ಒಂದು ಹಬ್ಬದ  ಆಚರಣೆ  ಧಾರ್ಮಿಕ ಚೌಕಟ್ಟಿನಲ್ಲಿ ಮತ್ತು ಸಾಂಪ್ರದಾಯಿಕ ವಸ್ತುಗಳ ಮೂಲಕ ಆಚರಿಸಿದರೆ ಅದರಿಂದ ಮನಸ್ಸಿಗೆ ಅತೀವ ಆನಂದವಾಗುತ್ತದೆ.
ಹಿಂದೂ ಧಾರ್ಮಿಕ ಆಚರಣೆಗೆಳೆಲ್ಲವೂ ಇದಕ್ಕೇ ಇಷ್ಟೊಂದು ಮಹತ್ವ ಪಡೆದಿರಬಹುದು.ಇಂದಿಗೂ ಆಧುನಿಕತೆಯ ಸೋಂಕಿಲ್ಲದೆ,ಆಡಂಭರಗಳಿಲ್ಲದೆ,
ಭಯಭಕ್ತಿಯಿಂದ ಮನಃಶುದ್ಧಿಯೊಂದಿಗೆ ದೇವರ ಧ್ಯಾನ,ಉತ್ಸವಾದಿಗಳ ಆಚರಣೆ ಕೆಲವೆಡೆಯಾದರು ಉಳಿದಿದೆ. ಹಬ್ಬಗಳೂ ಸಹ ಮಹತ್ವದ್ದೆನಿಸುವುದು ಈ ಕಾರಣಕ್ಕೇ.
14265083_1107987939278608_7
ಗಣಪತಿ  ಹಬ್ಬವೆಂದರೆ ಎಲ್ಲೆಲ್ಲೂ ಸಡಗರ. ಊರಿನ ಗಲ್ಲಿಗಲ್ಲಿಗಳಲ್ಲಿ ಗಣಪತಿಯ ದೊಡ್ಡ ದೊಡ್ಡ ಮೂರ್ತಿಗಳನ್ನಿಟ್ಟು, ಸಿನಿಮಾ ಹಾಡು, ನೃತ್ಯಗಳ ಮೂಲಕ ಮೆರವಣಿಗೆ ಮಾಡಿ ಕೆರೆಗಳಲ್ಲಿ ವಿಸರ್ಜಿಸಿ ಆಚರಿಸಲಾಗುತ್ತದೆ. ಆದರೆ ಬಹುತೇಕ ವಿಗ್ರಹಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದವೇ ಆದ್ದರಿಂದ ಅವು ನೀರಲ್ಲಿ ಮುಳುಗದೇ,ಕರಗದೇ ಹಾಗೆಯೇ ಉಳಿದು ಕೊನೆಗೆ ಅದನ್ನು ಮುಳುಗಿಸಲು ಹೊಟ್ಟೆಯನ್ನು ತಿವಿದು, ಕೈ ಕಾಲುಗಳನ್ನು ಮುರಿದು ಹರಸಾಹಸ ಪಡುವ ದೃಶ್ಯಗಳನ್ನು ನಾವು ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಭಕ್ತಿಯಿಂದ ಪೂಜಿಸಿದ ದೇವರ ಮೂರ್ತಿ ಕೈ ಕಾಲು ಕಳೆದುಕೊಂಡು, ಛಿದ್ರ ಛಿದ್ರ ವಾಗಿ ಕೆರೆ, ಸಮುದ್ರಗಳ ದಡಗಳಲ್ಲಿ ಬಿದ್ದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತದೆ.
14305200_1373726689307400_6

ಮಣ್ಣಿಗೂ ಗಣೇಶನಿಗೂ ಅವಿನಾಭಾವ ಸಂಬಂಧ ಇದೆ. ಏಕೆಂದರೆ ಗಣೇಶ ಹುಟ್ಟಿದ್ದು ಪಾರ್ವತಿಯ ಮೈಯ ಬೆವರು ಮಣ್ಣಿನಿಂದ. ಹಾಗಿದ್ದಾಗ ನೀರಲ್ಲಿ ಕರಗದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣೇಶನನ್ನು ಮಾಡುವುದು ಎಷ್ಟು ಸರಿ? ಯುವಾಬ್ರಿಗೇಡ್ ಕಳೆದ ವರ್ಷ “ಮಣ್ಣಿನ ಗಣಪ ಮಣ್ಣೇ ಗಣಪ” ಅಭಿಯಾನ ಪ್ರಾರಂಭಿಸಿ ರಾಜ್ಯಾದ್ಯಂತ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನೇ ಪ್ರತಿಷ್ಠಾಪಿಸಬೇಕೆಂದು ಜಾಗೃತಿ ಮೂಡಿಸಿತ್ತು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತಾವುಗಳು ಕೂಡ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ನಿರ್ಧರಿಸಿತು.
ಯುವಾಬ್ರಿಗೇಡ್ ಬೆಂಗಳೂರಿನ ಕಾರ್ಯಕರ್ತರು ಗಿರಿನಗರದ ತಮ್ಮ ಕಾರ್ಯಾಲಯದಲ್ಲಿ ತಾವೇ ಸ್ವತಃ ಮಾಡಿದ ಗೌರಿ ಸಮೇತ ಯುವಾಗಣಪನ ಮೂರ್ತಿಯನ್ನು
 ಪ್ರತಿಷ್ಠಾಪಿಸಿ, ಸಾಂಪ್ರದಾಯಿಕವಾಗಿ ಆಚರಿಸಿದರು.
44
22

ಚೌತಿಯ ದಿನದಂದು ಮೂರ್ತಿಯನ್ನು ಪ್ರತಿಷ್ಠಾಪಿಸಿ ೫ ದಿನಗಳ ಕಾಲ ಪೂಜಿಸಿ, ೦೯.೦೯.೨೦೧೬ ಶುಕ್ರವಾರ ಸಂಜೆ ಅಷ್ಟಾವಧಾನದ ಜೊತೆ ಪೂಜಾ ಕೈಂಕರ್ಯಗಳನ್ನು ಮುಗಿಸಿ , ಬಾಲಗಂಗಾಧರ ತಿಲಕರ ಕಲ್ಪನೆಯಂತೆ ಸಾಂಪ್ರದಾಯಿಕವಾಗಿ, ಪಲ್ಲಕ್ಕಿಯಲ್ಲಿ ಗೌರಿಗಣೇಶನನ್ನು ಹೊತ್ತುಕೊಂಡು ಭಜನೆ, ಘೋಷಣೆಗಳ ಮೂಲಕ ಬೆಂಗಳೂರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗಯಲ್ಲಿ ದೇಶ, ಧರ್ಮ ಹಾಗೂ ನಾಡಿನ ಧ್ವಜಗಳೊಂದಿಗೆ ಕಾರ್ಯಕರ್ತರು ಮೆರವಣಿಗೆಗೆ ಮೆರುಗು ತಂದಿದಲ್ಲದೇ ಕಾವೇರಿ ನೀರಿನ ಹೋರಾಟಕ್ಕೂ ಶಾಂತಿಯುತ ಬೆಂಬಲ ಸೂಚಿಸಿದರು. ಗಿರಿನಗರದ ಕಾರ್ಯಾಲಯದಿಂದ ಹೊರಟ ಮೆರವಣಿಗೆ ಪೂರ್ಣಪ್ರಜ್ಞಾ ವಿದ್ಯಾಪೀಠದವರೆಗೆ ಸಾಗಿತು. ಅಲ್ಲಿ ಪೂಜೆ ಮುಗಿಸಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಕಾರ್ಯಕರ್ತರೇ ಸ್ವತಃ ವಿಸರ್ಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು.

ವಿಸರ್ಜನೆಯ ಸಂದರ್ಭದಲ್ಲಿ ಮಾತನಾಡಿದ ಯುವಾಬ್ರಿಗೇಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ದೇಶ, ಧರ್ಮ ಹಾಗೂ ನಾಡು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ನಾವೆಲ್ಲಾ ವಿಘ್ನವಿನಾಶಕನನ್ನು ಪ್ರಾರ್ಥಿಸಬೇಕೆಂದು ಸೂಚಿಸಿದರು. ಅಲ್ಲದೇ ವಿಸರ್ಜಿಸಿದ ಮಣ್ಣಿನ ಗಣಪನ ಮೂರ್ತಿ ಕರಗಿದ ಮೇಲೆ ಆ ಮಣ್ಣನ್ನು ಕಾರ್ಯಕರ್ತರು ಮನೆಗೆ ತೆಗೆದುಕೊಂಡು ಹೋಗಿ ಆ ಮಣ್ಣಿನಲ್ಲಿ ತುಳಸಿ ಗಿಡವನ್ನು ನೆಡಬೇಕೆಂದು ಕರೆ ಕೊಟ್ಟರು. ಈ ರೀತಿಯಾಗಿ ಮಣ್ಣಿನಿಂದ ಆದ ಗಣಪ ಮತ್ತೆ ಮಣ್ಣಾಗಿ ಉಸಿರು ಕೊಡುವಂತಾಗಲಿ ಎಂದು ಗಣೇಶ ಹಬ್ಬಕ್ಕೆ ಹೊಸ ಆಯಾಮವನ್ನು ನೀಡಿದರು.

ಯುವಾಬ್ರಿಗೇಡ್ ದಕ್ಷಿಣ ಕನ್ನಡ ವಿಭಾಗವೂ ಸ್ವತಃ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವ ವಿಧಾನಗಳನ್ನು ತಿಳಿಸುವುದರೊಂದಿಗೆ ಆಚರಿಸಿದೆ. ಇಲ್ಲಿ ವಿಷೇಶವಾಗಿದ್ದು  ಸ್ತ್ರೀ, ಪುರುಷ, ತಾರತಮ್ಯವಿಲ್ಲದೆ, ಜಾತಿ, ಧರ್ಮಗಳ ಬೇಧಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಗಣೇಶನ ಪೂಜಿಸಿದ್ದು.ಸೋದರಿ ನಿವೇದಿತಾ ಸಹೋದರಿಯರಿಂದ ದೀಪ ಪ್ರಜ್ವಲನ ಮಾಡಿಸಿ,ಕಳಶ ಪೂಜೆಯನ್ನು ಮಾಡಿಸಿದರು.

ಶ್ರೀ ಕೃಷ್ಣ ಉಪಾಧ್ಯಾಯ ಅವರು ಮಣ್ಣಿನಗಣಪನ ಸರಳವಾದ ಪೂಜೆಯನ್ನು ಶಾಸ್ತ್ರಕ್ಕೆ ಕುಂದುಂಟಾಗದಂತೆ ಸಂಪೂರ್ಣ ದೇಶೀಯ ವಸ್ತುಗಳಿಂದಲೇ ಪೂಜಿಸಿದ್ದಲ್ಲದೇ ನೆರೆದವರಿಗೂ ತಿಳಿಸಿಕೊಟ್ಟರು. ಗಣಪತಿಯ ಮಹಾಪೂಜೆ ನಂತರ ಎಲ್ಲರೂ ಹಣತೆಗಳ ದೀಪಾರಾಧನೆ ಮಾಡಿದರು.ಇಲ್ಲಿ ಪ್ರತಿ ಹಂತಗಳಲ್ಲಿಯೂ ದೇಶಭಕ್ತಿಗೀತೆ,ಗಣಪನ ಭಜನೆಗಳನ್ನು ಹಾಡಿರುವುದು ಮತ್ತೊಂದು ವಿಶೇಷತೆ. ಗಣಪತಿಯ ವಿಸರ್ಜನೆ ನಡೆದು ಪ್ರಸಾದವನ್ನು ವಿತರಿಸಲಾಯಿತು.

33
ಒಟ್ಟಾರೆ ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಗಣಪತಿಯ ಹಬ್ಬ ವಿಜೃಂಭಣೆಯಿಂದ ನೆರವೇರಿತು. ಕಳೆದ ವರ್ಷ ಮಣ್ಣಿನ ಗಣಪನ ಕಲ್ಪನೆಯನ್ನು ಹೊತ್ತಿದ್ದ ಯುವಾಬ್ರಿಗೇಡ್ ಈ ಬಾರಿ ಅದನ್ನು ಯಶಸ್ವಿಯಾಗಿ ಸಾಕಾರಗೊಳಿಸಿ ತೋರಿಸಿತು.