಆರಂಭಿಸಿದೆವು. ಆ ರಾತ್ರಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ದೇವಸ್ಥಾನವೊಂದರ ಅತಿಥಿ ಗೃಹದಲ್ಲಿ ಆಶ್ರಯ ಪಡೆದೆವು.

ಬೆಳಿಗ್ಗೆ ಬೇಗನೆ ಎದ್ದು ಸ್ನಾನ, ಸಾಮೂಹಿಕ ಪ್ರಾರ್ಥನೆಗಳನ್ನು ಮುಗಿಸಿಕೊಂಡು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ರವರು ಕಟ್ಟಿಸಿದ ಪತಿತ ಪಾವನ ಮಂದಿರವನ್ನು ನೋಡಲು ಹೊರಟೆವು. ಮಂದಿರ ಸಿಗುವ ಮೊದಲೇ ಸಿಕ್ಕ ಸಾವರ್ಕರ್ ವೃತ್ತದಲ್ಲಿ (ಸರ್ಕಲ್) ಸ್ಥಾಪಿಸಲಾಗಿದ್ದ ಸಾವರ್ಕರ್ ರ ಭವ್ಯವಾದ ಮೂರ್ತಿಗೆ ನಮಸ್ಕರಿಸಿ ಪತಿತ ಪಾವನ ಮಂದಿರದ ಕಡೆ ಹೊರಟೆವು. ಭಾರತ್ ಮಾತಾ ಕೀ ಜೈ, ಸಾವರ್ಕರ್ ಜೀ ಕೀ ಜೈ ಅಂತ ಘೋಷಣೆ ಕೂಗುತ್ತಾ ದೇವಸ್ಥಾನದ ಬೀದಿಯಲ್ಲಿ ನಾವು ಗುಂಪಾಗಿ ನಡೆದುಕೊಂಡು ಹೋಗುತ್ತಿದ್ದ ಆ ದೃಶ್ಯ 22 ಫೆಬ್ರವರಿ 1931ರಲ್ಲಿ ಪತಿತ ಪಾವನ ಮಂದಿರ ಉದ್ಘಾಟನೆಯ ಸಂದರ್ಭವನ್ನು ನೆನಪಿಗೆ ತಂದುಕೊಡುತ್ತಿತ್ತು.

2

ಸಮಾಜದ ಒಂದು ವರ್ಗವನ್ನು ಅಸ್ಪೃಶ್ಯರೆಂದು ಕರೆದು ಅವರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎಂದು ಹಠ ಹಿಡಿದ ಮೇಲ್ವರ್ಗದ ಜನರಿಗೆ ಉತ್ತರವಾಗಿ “ಯಾವ ಹಿಂದುವೂ ಪತಿತನಲ್ಲ, ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಕ್ಕೆ ಯಾವ ವೇದ ಉಪನಿಷತ್ತುಗಳಲ್ಲೂ ಸಮರ್ಥನೆಯಿಲ‌್ಲ.” ಎಂದು ವಾದಿಸಿದ ಸಾವರ್ಕರ್ ರವರು ಎಲ್ಲ ಜಾತಿಯ ಜನರಿಗೂ ದೇವಾಲಯ ಪ್ರವೇಶ ದೊರಕಿಸಿಕೊಡಲು ಈ ಪತಿತ ಪಾವನ ಮಂದಿರವನ್ನು ಕಟ್ಟಿಸಿದ್ದರು. ಸ್ವತಃ ತಾವೇ ದಲಿತ ಹುಡುಗನೊಬ್ಬನಿಗೇ ಶಾಸ್ತ್ರೋಕ್ತವಾದ ರೀತಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಹೇಳಿಕೊಟ್ಟು ಅವರಿಂದಲೇ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದ್ದರು. ಸಾವರ್ಕರರ ಈ ಚಳುವಳಿಯನ್ನು ಬೆಂಬಲಿಸಿ ಸ್ವತಃ ಶಂಕರಾಚಾರ್ಯರೇ ದೇವಾಲಯದ ಲೋಕಾರ್ಪಣೆಗೆ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಇದು ರತ್ನಾಗಿರಿಯಲ್ಲಿ ಬಹುದೊಡ್ಡ ಪರಿವರ್ತನೆಗೆ ಕಾರಣವಾಗಿತ್ತು. ಸಾವರ್ಕರರ ಈ ಸಾಹಸವು, ಜಾತಿ ಪದ್ಧತಿ ಬಲವಾಗಿ ಬೇರೂರಲ್ಪಟ್ಟಿದ್ದ ಅಂದಿನ ದಿನಗಳಲ್ಲಿ ಅತ್ಯಂತ ಕ್ರಾಂತಿಕಾರಿ ಎಂದೇ ಕರೆಯಲ್ಪಟ್ಟತ್ತು.

ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವೆಲ್ಲರೂ ಆ ಐತಿಹಾಸಿಕ ದೇಗುಲದೊಳಗೆ ಪ್ರವೇಶ ಮಾಡಲಿದ್ದೆವು. ದೇವಾಲಯ ಪ್ರವೇಶಕ್ಕೂ ಮುನ್ನ ಅದರ ಪ್ರವೇಶ ದ್ವಾರದ ಬಳಿ ಇರುವ ಒಂದು ಕಲಾಕೃತಿ ನಮ್ಮ ಗಮನ ಸೆಳೆಯಿತು. ಸಾವರ್ಕರ್ ರು ಹಿಂದೂ ಧರ್ಮದ ಉನ್ನತಿಗೆ ಅಡ್ಡಿಯಾಗಿರುವ ಏಳು ಬಂಧಿಗಳನ್ನು ಕಳಚುತ್ತಿರುವ ಚಿತ್ರಣವಿರುವ ಆ ಸುಂದರ ಕಲಾಕೃತಿಯ ಬಳಿ ನಿಂತೆವು. ಚಕ್ರವರ್ತಿ ಸೂಲಿಬೆಲೆಯವರು ಆ ಏಳು ಬಂಧನಗಳ ಬಗ್ಗೆ ಎಲ್ಲರಿಗೂ ವಿವರಿಸಿದರು.

ಸಾವರ್ಕರರು ಗುರುತಿಸಿದ ಏಳು ಬಂಧನಗಳು ಹೀಗಿವೆ : 1. ಸಿಂಧು ಬಂಧಿ (ಸಮುದ್ರವನ್ನು ದಾಟದಿರುವುದು), 2. ಸ್ಪರ್ಶ ಬಂಧಿ (ಮುಟ್ಟಿಸಿಕೊಳ್ಳದೆ ಇರುವುದು), 3. ವೇದೋಕ್ತ ಬಂಧಿ (ಜಾತಿಯ ಕಾರಣಕ್ಕೆ ವೇದ ಶಾಸ್ತ್ರಗಳ ಅಧ್ಯಯನವನ್ನು ನಿಷೇಧಿಸುವುದು), 4. ವ್ಯವಸಾಯ ಬಂಧಿ (ಎಲ್ಲ ಜಾತಿಯವರಿಗೂ ವ್ಯವಸಾಯವನ್ನು ಮುಕ್ತಗೊಳಿಸದಿರುವುದು), 5. ರೋಟಿ ಬಂಧಿ (ಸಹಭೋಜನವನ್ನು ಮಾಡದೆ ಇರುವುದು), 6. ಶುದ್ಧಿ ಬಂಧಿ (ಮತಾಂತರಗೊಂಡವರನ್ನು ಮರಳಿ ಮಾತೃ ಧರ್ಮಕ್ಕೆ ಮತ್ತೆ ಸೇರಿಸಿಕೊಳ್ಳದೆ ಇರುವುದು), 7. ಬೇಟಿ ಬಂಧಿ (ಅಂತರ್ಜಾತೀಯ ವಿವಾಹವನ್ನು ನಿಷೇಧಿಸುವುದು). ಈ ರೀತಿಯ ಏಳು ಬಂಧನಗಳನ್ನು ಕಿತ್ತೊಗೆದು ಸಾವರ್ಕರರ ಕನಸಿನಂತೆ ಈ ದೇಶದ ತರುಣರು ಈ ಧರ್ಮ ಮತ್ತು ದೇಶವನ್ನು ರಕ್ಷಿಸಬೇಕೆಂದು ಕರೆ ನೀಡಿದರು. ಎಲ್ಲರೂ ಒಕ್ಕೋರಲಿನಿಂದ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಸಾವರ್ಕರ್ ಕೀ ಜೈ ಘೋಷಣೆಗಳನ್ನು ಹಾಕುತ್ತಾ ದೇವಾಲಯವನ್ನು ಪ್ರವೇಶಿಸಿದೆವು.

ದೇವಾಲಯದ ಗರ್ಭಗುಡಿಗೆ ನಾವೆಲ್ಲರೂ ಪ್ರವೇಶಿಸಿ ನಮ್ಮ ಕೈಯಾರೆ ಲಕ್ಷ್ಮಿನಾರಾಯಣರಿಗೆ ಆರತಿ ಬೆಳಗಿದೆವು. ಇಂದಿಗೂ ಜೀವಂತವಾಗಿರುವ ಜಾತಿ ಪದ್ಧತಿಯನ್ನು ಹೋಗಲಾಡಿಸಲು ನಮಗೆ ಶಕ್ತಿ ಕೊಡೆಂದು ಭಗವಂತನನ್ನು ಬೇಡಿಕೊಂಡು, ತೀರ್ಥ ಪ್ರಸಾದವನ್ನು ಸ್ವೀಕರಿಸಿ ಪಕ್ಕದಲ್ಲೇ ಇದ್ದ ಮ್ಯೂಸಿಯಂ ಅನ್ನು ನೋಡಲು ಹೋದೆವು. ಅಲ್ಲಿ ಸಾವರ್ಕರ್ ಬಳಸಿದ್ದ ಪಿಸ್ತೂಲು ಸೇರಿದಂತೆ ಅವರು ಪೂಜಿಸುತ್ತಿದ್ದ ದೇವತೆಯ ವಿಗ್ರಹ ಮತ್ತಿತರ ಅಮೂಲ್ಯ ವಸ್ತುಗಳು ನಮಗೆ ನೋಡಲು ಸಿಕ್ಕವು. ಗೋಡೆಯ ಮೇಲೆ ಬರೆದಿದ್ದ ಅವರ ಪ್ರಸಿದ್ಧ ಹೇಳಿಕೆ “ದೇಶಭಕ್ತಿಯ ಈ ವ್ರತವನ್ನು ನಾವು ಕುರುಡು ಕುರುಡಾಗಿ ಕಣ್ಣುಮುಚ್ಚಿಕೊಂಡು ಸ್ವೀಕರಿಸಿಲ್ಲ. ಇತಿಹಾಸದ ಪ್ರಖರ ಬೆಳಕಿನಲ್ಲಿ ಈ ಸತ್ಯವನ್ನು ಪರಿಶೀಲಿಸಿ, ರಾಷ್ಟ್ರಭಕ್ತಿಯ ಈ ಪವಿತ್ರಾಗ್ನಿಯಲ್ಲಿ ಭಸ್ಮಗೊಳ್ಳಲು ಬುದ್ಧಿಪೂರ್ವಕವಾಗಿ ನಿಶ್ಚಯಿಸಿದ್ದೇವೆ.” ಎಂಬುದನ್ನು ಓದಿ ರೋಮಾಂಚಿತರಾದೆವು.

3

ಇದಾದ ನಂತರ ದೇವಸ್ಥಾನದ ಆಡಳಿತ ಮಂಡಳಿಯವರೊಂದಿಗೆ ಮಂದಿರದೊಳಗೇ ಪುಟ್ಟದೊಂದು ಸತ್ಸಂಗ ನಡೆಯಿತು. ಸಾವರ್ಕರ್ ರ ಜೊತೆ ಕೆಲಸ ಮಾಡಿದ್ದವರ ನಂತರದ ಪೀಳಿಗೆಯವರು ತಮ್ಮ ಪೂರ್ವಜರು ಸಾವರ್ಕರ್ ರ ಬಗ್ಗೆ ಹೇಳುತ್ತಿದ್ದ ಘಟನೆಗಳನ್ನು ನೆನಪಿಸಿಕೊಂಡರು. ನಾವು ಯುವಾ ಬ್ರಿಗೇಡ್ ವತಿಯಿಂದ ಮಾಡಿದ್ದ ಸಾವರ್ಕರ್ ಕೆಲಸಗಳ ಒಂದು ಪುಟ್ಟ ಆಲ್ಬಂ ಮತ್ತು ಟೇಬಲ್ ಟಾಪ್ ಕ್ಯಾಲೆಂಡರ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದೆವು. ಯುವಕರು ಮಾಡುತ್ತಿರುವ ಸಾವರ್ಕರ್ ಬಗೆಗಿನ ಈ ಕೆಲಸವನ್ನು ನೋಡಿ ಅವರಿಗೆಲ್ಲಾ ಬಹಳ ಸಂತಸವಾಯಿತು. ಮನದುಂಬಿ ನಮ್ಮನ್ನು ಆಶೀರ್ವದಿಸಿದರು. ಮುಂದೆ ಪತಿತ ಪಾವನ ಮಂದಿರದ ಒಳಗೆ ಸಹಭೋಜನವನ್ನು ಏರ್ಪಡಿಸಲಾಗಿತ್ತು. ಸಾವರ್ಕರ್ ರೇ ಸ್ವತಃ ಆರಂಭಿಸಿದ್ದ ಆ ಸಹಭೋಜನವನ್ನು ಅವರು ಕುಳಿತಿದ್ದ ಆ ಜಾಗದಲ್ಲಿ ಕುಳಿತು ಸ್ವೀಕರಿಸಿದ ನಾವು ಪ್ರಸಾದದ ನಂತರ ದೇವಸ್ಥಾನದ ಆಡಳಿತ ಮಂಡಳಿಯವರಿಗೆಲ್ಲ ಧನ್ಯವಾದ ಹೇಳಿ ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.

ಅಲ್ಲಿಂದ ನಾವು ಅಂಬಾ ಘಾಟ್ ನ ಮಾರ್ಗದಲ್ಲಿ ಪ್ರಕೃತಿಯ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಚಹಾ ಮತ್ತು ಮುಸುಕಿನ ಜೋಳವನ್ನು ತಿನ್ನುತ್ತಾ ಪನ್ನಾಳಗಢದೆಡೆಗೆ ಹೊರಟೆವು. ಅಂಬಾ ಘಾಟ್ ನ ನಿಸರ್ಗ ಸೌಂದರ್ಯ ಹುಚ್ಚು ಹಿಡಿಸುವಂತಿತ್ತು. ಹಿಂದಿನ ದಿನ ವಿಪರೀತ ಮಳೆಯಿಂದ ಪ್ರಯಾಣವೇ ದುಸ್ತರ ಎನ್ನುವಂತಿತ್ತು. ಆದರಿಂದು ವಾತಾವರಣ ತಿಳಿಯಾಗಿ ನಮ್ಮ ಪ್ರಯಾಣ ಹಿತಕರವಾಗುವಂತೆ ಮಾಡಿತ್ತು. ಆದ್ದರಿಂದಲೇ ದಾರಿ ಮಧ್ಯದಲ್ಲಿ ಎಲ್ಲರೂ ಇಳಿದು ಪ್ರಕೃತಿಯ ಮಧ್ಯದಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಒಂದಷ್ಟು ಕಾಲ ಕಳೆದೆವು. ಅಷ್ಟರಲ್ಲಾಗಲೇ ಊಟದ ಸಮಯವಾಗಿದ್ದರಿಂದ ಹೋಟೇಲೊಂದರಲ್ಲಿ ಮಹಾರಾಷ್ಟ್ರಾದ ವಿಶೇಷ ಝುಣಕಾ ಭಾಕ್ರಿ (ರೋಟಿ ಮತ್ತು ದಾಲ್) ಯನ್ನು ತಿಂದು ಕೋಟೆಯನ್ನು ನೋಡಲು ಹೊರಟೆವು.

10

ಪನ್ನಾಳಗಢ ಒಂದು ದುರ್ಗಮ ಕೋಟೆ. ಶಿವಾಜಿ ಮಹಾರಾಜರನ್ನು ಸೆರೆಹಿಡಿಯಲು ವಿಜಯಪುರ ಸುಲ್ತಾನರ ಸೇನಾಪತಿ ಸಿದ್ದಿ ಜೋಹರ್ ತನ್ನ ಬೃಹತ್ ಸೈನ್ಯದೊಂದಿಗೆ ಈ ಕೋಟೆಗೆ ಮುತ್ತಿಗೆ ಹಾಕಿದಾಗ ಇಲ್ಲಿಂದಲೇ ಶಿವಾಜಿ ಮಹಾರಾಜರು ಮಿಂಚಿನಂತೆ ತಪ್ಪಿಸಿಕೊಂಡು ವಿಶಾಲಗಢಕ್ಕೆ ಹೋಗಿದ್ದು. ಸಿದ್ದಿ ಜೋಹರ್ ಶಿವಾಜಿ ಮಹಾರಾಜರನ್ನು ಹಿಡಿಯಲು ಕೋಟೆಯ ಎಂಟು ದಿಕ್ಕುಗಳನ್ನೂ ತನ್ನ ವಶಕ್ಕೆ ಪಡೆದು ಆಹಾರ ಧಾನ್ಯದ ಕೊರತೆ ಉಂಟಾಗುವಂತೆ ಮಾಡಿ ಶಿವಾಜಿ ಮಹಾರಾಜರು ಶರಣಾಗತರಾಗುವಂತೆ ಮಾಡಲು ಉಪಾಯ ಹೂಡಿದ್ದ. ಆದರೆ ಶಿವಾಜಿ ಮಹಾರಾಜರು ಅವನಿಗೆ ಚಳ್ಳೆಹಣ್ಣು ತಿನ್ನಿಸಲು ಒಂದು ಚತುರ ಉಪಾಯ ಮಾಡಿದ್ದರು. ಪನ್ನಾಳದ ಕೋಟೆಯೊಳಗಿದ್ದ, ನೋಡಲು ಶಿವಾಜಿಯಂತೆಯೇ ಕಾಣುತ್ತಿದ್ದ ಕ್ಷೌರಿಕನೊಬ್ಬನಿಗೆ ತರಬೇತಿ ನೀಡಿ ನಕಲಿ ಶಿವಾಜಿಯನ್ನು ಸೃಷ್ಟಿಸಿದರು. ಶತ್ರುಗಳ ಕಣ್ಣಿಗೆ ಮಣ್ಣೆರಚಿ ಕೋಟೆಯ ರಹಸ್ಯ ದಾರಿಯೊಂದನ್ನು ಹಿಡಿದು ವಿಶಾಲ ಗಢಕ್ಕೆ ಪಾರಾಗಲು ತಯಾರಿ ನಡೆಸಿದರು‌. ಶತ್ರುಗಳ ಕಣ್ಣಿಗೆ ಈ ನಕಲಿ ಶಿವಾಜಿಯನ್ನು ಕಾಣುವಂತೆ ಮಾಡಿ ಅವನನ್ನು ಹಿಡಿಯುವ ಪ್ರಯತ್ನಕ್ಕೆ ಶತ್ರುಗಳನ್ನು ದೂಡಿ ತಾವು 600 ಸೈನಿಕರ ತಂಡದೊಂದಿಗೆ ಬೇರೆ ದಾರಿಯಲ್ಲಿ ತಪ್ಪಿಸಿಕೊಂಡುಬಿಟ್ಟರು.

ಶತ್ರುಗಳು ಈ ನಕಲಿ ಶಿವಾಜಿಯನ್ನು ಹಿಡಿದು ಶಿವಾಜಿಯನ್ನೇ ಬಂಧಿಸಿದ್ದೇವೆಂಬ ಭ್ರಮೆಯಲ್ಲಿದ್ದರು. ಆದರೆ ಆ ಶಿವಾಜಿಯನ್ನು ಮಾತನಾಡಿಸಿದಾಗಲೇ ತಿಳಿದದ್ದು ಇವನು ನಕಲಿ ಎಂದು! ಶಿವಾಜಿ ತಪ್ಪಿಸಿಕೊಂಡರೆಂದು ತಿಳಿಯುತ್ತಲೇ ವ್ಯಗ್ರರಾದ ಶತ್ರುಗಳು ಕೋಪದಿಂದ ಅವನನ್ನು ಅಲ್ಲೇ ಕೊಂದುಬಿಟ್ಟರು. ಶಿವಾಜಿಯ ವೇಷದಲ್ಲಿದ್ದ ಕ್ಷೌರಿಕ ಒಡೆಯನ ಪ್ರಾಣ ಉಳಿಸಿದ ನೆಮ್ಮದಿಯಿಂದ ಪ್ರಾಣ ಬಿಟ್ಟ.

ಅಲ್ಲಿಂದ ತಪ್ಪಿಸಿಕೊಂಡು ಹೊರಟ ಶಿವಾಜಿ ಮಹಾರಾಜರನ್ನು ಸಿದ್ದಿಯ ಸೈನ್ಯ ಅಟ್ಟಿಸಿಕೊಂಡು ಹೋಯಿತು. ವಿಶಾಲಗಢ ಇನ್ನೂ ಬಹಳ ದೂರದಲ್ಲಿತ್ತು. ಶಿವಾಜಿ ಮಹಾರಾಜರನ್ನು ಹೊತ್ತ ಢೋಳಿಯವರು ಶಕ್ತಿ ಮೀರಿ ಓಡುತ್ತಿದ್ದರು. ಶತ್ರುಗಳು ಬೇಟೆ ನಾಯಿಗಳಂತೆ ಬೆನ್ನು ಹತ್ತುತ್ತಿದ್ದರು. ಹೀಗೆ ತಪ್ಪಿಸಿಕೊಂಡು ಓಡುತ್ತಿದರೆ ಸಿಕ್ಕಿಬೀಳುವುದು ಖಾತ್ರಿ ಎಂದು ಅರಿತ ಶಿವಾಜಿಯ ನೆಚ್ಚಿನ ಬಂಟ ಬಾಜಿ ಪ್ರಭು ದೇಶಪಾಂಡೆ ಶಿವಾಜಿ ಮಹಾರಾಜರನ್ನು ಹೊತ್ತಿದ್ದ ಢೊಳಿಯನ್ನು ಮುಂದೆ ಬಿಟ್ಟು ಒಂದು ಕುದುರೆ ಹೋಗಬಹುದಾದಷ್ಟು ಮಾತ್ರ ಜಾಗವಿದ್ದ ಕಿಂಡಿಯೊಂದರ ಬಳಿ ತಾನು ಅಡ್ಡ ನಿಂತ. ವಿಶಾಲ ಗಢವನ್ನು ತಲುಪಿ ನೀವು ತೋಪು ಹಾರಿಸುವವರೆಗೂ ಇಲ್ಲಿಂದ ಒಬ್ಬ ಶತ್ರುವನ್ನೂ ಒಳಗೆ ಬಿಡುವುದಿಲ್ಲವೆಂಬ ಪ್ರತಿಜ್ಞೆ ಮಾಡಿ ಶಿವಾಜಿ ಮಹಾರಾಜರನ್ನು 300 ಜನರನ್ನು ಹೊಂದಿದ ಅರ್ಧ ಸೈನ್ಯದೊಡನೆ ಕಳುಹಿಸಿಕೊಟ್ಟ. ಶಿವಾಜಿ ಮಹಾರಾಜರು ಬಾಜಿ ಪ್ರಭುವಿಗೆ ತೋಪಿನ ಶಬ್ದ ಕೇಳಿದೊಡನೆಯೇ ಸುರಕ್ಷಿತವಾಗಿ ಮರಳಿ ಬಂದುಬಿಡುವಂತೆ ಹೇಳಿ ವಿಜಯ ದೊರೆಯಲೆಂದು ಹರಸಿ ಅಲ್ಲಿಂದ ಹೊರಟರು.

ಶಿವಾಜಿ ಮಹಾರಾಜರು ಹೊರಟ ಕೆಲವೇ ನಿಮಿಷಗಳಲ್ಲಿ ಸಿದ್ದಿಯ ಸೈನ್ಯವು ಕಿಂಡಿಯನ್ನು ತಲುಪಿತು. ಉಳಿದಿದ್ದ ಅರ್ಧ ತಂಡದೊಂದಿಗೆ ತನ್ನೆರಡು ಕೈಗಳಲ್ಲೂ ಕತ್ತಿ ಹಿರಿದು ನಿಂತ 45 ವರ್ಷ ವಯಸ್ಸಿನ ಆರು ಅಡಿ ಎತ್ತರದ ಬಾಜಿ ಪ್ರಭು ಎದುರಾಳಿಗಳನ್ನು ತರಿದು ತರಿದು ಬಿಸಾಡತೊಡಗಿದ. ಆತನ ಕತ್ತಿಯ ಅಲುಗಿಗೆ ಸಿಕ್ಕಿ ಶತ್ರುಗಳ ರುಂಡಗಳು ಚೆಂಡಿನಂತೆ ಕೆಳಗೆ ಬೀಳತೊಡಗಿದವು. ಹಲವಾರು ಗಂಟೆಗಳ ಕಾಲ ಸೆಣೆಸಿದ ಬಾಜಿ ಪ್ರಭುವಿನ ದೇಹದಲ್ಲಿ ಅಸಂಖ್ಯ ಗಾಯಗಳಿಂದಾಗಿ ರಕ್ತ ಒಸರುತ್ತಿತ್ತು. ಕುತ್ತಿಗೆಗೆ ಆಳವಾದ ಗಾಯವಾಗಿತ್ತು. ಅಷ್ಟಾದರೂ ಜೀವ ಹಿಡಿದಿಟ್ಟುಕೊಂಡು ಹೋರಾಟ ಮಾಡಿದ ಬಾಜಿ ಪ್ರಭು, ಶಿವಾಜಿ ಮಹಾರಾಜರು ವಿಶಾಲಗಢ ತಲುಪಿ ಹಾರಿಸಿದ ತೋಪುಗಳ ಶಬ್ದ ಕೇಳಿಸಿದ ನಂತರವೇ ಪ್ರಾಣ ಬಿಟ್ಟದ್ದು. ಹೀಗೆ ಹಿಂದುತ್ವದ ಮುಕುಟಮಣಿಯನ್ನು ಕಾಪಾಡಲು ಬಾಜಿರಾಯ ತನ್ನ ಪ್ರಾಣವನ್ನೇ ಅರ್ಪಿಸಿದ. ಆ ವೀರನ ರಕ್ತದಿಂದ ಪಾವನವಾದ ಆ ಜಾಗವನ್ನು ಇಂದು ಪಾವನ ಖಿಂಡಿ ಎಂದೇ ಕರೆಯಲಾಗುತ್ತದೆ.

ಇಂಥಾ ಅದ್ಭುತವಾದ ಘಟನೆ ನಡೆದ ಆ ಪನ್ನಾಳ ಕೋಟೆಯನ್ನು ನೋಡುತ್ತಾ ಮುಂದುವರೆದೆವು. ಭೋಜ ರಾಜ ಬಹಳ ಹಿಂದೆಯೇ ಕಟ್ಟಿಸಿದ ಈ ಕೋಟೆಗೆ ಮೂರು ಬಾಗಿಲುಗಳನ್ನು ಹೊಂದಿರುವಂತೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಅದಕ್ಕೆ ಇದನ್ನು ತೀನ್ ದರ್ವಾಜಾ ಎಂದೂ ಕರೆಯುತ್ತಾರೆ. ಕೋಟೆಯೊಳಗೆ ಧಾನ್ಯ ಸಂಗ್ರಹಕ್ಕೆಂದು ಕಟ್ಟಿಸಲಾದ ಬೃಹತ್ ಸಂಗ್ರಹಾಗಾರ ಅಂಬರ್ ಖಾನಾ, ಶಿವಾಜಿ ಮಹಾರಾಜರು ಮತ್ತು ಅವರ ಮಗ ಸಾಂಭಾಜಿ ವಾಸವಿರುತ್ತಿದ್ದ ಮಹಲ್ ಮತ್ತು ಅಂದರ್ ಭಾವಡಿ ಎಂದು ಕರೆಯಲ್ಪಡುವ ಅನೇಕ ನೀರಿನ ಬಾವಿಗಳನ್ನು ನೋಡಿಕೊಂಡು ಕೋಟೆಯ ಆರಂಭದಲ್ಲೇ ಇರುವ ಬಾಜಿ ಪ್ರಭುವಿನ ಎತ್ತರವಾದ ಭವ್ಯ ಪ್ರತಿಮೆಯ ಬಳಿಗೆ ವಾಪಸ್ಸು ಬಂದೆವು. ಬಾಜಿರಾಯನ ಆ ಪ್ರತಿಮೆ ಮುಳುಗುತ್ತಿದ್ದ ಸೂರ್ಯನ ಕೆಂಪು ಕಿರಣಗಳ ಹಿನ್ನೆಲೆಯಲ್ಲಿ ಶೋಭಾಯಮಾನವಾಗಿ ಕಂಡಿತು. ಅಲ್ಲೇ ಕುಳಿತು ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ ಮರಾಠಾ ಸಾಮ್ರಾಜ್ಯದ ಅನೇಕ ಕಥೆಗಳನ್ನು ಕೇಳಿದೆವು. ಕಥೆ ಕೇಳುತ್ತಾ ಕೇಳುತ್ತಾ ಸಮಯವಾಗಿದ್ದೇ ತಿಳಿಯಲಿಲ್ಲ.

12

ಅಲ್ಲಿಂದ ಮುಂದೆ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ತಲುಪಿದೆವು. ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ಅನೇಕ ಪುರಾಣಗಳಲ್ಲಿ ಉಲ್ಲೇಖವಾಗಿರುವ ಅತ್ಯಂತ ಪ್ರಾಚೀನವಾದ ಆ ಮಂದಿರವು, ಮಹಾಲಕ್ಷ್ಮಿ ತನ್ನ ಪತಿಯೊಡನೆ ಮುನಿಸಿಕೊಂಡು ಇಲ್ಲಿಗೆ ಬಂದಾಗ ಅವಳ ಭಕ್ತರು ನಿರ್ಮಿಸಿಕೊಟ್ಟಿದ್ದೆಂದು ಹೇಳುತ್ತಾರೆ. ಇಲ್ಲಿಯ ಜನ ಅವಳನ್ನು ಚೆನ್ನಾಗಿ ನೋಡಿಕೊಂಡ ಕಾರಣಕ್ಕೆ ಇಲ್ಲಿನ ಜನರು ಯಾವಾಗಲೂ ಬಡವರಾಗದಂತೆ ತಾನು ನೋಡಿಕೊಳ್ಳುವುದಾಗಿ ಅಭಯ ನೀಡಿದಳಂತೆ. ದೇವಾಲಯದ ವಾಸ್ತುಶಿಲ್ಪ ಅದ್ಭುತವಾಗಿದ್ದು ಅನೇಕ ರಾಜವಂಶಸ್ಥರು ಈ ದೇವಾಲಯದ ಅಭಿವೃದ್ದಿಗಾಗಿ ಶ್ರಮಿಸಿದ್ದಾಗಿ ಇತಿಹಾಸ ತಿಳಿಸುತ್ತದೆ. ಇಂಥಾ ಅದ್ಭುತವಾದ ದೇವಾಲಯವನ್ನು ನೋಡಿಕೊಂಡು ಅಲ್ಲೇ ಪುಟ್ಟ ಸಭೆಯೊಂದನ್ನು ನಡೆಸಿ ಯುವಾ ಬ್ರಿಗೇಡ್ ನ ಮುಂದಿನ ಕೆಲವು ಯೋಜನೆಗಳನ್ನು ನಿಶ್ಚಯಿಸಿದೆವು
ಅಲ್ಲಿಂದ ಮುಂದೆ ನಾವು ಹೊರಟದ್ದು ಸಿಂಹಗಢಕ್ಕೆ. ಇಡೀ ರಾತ್ರಿ ಪ್ರಯಾಣ ಮಾಡಿ ಸಿಂಹಗಢ ತಲುಪುವ ವೇಳೆಗೆ ಬೆಳಗಿನ ಜಾವ ಮೂರಾಗಿತ್ತು. ಅತ್ಯಂತ ಎತ್ತರದ ಆ ಪ್ರದೇಶದಲ್ಲಿ ಗಾಳಿ ಜೋರಾಗಿ ಬೀಸುತ್ತಿತ್ತು. ಬೆಟ್ಟದಿಂದ ಕೆಳಗೆ ನೋಡಿದರೆ, ಸಾಲಾಗಿ ಹಚ್ಚಿದ್ದ ಕೆಂಪು ಬೀದಿ ದೀಪಗಳು ಯುದ್ಧದ ಸನ್ನಿವೇಶವನ್ನು ಜ್ಞಾಪಿಸುತ್ತಿದ್ದವು. ಬೀಸುತ್ತಿದ್ದ ಜೋರುಗಾಳಿ ಕುದುರೆಗಳ ಹೇಷಾರವದಂತೆ ಕೇಳಿಸುತ್ತಿತ್ತು. ಜಾಸ್ತಿ ಹೊತ್ತು ಆ ಅನುಭವವನ್ನು ಸಹಿಸಲಾಗದೆ ಮತ್ತೆ ಗಾಡಿಯ ಒಳಗೆ ಹೋಗಿ ಕುಳಿತು ನಿದ್ರೆ ಹೋದೆವು. ಬೆಳಿಗ್ಗೆ 5 – 6 ಗಂಟೆಯ ಸುಮಾರಿಗೆ ಸೂರ್ಯೋದಯವಾಯಿತು. ಸಹ್ಯಾದ್ರಿಯ ಆ ಸುಂದರ ಬೆಟ್ಟಗಳ ಸಾಲಿನಲ್ಲಿ ಹಸುರಿನ ಹಾಸಿನ ಮೇಲೆ ನಿಧಾನವಾಗಿ ಉದಯಿಸುತ್ತಿದ್ದ ಸೂರ್ಯ ನಮಗೆ ಅದ್ಭುತವಾದ ಆಹ್ಲಾದಕರ ಅನುಭವವನ್ನು ತಂದುಕೊಡುತ್ತಿದ್ದ. ಹಸಿರಿನ ಮೇಲೆ ನಡೆದುಕೊಂಡು ಬೆಟ್ಟದ ತುದಿಯವರೆಗೂ ಬಂದ ನಾವು, ಅಲ್ಲೇ ನಿಂತು ಗಾಯತ್ರಿ ಮಂತ್ರವನ್ನು ಸಾಮೂಹಿಕವಾಗಿ ಹೇಳುವ ಮೂಲಕ ಉದಯಿಸುತ್ತಿದ್ದ ಸೂರ್ಯನಿಗೆ ವಂದನೆಯನ್ನು ಸಮರ್ಪಿಸಿದೆವು. ಅಲ್ಲಿಂದ ಮತ್ತೆ ವಾಪಸ್ಸು ಬಂದು ಚಹಾ ಕುಡಿದು ಸಿಂಹಗಢದ ಕೋಟೆಯನ್ನು ಏರಲು ಆರಂಭಿಸಿದೆವು.

ಸಿಂಹಗಢ ಮಹಾರಾಷ್ಟ್ರದ ಅತ್ಯಂತ ಪ್ರಮುಖವಾದ ಕೋಟೆ. ಸಮುದ್ರ ಮಟ್ಟದಿಂದ 4304 ಅಡಿ ಎತ್ತರದಲ್ಲಿರುವ ಈ ಕೋಟೆಯು ಯುದ್ಧನೀತಿಯ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ. ಆ ಕಾರಣದಿಂದಲೇ ಈ ಕೋಟೆಯನ್ನು ಗೆಲ್ಲುವುದಕ್ಕಾಗಿ ಅನೇಕ ಯುದ್ಧಗಳು ನಡೆದಿವೆ. ಅದರಲ್ಲಿ ಪ್ರಮುಖವಾದ ಯುದ್ಧವೊಂದು ಶಿವಾಜಿ ಮಹಾರಾಜರ ಕಾಲದಲ್ಲಿ ಘಟಿಸುತ್ತದೆ. ತಾನಾಜಿ ಮಾಲಸುರೆ ಎಂಬ ಸರದಾರ ತನ್ನ 500 ಜನ ಸೈನಿಕರೊಡನೆ ಹೋಗಿ 5,000 ಜನ ಶತ್ರು ಸೈನಿಕರನ್ನು ಸೋಲಿಸಿ ಗಢವನ್ನು ಗೆದ್ದ ಆ ಯುದ್ಧ ಮರಾಠೀ ಲಾವಣಿಗಳಲ್ಲಿ ಇಂದಿಗೂ ಜೀವಂತವಾಗಿದೆ. ಕೌಂಡಿನ್ಯ ಋಷಿಗಳ ಹೆಸರನ್ನು ಹೊಂದಿದ್ದ ಈ ಗಢ ಮುಂದೆ ಕೊಂಡಾಣವಾಗಿ ಕಾಲಾಂತರದಲ್ಲಿ ಸಿಂಹಗಢ ಎಂದು ಕರೆಸಿಕೊಂಡಿತು.

ಇಂಥಾ ಸಿಂಹಗಢಕ್ಕೆ ನಾವು ಬಂದು ತಲುಪಿದ್ದೆವು. ಗಢದ ಮೇಲೇರುವಾಗ ಅಕ್ಕ ಪಕ್ಕದಲ್ಲಿ ಕುಡಿಯುವ ನೀರಿಗಾಗಿ ರೂಪಿಸಿದ್ದ ಬಾವಿಗಳು ಮತ್ತು ನೀರಿನ ಮೂಲಗಳು ಕಂಡು ಬಂದವು. ಅಲ್ಲಿಂದ ನಾವು ಬೆಟ್ಟದ ತುದಿಯಲ್ಲಿದ್ದ ಕೊಂಡಾಣೇಶ್ವರ ದೇವಾಲಯದ ಬಳಿಗೆ ಬಂದು ಕುಳಿತೆವು. ಶಿವಾಜಿ ಮಹಾರಾಜರೂ ಸೇರಿದಂತೆ ಅನೇಕ ರಾಜ ಮಹಾರಾಜರಿಂದ ಪೂಜಿಸಲ್ಪಟ್ಟಿದ್ದ ಆ ದೇವಸ್ಥಾನದ ಮುಂದೆ ಕುಳಿತು ರಮ್ಯವಾಗಿದ್ದ ಪ್ರಕೃತಿಯ ಮಧ್ಯದಲ್ಲಿ ಶಿವಾಜಿ ಮಹಾರಾಜರ ಇತಿಹಾಸವನ್ನು ಕೇಳುತ್ತಾ ಧ್ಯಾನ ಮಾಡುತ್ತಾ ಅದರ ನಂತರ ಸ್ಮಾರಕಗಳ ಉಪಯುಕ್ತತೆ ಮತ್ತು ಅದನ್ನು ಉಳಿಸುವುದರ ಕುರಿತು ಸುದೀರ್ಘವಾಗಿ ಚರ್ಚಿಸಿದೆವು. ಅಕ್ಟೋಬರ್ ಎರಡರ ಗಾಂಧಿ ಜಯಂತಿಯಂದು ರಾಜ್ಯದ ಬೇರೆ ಬೇರೆ ಭಾಗಗಳ ಸ್ವಾತಂತ್ರ್ಯವೀರರ ಸಮಾಧಿಗಳೂ ಸೇರಿದಂತೆ ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಚಗೊಳಿಸುವುದಾಗಿ ಸಂಕಲ್ಪ ಮಾಡಿದೆವು. ಇದಾದ ನಂತರ ಅಲ್ಲೇ ಪಕ್ಕದಲ್ಲಿದ್ದ ಮರಾಠಾ ವೀರ ತಾನಾಜಿ ಮಾಲಸುರೇಯವರ ಸಮಾಧಿಯ ಮೇಲಿದ್ದ ಅವರ ಪ್ರತಿಮೆಯ ಬಳಿ ಬರುತ್ತಿದ್ದಂತೇ ಒಬ್ಬ ವಯಸ್ಸಾದ ವ್ಯಕ್ತಿ ಪೇಟ ಧರಿಸಿ ಕೈಲಿ ಭಗವಾ ಧ್ವಜ ಹಿಡಿದುಕೊಂಡು ನಮ್ಮ ಬಳಿ ಬಂದರು. ಬಂದವರೇ ನಮ್ಮನ್ನೆಲ್ಲಾ ಉದ್ದೇಶಿಸಿ ಮರಾಠಿಯಲ್ಲಿ ತಾನಾಜಿ ಮಾಲಸೂರೆಯ ಬಲಿದಾನದ ಲಾವಣಿ ಹಾಡತೊಡಗಿದರು. ಉಚ್ಛ ಧ್ವನಿಯಲ್ಲಿ ಅವನ ತ್ಯಾಗ ಪರಾಕ್ರಮದ ಕಥೆ ಹೇಳಲು ಶುರುವಿಟ್ಟರು. ಮುಂಜಾನೆಯಲ್ಲಿ ನಮ್ಮನ್ನು ಬಿಟ್ಟು ಆ‌ ಗಢದಲ್ಲಿ ಯಾರೂ ಇಲ್ಲದಿರುವ ಸಂದರ್ಭದಲ್ಲಿ ದಿಢೀರ್ ಎದುರಾದ ಈ ಸನ್ನಿವೇಶವನ್ನು ಇದೇನು ಕನಸೋ ನನಸೋ ಅಂತ ವಿಮರ್ಶಿಸುವಷ್ಟರಲ್ಲಿ ಕಥೆ ಆರಂಭವಾಗಿಬಿಟ್ಟಿತು.

18

ತಾನಾಜಿ ಶಿವಾಜಿ ಮಹಾರಾಜರ ನಂಬುಗೆಯ ಬಂಟ. ಅವನ ಮಗನ ಮದುವೆ ನಿಶ್ಚಯವಾಗಿರುವ ಹೊತ್ತಿನಲ್ಲಿ ಸಿಂಹಗಢವನ್ನು ವೈರಿ ಪಡೆಗಳಿಂದ ಗೆದ್ದುಕೊಡಬೇಕಾದ ಹೊಣೆಗಾರಿಕೆ ತಾನಾಜಿಯ ಹೆಗಲ ಮೇಲೆ ಬೀಳುತ್ತದೆ. ಸಿಂಹಗಢವನ್ನು ಗೆಲ್ಲಲು ಹೊರಟು ನಿಂತ ತಾನಾಜಿಗೆ ಮನೆಯವರು “ಮಗನ ಮದುವೆಯನ್ನು ಮಾಡಿ ಆಮೇಲಾದರೂ ಹೋಗಬಹುದಲ್ಲವೇ?” ಎಂದಾಗ ತಾನಾಜಿ “ಮೊದಲು ಕೊಂಡಾಣದ ಮದುವೆ! ಆಮೇಲೆ ಮಗನ ಮದುವೆ” ಎಂದನಂತೆ. ತಾನಾಜಿ ಅಲ್ಲಿಂದ ಶಿವಾಜಿಯ ಬಳಿ ತೆರಳಿ ಮಹಾರಾಜರಿಗೆ ವಂದಿಸಿ ಅವರಿಂದ ಬೀಳ್ಕೊಂಡು 500 ಜನ ಮರಾಠಾ ಸರದಾರರೊಡನೆ ಸಿಂಹಗಢಕ್ಕೆ ಮುತ್ತಿಗೆ ಹಾಕಿದ. 5,000 ಸೈನ್ಯಬಲವನ್ನು ಹೊಂದಿದ್ದ ಶತ್ರುಪಡೆಯನ್ನು ಮಣಿಸಿ ತಾನಾಜಿ ಕೋಟೆಯನ್ನು ಗೆದ್ದುಕೊಂಡ. ಆದರೆ ಅಲ್ಲಿ ನಡೆದ ಭೀಕರ ಹೋರಾಟದಲ್ಲಿ ತನ್ನ ಪ್ರಾಣವನ್ನೇ ಅರ್ಪಿಸಿದ.

ಶಿವಾಜಿ ಮಹಾರಾಜರಿಗೆ ಕೊಂಡಾಣವನ್ನು ಗೆದ್ದ ಶುಭ ಸುದ್ದಿ ಹೋಯಿತು. ಜೊತೆಗೇ ತಾನಾಜಿ ಹುತಾತ್ಮನಾದ ಸುದ್ದಿಯೂ. ತಾನಾಜಿಯ ಹೌತಾತ್ಮ್ಯಕ್ಕೆ ಮಮ್ಮಲ ಮರುಗಿದ ಶಿವಾಜಿ ಮಹಾರಾಜರು “ಗಢ ಆಲಾ ಪಣ ಸಿಂಹ ಗೇಲಾ” (ಗಢ ಏನೋ ಬಂತು ಆದರೆ ಸಿಂಹವೇ ಹೊರಟುಹೋಯಿತು) ಎಂದರಂತೆ. ಆ ಹಿರಿಯರ ಬಾಯಲ್ಲಿ ಈ ಕಥೆಯನ್ನು ಕೇಳಿದ ಎಲ್ಲರೂ ರೋಮಾಂಚನಗೊಂಡೆವು. ಅವರಿಗೆ ಧನ್ಯವಾದಗಳನ್ನು ತಿಳಿಸಿ ತಾನಾಜಿಯ ಸಮಾಧಿಗೆ ಭಕ್ತಿಯಿಂದ ನಮಸ್ಕರಿಸಿ ಸಿಂಹಗಢದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಹೊರಟೆವು.

ಸಿಂಹಗಢ ಹಚ್ಚ ಹಸಿರಿನ ಅದ್ಭುತ ಸೌಂದರ್ಯದ ಖನಿ. ಎಲ್ಲೆಲ್ಲೂ ಶುದ್ಧ ತಿಳಿ ನೀರಿನ ಬಾವಿಗಳಿರುವ ಈ ಗಢ ಶಿವಾಜಿ ಮಹಾರಾಜರಿಗೆ ಅತ್ಯಂತ ಮೆಚ್ಚಿನ  ಸ್ಥಳವಾಗಿತ್ತು. ಸಿಂಹಗಢವನ್ನು ಒಂದು ಸುತ್ತು ಹಾಕಿದ ನಾವೆಲ್ಲಾ ಬೇಕಾದಷ್ಟು ಫೋಟೋ ತೆಗೆಸಿಕೊಂಡು ಅಲ್ಲೇ ಇದ್ದ ಒಂದು ಹೋಟೇಲಿನಲ್ಲಿ ಝುಣಕ ಭಾಕ್ರಿ ತಿಂದು ಮೊಸರು ಕುಡಿದು ವಿಶ್ರಮಿಸಿಕೊಂಡೆವು. ಆದರೆ ಸಮಯ ಬಿಡಬೇಕಲ್ಲ ಇನ್ನೂ ಬಹಳಷ್ಟು ಸ್ಥಳಗಳನ್ನು ನೋಡುವುದಿತ್ತು‌. ಅದಾಗಲೇ ಮಳೆಯ ಕಾರಣದಿಂದ ಶಿವಾಜಿ ಮಹಾರಾಜರಿಗೆ ಛತ್ರಪತಿ ಎಂದು ಘೋಷಿಸಿ ಕಿರೀಟಧಾರಣೆ ಮಾಡಿದ ರಾಯಗಢವನ್ನು ನೊಡಲಾಗಿರಲಿಲ್ಲ. ಕನಿಷ್ಟ ಪಕ್ಷ ಉಳಿದ ಸ್ಥಳಗಳನ್ನಾದರೂ ನೋಡಬೇಕಿತ್ತು‌. ಹೀಗಾಗಿ ಸಿಂಹಗಢವನ್ನು ಒಲ್ಲದ ಮನಸ್ಸಿನಿಂದಲೇ ತೊರೆದೆವು.

ಅಲ್ಲಿಂದಾಚೆ ನಾವು ಹೋಗಿದ್ದು ಮರಾಠಾ ರಾಜ್ಯದ ಆಧಾರಸ್ತಂಭಗಳಾಗಿದ್ದ ಪೇಶ್ವೆಗಳ ಮನೆದೇವರಾದ ಪಾರ್ವತಿ ಬೆಟ್ಟದ ಪಾರ್ವತಿ ದೇವಸ್ಥಾನಕ್ಕೆ. ಪೂನಾದಲ್ಲಿ ಸಮುದ್ರ ಮಟ್ಟದಿಂದ 2100 ಅಡಿ ಎತ್ತರದಲ್ಲಿರುವ ಪುಟ್ಟ ಬೆಟ್ಟದ ಮೇಲಿರುವ ಈ ದೇವಸ್ಥಾನದ ಕೋಟೆ ಗೋಡೆಗಳ ಮೇಲೆ ನಿಂತರೆ ಇಡೀ ಪೂನಾ ನಗರ ಕಾಣುತ್ತದೆ. ಇದಕ್ಕೆ ಹೊಂದಿಕೊಂಡಂತೆಯೇ ಇರುವ ಕಟ್ಟಡವು ಪೇಶ್ವೆಗಳು ವಾಸಿಸುತ್ತಿದ್ದ ಜಾಗವಾಗಿತ್ತು. ಅವರು ಕುಸ್ತಿ,ಕತ್ತಿವರಸೆ ಕಲಿಯುತ್ತಿದ್ದ ಗರಡಿ ಮನೆಯಾಗಿತ್ತು. ಅಲ್ಲೀಗ ಒಂದು ಸುಂದರ ಮ್ಯೂಸಿಯಂ ಅನ್ನು ಸ್ಥಾಪಿಸಲಾಗಿದೆ. ಅಲ್ಲಿ ಪೇಶ್ವೆಗಳು ಬಳಸುತ್ತಿದ್ದ ಅಪರೂಪದ ವಸ್ತುಗಳು, ಚಿತ್ರಗಳು, ಆಯುಧಗಳನ್ನು ಕಾಣಬಹುದು. ಇಲ್ಲಿ ನಮಗೆಲ್ಲಾ, ತನ್ನ ಇಡೀ ಜೀವಿತಾವಧಿಯಲ್ಲೇ ಒಮ್ಮೆಯೂ ಸೋಲದ ಅಜಿಂಕ್ಯ ಸೇನಾಪತಿ ಬಾಜೀರಾವ್ ಪೇಶ್ವಾ ಕುರಿತಂತೆ ಸಾಕಷ್ಟು ಮಾಹಿತಿಯೂ ಲಭ್ಯವಾಯಿತು. ಅವನ ಮಗನಾದ ನಾನಾ ಸಾಹೇಬನ ಸಮಾಧಿಯೂ ಅಲ್ಲೇ ಇತ್ತು. ಹಿಂದುತ್ವವನ್ನು ಉಳಿಸಲು ತನ್ನ ಪ್ರಾಣವನ್ನು ಅರ್ಪಿಸಿದ ಅವನ ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ಮುಂದೆ ಹೊರಟೆವು.

ಪೇಶ್ವೆಗಳ ದೇವಾಲಯವನ್ನು ನೋಡಿದ ನಂತರ ಅವರು ವಾಸಿಸುತ್ತಿದ್ದ ಜಾಗವಾಗಿದ್ದ ಏಳು ಅಂತಸ್ತಿನ ಸುಂದರ ಮಹಲನ್ನು ಹೊಂದಿದ್ದ ಶನಿವಾರ ವಾಡಾ ವನ್ನು ನೋಡಲು ಹೊರಟೆವು. ಮರಾಠಾ ವೈಭವದ ಪ್ರತೀಕವಾಗಿ ಎಲ್ಲರ ಕಣ್ಣು ಕುಕ್ಕಿದ್ದ ಆ ಏಳು ಅಂತಸ್ತಿನ ಕಟ್ಟಡವು ಬ್ರಿಟೀಷರ ವಶಕ್ಕೆ ಬಂದ ನಂತರ ಬೆಂಕಿ ಅಪಘಾತಕ್ಕೆ ಸಿಲುಕಿ ನಾಶವಾಗಿ ಈಗ ಕೇವಲ ಸುತ್ತಲಿನ ಕೋಟೆ ಮಾತ್ರ ಉಳಿದಿದೆ. ಇಂಥಾ ಜಾಗದಲ್ಲಿ “ಇದು ಇಲ್ಲಿ ಇತ್ತು” ಎಂದು ಹೇಳಲು ಆ ಕಟ್ಟಡಗಳ ಅಡಿಪಾಯಗಳು ಮಾತ್ರ ದೊರಕುತ್ತವೆ. ಆದರೆ ಸುತ್ತಲಿನ ಕಲ್ಲಿನ ಕೋಟೆ ಮಾತ್ರ ಯಾವುದಕ್ಕೂ ಅಳುಕದೇ ಗಟ್ಟಿಯಾಗಿ ನಿಂತಿದೆ.

ಶನಿವಾರವಾಡದ ಭವ್ಯ ಹೆಬ್ಬಾಗಿಲನ್ನು ತೆರೆದ ತಕ್ಷಣ ಬಾಜಿರಾಯ ಇಲ್ಲೇ ಎಲ್ಲೋ ಓಡಾಡಿದಂತೆ ಭಾಸವಾಯಿತು. ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಸಿಕೊಂಡು ಗತ ವೈಭವವನ್ನು ಮರುಚಿತ್ರಿಸಲು ಸ್ಫೂರ್ತಿಯಾಗಿದ್ದ ಆ ಕೋಟೆಯ ಸುತ್ತ ಅದೇ ಗುಂಗಿನಲ್ಲಿ ಓಡಾಡಿದ ನಾವು ಅಲ್ಲೇ ಒಂದು ಕಡೆ ಕುಳಿತು ಪುಟ್ಟ ಬೈಠಕ್ ಮಾಡಿದೆವು. ಅದಾದ ನಂತರ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ವೀಕ್ಷಿಸಿದೆವು. ಮರಾಠಾ ಸಾಮ್ರಾಜ್ಯದ ಹೆಮ್ಮೆಯ ವಾಸಸ್ಥಳವಾಗಿದ್ದ ಆ ಜಾಗವನ್ನು ನೋಡಿ ನಮ್ಮೆಲ್ಲರ ಮನಸ್ಸು ನೂರಾರು ವರ್ಷಗಳ ಹಿಂದಕ್ಕೆ ಹೋಗಿಬಿಟ್ಟಿತ್ತು.

24

ಶನಿವಾರವಾಡಾದ ಇಂಚಿಂಚನ್ನೂ ಕಣ್ತುಂಬಿಕೊಂಡು ನಾವು ಪೂನಾ ನಗರದೊಳಗಿನ ಪ್ರಸಿದ್ದ ದೇವಾಲಯವಾದ ತಗಡುಶೇಟ್ ಗಣಪತಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದೆವು. 7.5. ಅಡಿ ಎತ್ತರದ 4 ಅಡಿ ಅಗಲವಾದ ಭವ್ಯವಾದ ಗಣಪತಿಯ ವಿಗ್ರಹವನ್ನುಳ್ಳ ಆ ದೇವಾಲಯ ಮನಸ್ಸಿಗೆ ತುಂಬಾ ಹಿಡಿಸಿತು. ಕರ್ನಾಟಕ ಮೂಲದ ಸಿಹಿ ವ್ಯಾಪಾರಿ ದಗಡು ಶೇಟ್ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮಕಾಲೀನರು. ಇವರು ಕಟ್ಟಿಸುತ್ತಿದ್ದ ಈ ಮಂದಿರದಲ್ಲಿಯೇ ತಿಲಕರಿಗೆ ಸಾಮೂಹಿಕ ಗಣಪತಿ ಉತ್ಸವದ ಚಿಂತನೆ ಹೊಳೆದದ್ದು. ಇಲ್ಲಿ ಆರಂಭವಾದ ಆ ಚಿಂತನೆ ಮುಂದೆ ಇಡೀ ರಾಷ್ಟ್ರವನ್ನು ವ್ಯಾಪಿಸಿದ್ದು ಈಗ ಇತಿಹಾಸ. ತಿಲಕರಿಗೆ ಸ್ಫೂರ್ತಿ ನೀಡಿದ ಆ ಗಣಪತಿಗೆ ನಮಸ್ಕರಿಸಿ ಅಲ್ಲಿಂದ ಮುಂದೆ ನಾವು ಹೊರಟಿದ್ದು ಸ್ವಯಂ ಲೋಕಮಾನ್ಯ ಬಾಲಗಂಗಾಧರ ತಿಲಕರು ವಾಸಿಸಿದ್ದ ಮನೆ ಕೇಸರಿವಾಡಾಕ್ಕೆ!

ಕೇಸರಿವಾಡಾ, ಲೋಕಮಾನ್ಯ ಬಾಲ ಗಂಗಾಧರ ತಿಲಕರು ವಾಸಿಸುತ್ತಿದ್ದ ಜಾಗ. ಅಲ್ಲಿಯೇ ತಿಲರು ಕೇಸರೀ ಮತ್ತು ಮರಾಠಾ ಎಂಬ ಪತ್ರಿಕೆಗಳನ್ನು ಹೊರಡಿಸಿ ಸ್ವಾತಂತ್ರ್ಯದ ಕಿಚ್ಚಿಗೆ ತುಪ್ಪ ಸುರಿದದ್ದು. ಸ್ವಾತಂತ್ರ್ಯನಂತರವೂ ಈ ಪತ್ರಿಕೆಯ ಕಾರ್ಯ ಹಾಗೆಯೇ ಮುಂದುವರೆದಿದ್ದು ತಿಲಕರ ಮೊಮ್ಮಗ ಶ್ರೀ ಶೈಲೇಶ್ ತಿಲಕ್ ಮತ್ತು ಸೊಸೆ ಶ್ರೀಮತಿ ಮುಕ್ತಾ ತಿಲಕ್ ಇಬ್ಬರೂ ಪತ್ರಿಕೆಯ ಪ್ರಕಟಣೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೇಸರಿವಾಡಾಕ್ಕೆ ನಾವು ಹೋಗುತ್ತಿದ್ದಂತೆ ಸಿಂಹದ ಮುಖವುಳ್ಳ ದೊಡ್ಡ ಹೆಬ್ಬಾಗಿಲುಗಳು ನಮ್ಮನ್ನು ಸ್ವಾಗತಿಸಿದವು. ಒಳಗೆ ತಿಲಕರು ವಾಸಿಸುತ್ತಿದ್ದ ಹಳೆಯ ಮನೆ. ಅದರ ಪಕ್ಕದಲ್ಲಿ ಹೊಸ ಕಟ್ಟಡ. ಅದರಲ್ಲಿದ್ದ ಸಭಾಭವನದಲ್ಲಿ ತಿಲಕರ ಕುರಿತಂತೆ ಹರಿಕಥಾ ಶೈಲಿಯ ಕಾರ್ಯಕ್ರಮ ನಡೆಯುತ್ತಿತ್ತು. ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ ತಿಲಕ್ ದಂಪತಿಗಳು ಟೀ ಬಿಸ್ಕತ್ತುಗಳನ್ನು ನೀಡಿ ಉಪಚರಿಸಿದರು.

ನಂತರ ನಡೆದ ಮಾತುಕಥೆಯಲ್ಲಿ ಬೆಂಗಳೂರಿನಲ್ಲಿ ನಡೆದ ದಿಗ್ವಿಜಯ ದಿವಸ ಕಾರ್ಯಕ್ರಮದ ಪ್ರಸ್ತಾಪವಾಯಿತು. ತಿಲಕ್ ದಂಪತಿಗಳು ಯುವಾ ಬ್ರಿಗೇಡ್ ನ ಕೆಲಸಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸೈನಿಕರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಲು ತಾವು ನಡೆಸುತ್ತಿರುವ ಕೆಲಸಗಳಿಗೆ ಸಹಕಾರ ನೀಡಬೇಕೆಂದು ಕೋರಿದರು. ಸ್ವಾತಂತ್ರ್ಯ ಹೋರಾಟಗಾರರ ಅದರಲ್ಲೂ ಕ್ರಾಂತಿಕಾರಿಗಳ ವಂಶಸ್ಥರ ಕುಟುಂಬಗಳು ಬಹಳಷ್ಟು ಸಂಕಷ್ಟದಲ್ಲಿದ್ದು ಬ್ರಿಟೀಷ್ ಸರ್ಕಾರ ವಶಪಡಿಸಿಕೊಂಡ ಆಸ್ತಿಪಾಸ್ತಿಗಳನ್ನು ಅವರಿಗೆ ಮರಳಿಸದ ಕಾರಣ ಬೀದಿಗೆ ಬಂದರು. ಅವರಿಗೆ ಸಹಾಯ ಮಾಡಲು ಮುಂದಾಗೋಣ ಎಂದು ಕರೆ ಕೊಟ್ಟರು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇಲ್ಲಿ ಅನೇಕ ಕ್ರಾಂತಿಕಾರಿಗಳು ಆಶ್ರಯ ಪಡೆದಿದ್ದರು. ಇಲ್ಲಿಗೆ ಬಂದ ನೀವುಗಳೂ ನಮಗೆ ಅವರಂತೆಯೇ ಎಂದರು. ಅವರ ಪ್ರೀತಿ ವಿಶ್ವಾಸದಿಂದ ಹೃದಯ ತುಂಬಿಕೊಂಡ ನಾವು ನಿಮ್ಮೊಂದಿಗೆ ನಾವಿದ್ದೇವೆಂದು ಅವರಿಗೆ ಭರವಸೆ ನೀಡಿದೆವು‌. ಕರ್ನಾಟಕಕ್ಕೆ ಮತ್ತೆ ಬರಬೇಕೆಂದು ಅವರಿಗೆ ಆಹ್ವಾನ ನೀಡಿ, ಅವರಿಗೆ ವಂದಿಸಿ ಅಲ್ಲೇ ಇದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರ ಮ್ಯೂಸಿಯಮ್ ನೋಡಲು ಹೊರಟೆವು.

ಶ್ರೀ ಶೈಲೇಶ್ ತಿಲಕರೇ ಮುಂದೆ ನಿಂತು ಮ್ಯೂಸಿಯಂ ವೀಕ್ಷಿಸಲು ಮಾರ್ಗದರ್ಶನ ಮಾಡಿದರು. ಅಲ್ಲಿದ್ದ ತಿಲಕರಿಗೆ ಸಂಬಂಧಿಸಿದ ಅನೇಕ ಅಪರೂಪದ ವಸ್ತುಗಳ ಕುರಿತಾದ ಮಾಹಿತಿ ನೀಡಿದರು. ತಿಲಕರು ಬಳಸುತ್ತಿದ್ದ ವಸ್ತುಗಳು, ಅವರ ಫೋಟೋಗಳು, ಸಮಕಾಲೀನ ಕ್ರಾಂತಿಕಾರಿಗಳ ಪತ್ರಗಳು ಇತ್ಯಾದಿಗಳನ್ನು ನೋಡಿ ನಮಗೆಲ್ಲಾ ಬಹಳ ಸಂತೋಷವಾಯಿತು. ಅಲ್ಲಿಂದ ಹೊರಬಂದು ಮಹಾರಾಷ್ಟ್ರದ ಪ್ರಸಿದ್ಧ ತಿನಿಸು ವಡಾಪಾವ್ ತಿಂದು ನಮ್ಮ ನಮ್ಮ ವಾಹನಗಳನ್ನೇರಿ ಬೆಳಗಾವಿಯ ಕಡೆಗೆ ಪ್ರಯಾಣ ಬೆಳೆಸಿದೆವು.

281

ಅಲ್ಲಿಗೆ ನಮ್ಮ ಈ ಪ್ರವಾಸ ಅಂತ್ಯವಾಗಿತ್ತು. ಶಿವಾಜಿ ಮಹಾರಾಜರಿಂದ ತಿಲಕರವರೆಗೆ, ಬಾಜಿರಾಯನಿಂದ ಸಾವರ್ಕರ್ ವರೆಗೆ ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಭವ್ಯ ಚಿತ್ರಣವನ್ನು ಕಣ್ಣೆದುರು ಕಟ್ಟಿಕೊಟ್ಟ ಈ ಯಾತ್ರೆ ಒಂದು ಪ್ರೇರಣಾ ಯಾತ್ರೆಯಾಗಿ ನಮ್ಮ ಮನಸ್ಸಿನಲ್ಲಿ ಉಳಿಯಿತು. ಭಾರತವನ್ನು ಉಳಿಸಲು, ಅದರ ಗತ ವೈಭವವನ್ನು ಪುನರ್ ಪ್ರತಿಷ್ಠಾಪಿಸಲು ನಮ್ಮ ದೇಶದ ವೀರಪುರುಷರು ಮಾಡಿದ ಸಾಹಸ ಕಾರ್ಯಗಳು ನಮಗೆ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿ ನೀಡಿದವು.

29

ಆತ್ಮೀಯರೇ, ಈಗ ನಾವು ಮಾಡಿದ್ದು ಮಹಾರಾಷ್ಟ್ರಾದ ಸ್ವಾತಂತ್ರ್ಯ ಹೋರಾಟದ ಕುರಿತ ಪ್ರವಾಸಕ್ಕೆ ಒಂದು ರೂಟ್ ಮ್ಯಾಪ್ ಹಾಕಿಕೊಳ್ಳಲು ಮಾಡಿದ ಪ್ರವಾಸವಷ್ಟೇ. ಮುಂದೆ ನಡೆಯಲಿರುವ ದೊಡ್ಡ ಪ್ರವಾಸಕ್ಕೆ ನಾವೆಲ್ಲರೂ ಜೊತೆಯಾಗಿ ಹೋಗೋಣವೆಂಬ ವಿಶ್ವಾಸದೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ. ಧನ್ಯವಾದಗಳು.

ಪ್ರೇರಣಾ ಯಾತ್ರೆಯ ಕೆಲವು ವಿಡಿಯೋಗಳು