ಅಂದು ಸೋಮವಾರ.. ದಿನಾಂಕ 11, ಸೆಪ್ಟೆಂಬರ್ 1893ನೇ ಇಸವಿ. ಅಮೆರಿಕಾದ ಚಿಕಾಗೋ ನಗರದಲ್ಲಿ ಏರ್ಪಡಿಸಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಭಾರತದ ಅಸ್ಮಿತೆಯನ್ನು ವಿಶ್ವದ ಮುಂದೆ ಎತ್ತಿಹಿಡಿಯಲು ಕೇಸರಿ ಸಿಂಹವೊಂದು ವೇದಿಕೆಯಲ್ಲಿ ತಲೆಯೆತ್ತಿ ನಿಂತಾಗ ಈ ದಿನ, ಭಾರತೀಯರ ಪಾಲಿಗೆ ‘ದಿಗ್ವಿಜಯದ ದಿನ’ವಾಗುತ್ತದೆಂಬ ಅಂದಾಜು ಯಾರಿಗೂ ಇರಲಿಲ್ಲ. ಅಲ್ಲಿದ್ದ ಬಹುಪಾಲು ಮಂದಿಯ ಲೆಕ್ಕಾಚಾರವೇ ಬೇರೆ! ಜಗತ್ತಿಗೆ ಕ್ರೈಸ್ತ ಮತವನ್ನು ಬೋಧಿಸುವುದು, ಕ್ರೈಸ್ತ ಧರ್ಮವನ್ನು ಸರ್ವಶ್ರೇಷ್ಠ ಧರ್ಮವೆಂದು ಸಾಬೀತು ಪಡಿಸುವುದು, ಕ್ರೈಸ್ತ ಮತದ ಪ್ರಚಾರಕರನ್ನು ಅಕ್ಷರಶಃ ದೇವರೇ ಎನ್ನುವಂತೆ ಬಿಂಬಿಸುವುದು, ಇದಿಷ್ಟನ್ನೂ ಪ್ರಶ್ನಾತೀತವಾಗಿಯಲ್ಲದಿದ್ದರೂ ಬಲವಂತವಾಗಿಯೇ ಸಾಧಿಸಿಬಿಟ್ಟರೆ ಗೆದ್ದಹಾಗೆ ಎಂಬಂತಿತ್ತು ಅವರ ನಡವಳಿಕೆ. ವಿಶ್ವವನ್ನೇ ಕಾಲಬುಡದಲ್ಲಿ ಕೆಡವಿಬಿಡಬೇಕೆಂಬ ವಿಶಾಲ ಕನಸನ್ನು ಹೊತ್ತಿದ್ದವರಿಗೆ ಇದು ಅನಿವಾರ್ಯ ಕೂಡಾ. ಆದರೆ ಹಿಂದೂ ಸಂತನೊಬ್ಬನ ತೀಕ್ಷ್ಣ ಹಾಗೂ ಪ್ರಖರ ವಿಚಾರಧಾರೆಗೆ ಜಗತ್ತೇ ತಲೆದೂಗಿದ್ದು ಇಂದಿಗೆ ಇತಿಹಾಸ ಹಾಗೂ ಮುಂದಿನ ತಲೆಮಾರಿಗೆ ಭವಿಷ್ಯ!
artha
ಸೆಪ್ಟೆಂಬರ್ 11, 2016 ಭಾನುವಾರ ಸಂಜೆ. ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಅಚ್ಚುಕಟ್ಟಾದ ಸಭಾಂಗಣ, ವೇದಿಕೆಯ ಪರದೆಯ ಮೇಲೆ ಅಖಂಡ ಭಾರತದ ನಕ್ಷೆ. ಆಚೀಚೆ ಇದ್ದ ನೆರೆಹೊರೆಯ ದೇಶಗಳು ಮೇಲ್ನೋಟಕ್ಕೆ ದೂರವಿದ್ದಂತೆ ಕಂಡರೂ, ಈ ಮೊದಲು ಭವ್ಯಭಾರತದ್ದೇ ಅವಿಭಾಜ್ಯ ಅಂಗವಾಗಿತ್ತೆಂಬ ಕುರುಹನ್ನು ಸ್ಪಷ್ಟವಾಗಿ ತೋರುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಇಡಿಯ ವಿಶ್ವದ ಸಂಕೇತವಾಗಿ, ಪುಟ್ಟ ಪೀಠದ ಮೇಲಿನ ‘ವಿಶ್ವಗುರು’ವಿನ ಗೋಳಾಕೃತಿ. ಹೊರಗೆ ಪುಸ್ತಕದ ಭಂಡಾರ ಪ್ರದರ್ಶನಕ್ಕಿದ್ದರೆ, ಒಳಗೆ ಕಂಡುಬಂದಿದ್ದು, ಅವರವರ ಜವಾಬ್ದಾರಿಯರಿತು ಉತ್ಸಾಹದಿಂದ, ಜತನದಿಂದ ವೇದಿಕೆಯನ್ನು ಸಿಂಗರಿಸುವಲ್ಲಿ ದೃಷ್ಟಿ ನೆಟ್ಟಿದ್ದ ತರುಣರು!
ಹೌದು. ಸ್ವಾಮಿ ವಿವೇಕಾನಂದರು ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಹಿಂದೂ ಧರ್ಮದ ಪತಾಕೆಯನ್ನು ಶ್ರೇಷ್ಠವಾಗಿ ಎತ್ತಿ ಹಿಡಿದುದರ ನೆನಪಿಗಾಗಿ, ಭಕ್ತಿ ಶ್ರದ್ಧೆಗಳಿಂದ ಆ ದಿನವನ್ನು ಸ್ಮರಿಸಿಕೊಳ್ಳಲು ಹೀಗೊಂದು ಸಂಜೆ ‘ದಿಗ್ವಿಜಯ ದಿವಸ್’ ಎಂಬ ಸೂತ್ರದಲ್ಲಿ, ಅಮೃತಪುತ್ರರಾಗುವ ಹಾದಿಯಲ್ಲಿದ್ದ ಅಸಂಖ್ಯರನ್ನು ಒಂದೇ ಸೂರಿನಡಿ ಬಂಧಿಸಿತ್ತು. ‘ವಂದೇ ಮಾತರಂ’ ಹಾಗೂ ‘ಭಾರತ ಮಾತಾ ಕೀ ಜೈ’ ಎನ್ನುವ ಉದ್ಘೋಷಣೆಗಳೇ ಸಭೆಯೆಂಬ ದೇಗುಲದ ತುಂಬ, ಸಂಜೆಯುದ್ದಕ್ಕೂ ಅನುರಣಿಸಿದ್ದ ಮಂತ್ರಘೋಷವಾಗಿತ್ತು.
ಅಂದು ಭಾರತವೆಂಬ ಗರ್ಭಗುಡಿಯೊಳಗೆ ಸಂತನೊಬ್ಬ ಪ್ರತಿಷ್ಠಾಪಿಸಲ್ಪಟ್ಟಿದ್ದರೆ, ಆತನ ಆಶೋತ್ತರಗಳನ್ನು ಸಮರ್ಥವಾಗಿ ದಾಟಿಸಬಲ್ಲ ಶ್ರೇಷ್ಠ ಜೀವಗಳು ಅತಿಥಿಗಳಾಗಿದ್ದು ಎಲ್ಲರ ಪಾಲಿನ ಸುಯೋಗ!
tilak
“ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು!” ಎಂಬ ಸ್ವಾಭಿಮಾನದ ಮೂಲಮಂತ್ರವನ್ನು ಹುಟ್ಟುಹಾಕಿದ ಲೋಕಮಾನ್ಯ ಬಾಲಗಂಗಾಧರ ತಿಲಕರ ಮೊಮ್ಮಗನಾದ ಶ್ರೀ ಶೈಲೇಶ್ ಶ್ರೀಕಾಂತ್ ತಿಲಕರು, “ಆಸಿಂಧು ಸಿಂಧು ಪರ್ಯಂತ, ಯಸ್ಯ ಭಾರತಭೂಮಿಕಾ| ಪಿತೃಭೂಃ ಪುಣ್ಯಭೂಶ್ಚೈವ ಸ ವೈ ಹಿಂದುರಿತಿ ಸ್ಮೃತಃ|” ಎಂದು ಹಿಂದುವೆಂಬ ಶಬ್ದಕ್ಕೆ ಸುಂದರ ಸುಸ್ಪಷ್ಟ ವ್ಯಾಖ್ಯೆಯನ್ನು ನೀಡಿದ, ಅಪ್ರತಿಮ ಕ್ರಾಂತಿಕಾರಿ, ರಾಷ್ಟ್ರಭಕ್ತ ಸ್ವಾತಂತ್ರ್ಯವೀರ ಸಾವರ್ಕರರ ಮೊಮ್ಮಗನಾದ ಶ್ರೀ ಸಾತ್ಯಕಿ ಸಾವರ್ಕರರು, ಆಧ್ಯಾತ್ಮಿಕ ಚಿಂತನೆಯೊಂದಿಗೆ ಆಧ್ಯಾತ್ಮ ತತ್ತ್ವಗಳಲ್ಲೇ ಬದುಕನ್ನು ಬದುಕುತ್ತಿರುವ ಪೂಜನೀಯ ಅಕ್ಕ ವೀಣಾ ಬನ್ನಂಜೆಯವರ ಸಮಕ್ಷಮದಲ್ಲಿ, “ಕೋಟಿ ಮನಸುಗಳ ಒಂದೇ ಕನಸು, ವಿಶ್ವಗುರು ಭಾರತ” ಎಂಬ ಪವಿತ್ರ ಧ್ಯೇಯಕ್ಕೆ ಹಗಲಿರುಳೂ ಹಂಬಲಿಸುವ ಚಕ್ರವರ್ತಿ ಅಣ್ಣನ ಉಪಸ್ಥಿತಿ!
ಅತಿಥಿಗಳ ಹೆಸರು ಕೇಳಿದಾಗಿನ ರೋಮಾಂಚನಕ್ಕೆ ಪರಿಪೂರ್ಣತೆ ದೊರೆತದ್ದು ಅವರುಗಳನ್ನು ನೇರವಾಗಿ ಕಂಡಾಗಲೇ! ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೀವೇನೋ, ನಮ್ಮ ಕಣ್ಮುಂದೆ ಇರುವ ರಾಷ್ಟ್ರನೇತಾರರ ಪೀಳಿಗೆಯು ಸ್ವತಃ ನೇತಾರರೇ ಏನೋ ಎಂಬ ಹಿತವಾದ ಭ್ರಮೆಯಲ್ಲಿ ಬೀಗಿದ್ದಂತೂ ಸುಳ್ಳಲ್ಲ.
ಚಿಕ್ಕಮಕ್ಕಳನ್ನು ಮುಂದೇನಾಗುತ್ತೀಯಾ ಎಂದಾಗ, ಕಂಡದ್ದು ಕೇಳಿದ್ದೆಲ್ಲವನ್ನೂ ಅರೆಕ್ಷಣ ಮನಸ್ಸಿಗೆ ತಂದುಕೊಂಡು ಇಂಥದ್ದಾಗುತ್ತೇನೆ ಎಂದು ಹೇಳಿಬಿಡುವಷ್ಟೇ ಸಲೀಸಾಗಿ, ಇಲ್ಲಿಯವರೆಗೂ ದೇಶ ನಿನ್ನ ಕುರಿತು ಹೆಮ್ಮೆಪಡುವಂಥದ್ದು ನೀನೇನು ಮಾಡಿದ್ದೀ ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಂಡರೆ ಹೇಳಲಾರೆವೇನೋ?
ಕಣ್ಮುಂದೆ ಶ್ರೇಷ್ಠ ಇತಿಹಾಸವಿದ್ದೂ, ಸುಜ್ಞಾನದ ಜ್ಯೋತಿಯನ್ನು ನಿರಂತರ ಬೆಳಗಿಸಬಲ್ಲಷ್ಟು ಅಖಂಡ ಧರ್ಮಭಂಡಾರವಿದ್ದೂ ಅಮೃತಪುತ್ರರಾದ ನಮ್ಮೆಲ್ಲರ ‘ಜ್ಞಾನದ ಕೊಡ’ ಇನ್ನೂ ಖಾಲಿ ಖಾಲಿಯೇ. ಆ ಖಾಲಿತನದ ಮಡಿಲನ್ನು ಬಹುವಾಗಿ ತುಂಬಬಲ್ಲ ಚಕ್ರವರ್ತಿ ಅಣ್ಣನ ‘ವಿಶ್ವಗುರು’ ಕೃತಿಯ ಲೋಕಾರ್ಪಣೆಯಾಗಿದ್ದೂ ಅಂದಿನ ವಿಶೇಷಕ್ಕೊಂದು ಮೆರುಗು!
ಸಮಾಜವೆಂದರೆ ನಿರ್ದಿಷ್ಟ ಗುಂಪಲ್ಲ. ವಿಶ್ವಗುರು ಕೃತಿಯು ಸ್ವಹಿತಕ್ಕೋ, ಸ್ವಜನ ಹಿತಕ್ಕೋ ರಚನೆಯಾದುದಲ್ಲ. ಹಾಗಿದ್ದ ಮೇಲೆ ಆ ಕೃತಿಯ ಲೋಕಾರ್ಪಣೆಯೂ ಕೂಡಾ ಸಮಾಜದಿಂದಲೇ ಆಗಬೇಕೆನ್ನುವ ತುಡಿತದಿಂದ ಸಮಾಜದ ವಿವಿಧ ಸ್ತರಗಳ ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಂಡ ‘ವಿಶ್ವಗುರು’, ಅಪರಿಮಿತ ಹೆಮ್ಮೆಯ ಭಾವವನ್ನು ಮೂಡಿಸಿತ್ತು.
14310309_1377439898936079_1389086163381227019_o
ರಾಯಚೂರಿನಲ್ಲಿ ಶಿಕ್ಷಕರಿಂದ, ಮಂಡ್ಯದಲ್ಲಿ ಕೃಷಿಕರಿಂದ, ಧಾರವಾಡದಲ್ಲಿ ರಾಷ್ಟ್ರಧ್ವಜ ತಯಾರಕರಿಂದ, ಬಳ್ಳಾರಿಯಲ್ಲಿ ಈಶಾನ್ಯ ರಾಜ್ಯ ಸೋದರರಿಂದ, ಗದಗದಲ್ಲಿ ಪೌರಕಾರ್ಮಿಕರಿಂದ, ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಪೀಠದ ಶ್ರೀ ಮಾದಾರ ಚನ್ನಯ ಸ್ವಾಮೀಜಿಯಿಂದ, ಶಿವಮೊಗ್ಗೆಯಲ್ಲಿ ವೈದೀಕರಿಂದ, ವಿಜಯಪುರದಲ್ಲಿ ಮುಸ್ಲಿಂ ಸಮುದಾಯದಿಂದ, ಮುಂಡಗೋಡಿನಲ್ಲಿ ಲಾಮಾಗಳಿಂದ, ಹಳಿಂಗಳಿಯಲ್ಲಿ ಜೈನ ಮುನಿ ಪರಮ ಪೂಜ್ಯ ಶ್ರೀ ಕುಲರತ್ನಭೂಷಣ ಮಹಾರಾಜರು ಹಾಗೂ ಇಬ್ರಾಹಿಂ ಸುತಾರ್‍ರಿಂದ, ಅಥಣಿಯಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ, ಮೈಸೂರಿನಲ್ಲಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಗಣಪತಿಯವರಿಂದ, ಉಡುಪಿಯಲ್ಲಿ ಪರಮಪೂಜ್ಯ ಶ್ರೀ ವಿಶ್ವೇಶ್ವರ ಶ್ರೀಪಾದಂಗಳವರಿಂದ ಅರ್ಪಣೆಯಾದ ಈ ಕೃತಿಯು, ದಿಗ್ವಿಜಯದ ದಿನದಂದು ಪೂಜ್ಯ ಅತಿಥಿಗಳಿಂದ ಮತ್ತೊಮ್ಮೆ ಅರ್ಪಣೆಯಾದದ್ದು, ಭಾರತ ಮಾತೆಯ ಅಡಿದಾವರೆಗಳಿಗೆ ಮತ್ತೊಂದು ಪುಷ್ಪವು ಅರ್ಚನೆಯಾದಷ್ಟೇ ಧನ್ಯತೆಯನ್ನು ನೀಡಿತ್ತು.
“ಬ್ರಿಟೀಷರಿಂದ ಪ್ರತಿಬಾರಿ ಜೈಲುವಾಸಕ್ಕೆ ಗುರಿಯಾದಾಗಲೂ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ ಬಾಲಗಂಗಾಧರ ತಿಲಕರ ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು’ ಎಂಬ ಘೋಷಣೆಗೆ ಇಂದಿಗೆ ಭರ್ತಿ ನೂರು ವರ್ಷಗಳು!!” ಹೀಗೆಂದು ತಿಲಕರ ಮುಮ್ಮಗ ಹೇಳಿದಾಗ ಇಡೀ ಸಭೆಯಲ್ಲಿ “ಭಾರತ್ ಮಾತಾ ಕೀ ಜೈ” ಎಂಬ ಮಂತ್ರಘೋಷ!
ಸ್ವರಾಜ್ಯವೆಂದರೆ ಸ್ವತಂತ್ರ್ಯ ರಾಷ್ಟ್ರವಷ್ಟೇ ಅಲ್ಲ ಸುರಾಜ್ಯವೂ ಕೂಡಾ, ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಪ್ರತಿಯೊಬ್ಬನೂ ತನ್ನ ಏಳಿಗೆಯೊಂದಿಗೆ ಇತರರ ಏಳಿಗೆಗೂ ಶ್ರಮಿಸಬೇಕು, ಆಗಷ್ಟೇ ರಾಷ್ಟ್ರದ ಏಳಿಗೆಯೂ ಸಾಧ್ಯ. ನಾವೆಲ್ಲರೂ ಒಟ್ಟಾಗಿ ಸುರಾಜ್ಯದ ಕಲ್ಪನೆಯನ್ನು ಜೀವಂತವಿರಿಸೋಣ ಎಂದಾಗ.. ಸುರಾಜ್ಯವೆಂದರೆ ಸ್ವರಾಜ್ಯವೆಂಬ ಹಕ್ಕುಪತ್ರವಲ್ಲ.. ಇನ್ಯಾರೋ ಮೊಹರು ಹಾಕಿ ದೃಢೀಕರಿಸಿದ ಒಪ್ಪಂದವೂ ಅಲ್ಲ.. ಸುರಾಜ್ಯವೆನ್ನುವುದು ನಿರಂತರ ಸಹನಶೀಲತೆಯ, ಸಂಯಮದ, ಧರ್ಮಮಾರ್ಗದೆಡೆಗಿನ ಪಯಣವೆಂಬುದು ಮತ್ತೊಮ್ಮ ನಿಚ್ಚಳವಾಯ್ತು.
14361205_1377442128935856_7290053468933309971_o
“ಸಿಂಧು ಉಗಮಸ್ಥಾನದಿಂದ , ದಕ್ಷಿಣದ ಸಾಗರದವರೆಗಿನ ಭಾರತ ಭೂಮಿಯನ್ನು ಪಿತೃಭೂಮಿ ಎಂದು ಯಾರೆಲ್ಲಾ ಭಾವಿಸುವರೋ ಅವರೆಲ್ಲರೂ ಹಿಂದೂಗಳು! ಸಮಾಜವನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದಕ್ಕಿಂತ, ರಾಷ್ಟ್ರೀಯತೆಯ ಆಧಾರದಲ್ಲಿ ಒಟ್ಟುಗೂಡಿಸಬೇಕು. ನೀವಿಂದು ಕಾಣುತ್ತಿರುವ ಭೂಭಾಗ ನಮ್ಮ ಪೂರ್ವಿಕರು ಬದುಕಿದ ಭೂಮಿ, ನಮಗೆಲ್ಲ ಜನ್ಮ ನೀಡಿದ ಪಿತೃಭೂಮಿಯಿದು. ಪ್ರತಿಯೊಬ್ಬರ ಸಂಸ್ಕೃತಿ ಬೇರೆಯೇ, ಜಾತಿ ಧರ್ಮಗಳು ಬೇರೆಯೇ, ಆದರೆ ಎಲ್ಲಾ ಧರ್ಮಗಳ ಉಗಮವಾಗಿದ್ದು ಇದೇ ನೆಲದಲ್ಲಿ. ಧರ್ಮಗಳು ಹುಟ್ಟುವ ಮೊದಲೂ ಭಾರತವಿತ್ತು, ಇಂದೂ ಇದೆ, ಮುಂದೂ ಇರುತ್ತದೆ. ಎಲ್ಲಾ ಧರ್ಮಗಳ ತವರು ಈ ನಾಡು. ನಮ್ಮೆಲ್ಲರ ಪೂರ್ವಿಕರು ಭಾರತವೆನ್ನುವ ತಪೋಭೂಮಿಯಲ್ಲಿ ಹುಟ್ಟಿದವರೇ! ನಮ್ಮೆಲ್ಲರ ಮೂಲವೊಂದೇ, ನೆಲವೊಂದೇ.. ಹೀಗಿರುವಾಗ ಗುರಿ ಮಾತ್ರ ಬೇರೆಯಿರಲು ಹೇಗೆ ಸಾಧ್ಯ?” ಎನ್ನುತ್ತಾ ಸಂಘಟನೆಯ ಕೊರತೆಯಿಂದ, ಅನ್ಯರ ಆಕ್ರಮಣದಿಂದ ತುಂಡಾಗುತ್ತಿರುವ ಈ ಭೂಮಿಯನ್ನು ಪುನಃ ಒಟ್ಟುಗೂಡಿಸುವ ಸಂಕಲ್ಪ ತೊಡಬೇಕು ಎಂದು ಸಾವರ್ಕರರ ಮೊಮ್ಮಗ ಹೇಳಿದಾಗ, ವಿಶ್ವಗುರುವಿನ ಕಲ್ಪನೆ ಇದೇ ಅಲ್ಲವೇ ಎನಿಸಿತ್ತು.
ಯಾವುದನ್ನೂ ಮರುಸೃಷ್ಟಿಸಲಾಗದ, ಪ್ರಕೃತಿಯನ್ನೇ ಆಪೋಶನ ತೆಗೆದುಕೊಳ್ಳುವ ಹಠಕ್ಕೆ ಬಿದ್ದವರಂತೆ ಮೆರೆಯುತ್ತಿರುವ ಶಕ್ತಿಗಳಿಂದ ಭಾರತವನ್ನು ನಾಶಪಡಿಸಲು ಸಾಧ್ಯವೇ ಇಲ್ಲ. ನಮ್ಮನ್ನೆಲ್ಲ ನಿಯಂತ್ರಿಸುತ್ತಿರುವ ಆಧ್ಯಾತ್ಮಿಕ ವ್ಯವಸ್ಥೆ ಇಡೀ ಜಗತ್ತನ್ನೇ ನಿಯಂತ್ರಿಸುತ್ತಿದೆ. ಭಾರತವು ವಿಶ್ವಗುರುವಾಗಿ ಒಬ್ಬನೇ ಶಿಷ್ಯನನ್ನು ಹೊಂದುವ ಬದಲು ‘ವಿಶ್ವಮಾತೆ’ಯಾಗಿ ಜಗತ್ತನ್ನೇ ಅಪ್ಪಿಕೊಳ್ಳಲಿ ಎಂದು ವೀಣಾ ಬನ್ನಂಜೆಯವರು ಹೇಳಿದಾಗ.. ಅವರಲ್ಲೇ ಮಾತೃಛಾಯೆಯನ್ನು ಕಂಡಂಥಾ ಬೆಚ್ಚಗಿನ ಭಾವ! ಹೌದು. ಹೃದಯ ತುಂಬಿ ಬಂದಾಗಲೆಲ್ಲಾ ನಮ್ಮ ಕಣ್ಣುಗಳೂ ಹೊಳೆಯುತ್ತಿತ್ತು.
veena
ಸ್ಪರ್ಶಮಣಿಯ ಲಕ್ಷಣ, ಕಲ್ಲನ್ನು ಒಮ್ಮೆ ಮಾತ್ರ ಸ್ಪರ್ಶಿಸುತ್ತಲೇ ಅನರ್ಘ್ಯ ರತ್ನವನ್ನಾಗಿ ಮಾಡಿಬಿಡುವುದು! ಕಲ್ಲು ರತ್ನವಾದ ಮೇಲೂ ಮಣಿಯ ಅಗತ್ಯವಿದೆ ಎಂದಾದರೆ, ಇನ್ನೊಬ್ಬರ ದೃಷ್ಟಿಗಷ್ಟೇ ರತ್ನವಾಗಿ ಬದಲಾದ ಕಲ್ಲು, ಸೃಷ್ಟಿಯ ಮೂಲರೂಪವಾದ ಕಲ್ಲಾಗಿಯೇ ಉಳಿದಿದೆ ಎಂದರ್ಥ. ದೃಷ್ಟಿ ಬದಲಾಗುವುದರ ಜೊತೆ ಸೃಷ್ಟಿಯೂ ಬದಲಾದಾಗಲೇ ಸ್ಪರ್ಶಮಣಿಯ ಕೃಪೆಗೂ ಸಾರ್ಥಕತೆ, ರತ್ನವಾದ ಕಲ್ಲಿಗೂ ಘನತೆ!
ಹೌದು.. ಚಕ್ರವರ್ತಿ ಅಣ್ಣನ ಆಂತರ್ಯದ ಅಗಾಧತೆಯಲ್ಲಿ ತಿಲಮಾತ್ರದಷ್ಟು ಪರಿಚಯವಾದ ಎಲ್ಲರಿಗೂ ಹೀಗನ್ನಿಸುವುದು ಸಹಜವೇ. ಸ್ವಾಮೀಜಿಯವರ ಅಖಂಡ ಭಾರತವೆಂಬ ಸುವಿಶಾಲ ಪರಿಕಲ್ಪನೆಯನ್ನು ಜನಸ್ತೋಮದ ಮುಂದೆ ಅದೆಷ್ಟು ಬಾರಿ ಹೇಳಿದ್ದರೂ ಅವರ ಮಾತಿನಲ್ಲಿ ಆಯಾಸವಿಲ್ಲ, ಗುರಿಯಂತೂ ಕದಲುವುದೇ ಇಲ್ಲ! ವಿಶ್ವಗುರುವಿನ ಕನಸೆಂಬ ಸ್ಪರ್ಶಮಣಿಯಿಂದ ನೆರೆದವರನ್ನು ‘ರತ್ನ’ಗಳಾಗಿ ಮಾಡಿಬಿಟ್ಟಿದ್ದರು. ರತ್ನಗಳಾದ ನಂತರವೂ, ಕಲ್ಲಿನ ಹಾಗೆ ಜಡವಾಗುವ ಬದಲು ನಿರಂತರ ಸಾತ್ವಿಕ ಚಲನಶೀಲತೆಯಲ್ಲಿ ಮುಳುಗೇಳುವ ಪ್ರತಿಜ್ಞೆಗೆ ನಾವುಗಳು ಕಟಿಬದ್ಧರಾಗಿದ್ದು, ನಿಶ್ಶಬ್ದವಾಗಿ ಭಾರತಮಾತೆಗೆ ಮಾಡಿಕೊಂಡ ಅರಿಕೆಯೇ ಆಗಿಬಿಟ್ಟಿತ್ತು.
14324498_1377450318935037_4504487530492616263_o
ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗುವ ಮುನ್ನವೇ, ಇಡೀ ಸಭೆಯನ್ನು ಭಕ್ತಿಯೆಂಬ ಸೂತ್ರದಲ್ಲಿ ಪೋಣಿಸುವಂತೆ ಶೃತಿ ಅಕ್ಕ ಹಾಡಿದ ಶ್ರೇಷ್ಠ ಗೀತೆಗಳು, ‘ಓ ಬಂದಾ, ಸದ್ಗುರು ವಿವೇಕಾನಂದ’  ಎಂಬ ಹಾಡಿಗೆ, ಸ್ವಾಮೀಜಿ ನಮ್ಮ ನಡುವೆಯೇ ಇದ್ದಾರೇನೋ ಎಂಬಂತೆ ತನ್ಮಯವಾಗಿ ಹೆಜ್ಜೆ ಹಾಕಿದ ನಗುಮೊಗದ ಸಹೋದರಿಯರು, ಭಾರತವೆಂಬ ದೇದೀಪ್ಯಮಾನ ದೀಪಕ್ಕೆ ನಾವು ನಮ್ಮ ಬದುಕನ್ನೇ ಶ್ರೇಷ್ಠವಾಗಿ ಬದುಕುವ ಮೂಲಕ, ಜ್ಯೋತಿಯು ಮತ್ತೂ ಬೆಳಗಲು ತೈಲವಾಗಿ ಹಣತೆಗೆ ಅರ್ಪಿಸಿಕೊಳ್ಳೋಣವೆಂಬ ಸುವಿಚಾರಕ್ಕೆ ಬದ್ಧವಾಗುವುದನ್ನು, ದೀಪಕ್ಕೆ ಎಣ್ಣೆ ಹಾಕುವ ಮೂಲಕ ಚಾಲನೆ ಕೊಟ್ಟ ಪೂಜ್ಯ ಅತಿಥಿಗಳಿಂದ ಹಿಡಿದು, ದೇಶಭಕ್ತರ ರಾಷ್ಟ್ರಗೀತೆ ‘ವಂದೇಮಾತರಂ’ಗೆ ದನಿಯಾದ ನಂತರ, ಸ್ವಾಮೀಜಿಯವರೇ ರಚಿಸಿದ ‘ಖಂಡನ ಭವ ಬಂಧನ’ವೆನ್ನುವ ಗೀತೆಯೊಂದಿಗೆ ಭಾರತಮಾತೆಗೆ ಆರತಿಯನ್ನು ಬೆಳಗಿ ಪರಿಸಮಾಪ್ತಿಗೊಳಿಸುವವರೆಗೂ,  ಇಡೀ ಕಾರ್ಯಕ್ರಮ ಅತ್ಯಂತ ಆಪ್ತವಾಗಿತ್ತು.
14125548_1377436662269736_4590747679583915647_o
14305205_1377435678936501_6282462834245626401_o
ಉಚ್ಚ ಸ್ಥಾನವೆಂಬುದು ಭವಸಾಗರದಲ್ಲಿ ಮುಳುಗೇಳುವ ಪುಳಕವಲ್ಲ, ಭವಸಾಗರವನ್ನು ದಾಟಿ ಜಯಿಸಿ ಚಿರಶಾಂತಿಯನ್ನು ಹೊಂದುವ ಅಂತಿಮ ಸತ್ಯ! ಅರಿಷಡ್ವರ್ಗಗಳೆಂಬ ಮಾಯೆಯ ಪ್ರಪಂಚದಲ್ಲಿ ಬಂಧಿಗಳಾಗಿ, ಮಾಯೆಯ ಪ್ರಪಂಚವನ್ನೇ ಅಪ್ಪಿಕೊಳ್ಳುತ್ತಾ, ಹುಟ್ಟಿದ್ದಕ್ಕಾಗಿ ಬದುಕುತ್ತಾ, ಬದುಕಿರುವುದಕ್ಕಾಗಿ ಬೇಯುತ್ತಾ, ಬೇಯುವುದನ್ನೇ ಸಾಧನೆಯೆಂದು ಭ್ರಮಿಸುತ್ತಾ.. ಕಡೆಗೊಮ್ಮೆ ಈ ಜನ್ಮದ ಕೊನೆಯ ಸತ್ಯವಾದ ಸಾವಿನೊಂದಿಗೆ ಮಣ್ಣಾಗುವುದು ಸಾಧನೆಯಲ್ಲವೆಂದು ಸಾವಿರಸಲ ಅನ್ನಿಸಿದ್ದಿದೆ. ಜಗತ್ತಿಗೇ ಬೆಳಕು ನೀಡುವ ಸುಜ್ಞಾನ ಜ್ಯೋತಿಯಾದ ಸನಾತನ ಧರ್ಮದ ‘ಕರ್ಮಯೋಗಿ’ಗಳಾಗಿ ಅಕ್ಷರಶಃ ಬದುಕಿ, ಆ ಮೂಲಕ ಮುಕ್ತಿಮಾರ್ಗಕ್ಕೆ ಸನ್ನಿಹಿತವಾಗಬೇಕು – ಇದು ನಮ್ಮೆಲ್ಲರ ನಿತ್ಯ ಪ್ರಾರ್ಥನೆಯೇ ಆಗಬೇಕು!
ವೀಣಾ ಅಕ್ಕ ಹೇಳಿದಂತೆ ನಿಷ್ಠೆಯಿಂದ ಮಾಡಿದ್ದೆಲ್ಲವೂ ಪೂಜೆಯೇ! ಪುಷ್ಪದ ಪೂಜೆಯೆನ್ನುವುದು ಬಹಿರಂಗ ಪೂಜೆಯ ಪ್ರಕಟಣೆ, ಪುಷ್ಪವೇ ನಾವಾಗಬೇಕಿರುವುದು ಅಂತರಂಗದ ಕರ್ಮದಿಂದ ಮಾತ್ರ ಪ್ರಕಟವಾಗಬಲ್ಲ  ನಿಶ್ಶಬ್ದ ಘೋಷಣೆ!!
ನಿಜ, ‘ವಿಶ್ವಗುರು’ ಭಾರತದ ಚಲನೆಗೆ ವೇಗ ಸಿಕ್ಕಿದೆ. ಆ ಮೂಲಕ ಅಮೃತಪುತ್ರರಾದ ನಮ್ಮೆಲ್ಲರ ಜವಾಬ್ದಾರಿಯೂ ಅಗಾಧವಾಗಿದೆ.
14310459_1376566779023391_3732467602323598630_o