ವಿವೇಕಮಾಲೆಯು ಸ್ವಾಮಿ ವಿವೇಕಾನಂದರ ಇಚ್ಛೆಯ ತರುಣ ಪಡೆಯ ನಿರ್ಮಾಣದ ಮೊದಲ ಹೆಜ್ಜೆ!

ಸ್ವಾಮೀಜಿ ಯಾವಾಗಲೂ ಹೇಳುತ್ತಿದ್ದ ಮಾತು ಒಂದೇ.
ಯುವಕರು ಹೇಗಿರಬೇಕೆಂದರೆ,  “ಕಬ್ಬಿಣದಂಥ ಮಾಂಸಖಂಡ, ಉಕ್ಕಿನಂಥ ನರಮಂಡಲ, ಮಿಂಚಿನಂಥ ಬುದ್ಧಿಶಕ್ತಿ” ಹೊಂದಿರಬೇಕು ಎಂದು.
ಸ್ವಾಮೀಜಿಯ ಈ ಮಾತನ್ನೇ ಆದರ್ಶವಾಗಿರಿಸಿಕೊಂಡು  ವಿವೇಕಮಾಲೆಯ ಹೆಸರಿನಲ್ಲಿ ಕಬ್ಬಿಣದಂತ ಮಾಂಸಖಂಡಗಳ ತಯಾರಿಗೆ ಸಂಕಲ್ಪ ಕೈಗೊಳ್ಳಲಾಯಿತು.

ಸ್ವಾಮೀಜಿಗೆ ದೇಶದ ಕಡು ದಾರಿದ್ರ್ಯವನ್ನು ಕಂಡು ಮುಂದೇನು ಮಾಡಬೇಕು ಎಂದು ತಿಳಿಯದೆ ಕನ್ಯಾಕುಮಾರಿಯ ಬಂಡೆಯ ಮೇಲೆ ಮೂರು ಹಗಲು ಮೂರು ರಾತ್ರಿ ಧ್ಯಾನ ಮಾಡಿದ ದಿನವಾದ ಡಿಸೆಂಬರ್ 25 ರಂದು ಕಾರ್ಯಕರ್ತರು ತಮ್ಮ ತಮ್ಮ ಜಿಲ್ಲೆಗಳ ರಾಮಕೃಷ್ಣ ಆಶ್ರಮ, ಸಮುದ್ರದ ದಂಡೆ, ವಿವಿಧ ಬೆಟ್ಟಗಳು ಹಾಗೂ ಶ್ರದ್ಧಾ ಕೇಂದ್ರಗಳಲ್ಲಿ ಸೇರಿ ವಿವೇಕಾನಂದರ ಭಾವಚಿತ್ರದ ಮುಂದೆ ವಿವೇಕಮಾಲೆ ಧರಿಸಿ, ಸ್ವಾಮಿ ವಿವೇಕಾನಂದರ ಹಣತೆಯನ್ನು ತಮ್ಮ ಎದೆಗೂಡಲ್ಲಿ ಬೆಳಗುವ ಯಜ್ಞ ಕಾರ್ಯಕ್ಕೆ ಅಣಿಯಾಗುತ್ತಾರೆ.

ಪ್ರತಿ ವರುಷ ಡಿಸೆಂಬರ್ 25 ರಿಂದ ಜನವರಿ 12 ತನಕ  ಮುಂಜಾನೆ ಯೋಗ, ವ್ಯಾಯಾಮ ಮಾಡಿ ದೇಹವನ್ನು ಬಲಿಷ್ಠಗೊಳಿಸುವುದರ ಜೊತೆಗೆ ಪ್ರತಿನಿತ್ಯ ಪ್ರಾಣಾಯಾಮ, ಧ್ಯಾನ, ವಿವೇಕ ಸಾಹಿತ್ಯಗಳ ಅಧ್ಯಯನ, ಭಜನೆ ನಡೆಸಿ ರಾಷ್ಟ್ರ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಸಂಕಲ್ಪವನ್ನು ಕೈಗೊಳ್ಳುತ್ತಾರೆ. ನಂತರ ಕನ್ಯಾಕುಮಾರಿಯಲ್ಲಿ ವಿವೇಕಮಾಲೆಯನ್ನು ವಿಸರ್ಜಸುವುದರ ಮೂಲಕ ಈ ಅಭಿಯಾನ ಕೊನೆಗೊಳ್ಳುತ್ತದೆ.