ಸಮರ್ಥನ ಆಯ್ಕೆ ನಮ್ಮ ಕರ್ತವ್ಯ..

ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ, ಆಯ್ಕೆ ಮಾಡುತ್ತಾನೆ, ನೇಮಿಸುತ್ತಾನೆ. ಸಂವಿಧಾನ ದತ್ತ ಅಧಿಕಾರದ ಮೂಲಕ ನಾವು ಸಮರ್ಥರಾದವರನ್ನು ಐದು ವರ್ಷಗಳಿಗೊಮ್ಮೆ ಆಯ್ಕೆ ಮಾಡಿ ವಿಧಾನಸಭೆಗೆ ಮತ್ತು ಲೋಕಸಭೆಗೆ ಪ್ರತಿನಿಧಿಗಳಾಗಿ ಕಳಿಸಿಕೊಡುವ ಅಪರೂಪದ ಅವಕಾಶವನ್ನು ಪಡೆಯುತ್ತೇವೆ. 5 ವರ್ಷಗಳ ಕಾಲ ನಮ್ಮ ಪ್ರತಿನಿಧಿಗಳಾಗಿದ್ದುಕೊಂಡು ವ್ಯಕ್ತಿಯೊಬ್ಬ ಮಾಡಿದ ಕೆಲಸವನ್ನು ತುಲನೆ ಮಾಡಿ ಆತನನ್ನು ಮುಂದುವರೆಸಬೇಕೋ ಬೇಡವೋ ಎಂದು ನಿರ್ಧರಿಸುವ ಸೂಕ್ತ ಸಂದರ್ಭವೇ ಚುನಾವಣೆ.

ಮೇ 12 ನೇ ತಾರೀಖು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು ಎನ್ನುವುದಾದರೆ ಸಮರ್ಥನ ಆಯ್ಕೆ ಮಾಡುವುದು ನಮ್ಮ ಕರ್ತವ್ಯವೇ ಸರಿ ಎಂಬ ಜಾಗೃತಿಯನ್ನು ಯುವಾಬ್ರಿಗೇಡ್ ಮೂಡಿಸಿತು. ನಮ್ಮ ಕೇರಿ, ನಮ್ಮ ಊರು, ನಮ್ಮ ಕ್ಷೇತ್ರ, ನಮ್ಮ ರಾಜ್ಯ ಇವುಗಳು ಹೇಗಿರಬೇಕೆಂಬ ಕನಸನ್ನು ಕಟ್ಟಿ ಅದನ್ನು ಸಾಕಾರಗೊಳಿಸಬಲ್ಲ ಸಮರ್ಥನನ್ನು  ಗುರುತಿಸಿಕೊಳ್ಳಬೇಕು ಮತ್ತು ಮತದಾನದ ದಿನ ಮತಗಟ್ಟೆಯವರೆಗೂ ಹೋಗಿ ನಮ್ಮ ಹಕ್ಕನ್ನು ಚಲಾಯಿಸಿ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಜನರಿಗೆ ತಿಳಿಸಿತು.

‘ಪ್ರಜಾಪ್ರಭುತ್ವದ ಅತ್ಯಂತ ಸುಂದರವಾದ ಈ ಪ್ರಕ್ರಿಯೆಯನ್ನು ‘ಮತದಾನ’ ಎಂದು ವಿಶೇಷವಾಗಿ ಕರೆದಿದ್ದಾರೆ. ಇದು ದಾನದ ಕ್ರಿಯೆ, ಮಾರಾಟವಲ್ಲ. ತನ್ನ ಮತವನ್ನು ಸಮರ್ಥನೊಬ್ಬನಿಗೆ ದಾನ ಮಾಡುವ ಮೂಲಕ ಆಯಾ ಕ್ಷೇತ್ರದ ಭವಿಷ್ಯವನ್ನು ಮುಂದಿನ 5 ವರ್ಷಗಳಿಗೆ ಖಾತ್ರಿ ಮಾಡುವ ಹೊತ್ತು. ದಯಮಾಡಿ ದಾನದ ಈ ಪ್ರಕ್ರಿಯೆಯನ್ನು ಮಾರಾಟವಾಗಿ ಪರಿವರ್ತಿಸಬೇಡಿ. ನಮ್ಮ ಮತವನ್ನು ಕ್ಷುಲ್ಲಕವಾದ ಹಣಕ್ಕೆ, ಹೆಂಡಕ್ಕೆ ಮಾರಿಕೊಳ್ಳದಿರೋಣ. ಜಾತಿಯ ಹೆಸರು ಹೇಳಿ ಮತ ಕೇಳಲು ಬಂದವರನ್ನು ಧಿಕ್ಕರಿಸೋಣ. ಕ್ಷೇತ್ರ, ರಾಜ್ಯ ಮತ್ತು ರಾಷ್ಟ್ರಗಳ ಸಮಗ್ರ ಅಭಿವೃದ್ಧಿಯ ಕನಸು ಕಾಣುವವರಿಗೆ ಮತ್ತು ಕಂಡ ಕನಸನ್ನು ನನಸು ಮಾಡುವ ಸಾಮರ್ಥ್ಯ ಇರುವವರಿಗೆ ನಾವು ನಮ್ಮ ಮತವನ್ನು ಧಾರೆ ಎರೆಯೋಣ.

ಯಾರು ಮತದಾನ ಮಾಡುವರೋ ಅವರಿಗೆ ಮಾತ್ರ ದೇಶದ ಒಳಿತು-ಕೆಡುಕುಗಳ ಕುರಿತಂತೆ ಮಾತನಾಡುವ ಹಕ್ಕು. ಉಳಿದವರಿಗೆ ಹಾಗೊಂದು ನೈತಿಕ ಅಧಿಕಾರವಿಲ್ಲ ಎಂಬುದನ್ನು ದಯಮಾಡಿ ಮರೆಯದಿರಿ. ಹೀಗಾಗಿ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದರೆ ಮತ ಹಾಕಲೇಬೇಕು ಎನ್ನುವುದನ್ನು ಮರೆಯಬೇಡಿ. ಟೀವಿ ನೋಡುವುದು ಪ್ರತಿ ದಿನವೂ ಇದ್ದೇ ಇದೆ, ಐಪಿಎಲ್ ಕ್ರಿಕೆಟ್ ಮ್ಯಾಚುಗಳು ಆಗಾಗ ನಡೆಯುತ್ತಲೇ ಇರುತ್ತವೆ, ಮನೆಗೆ ಬರುವ ಅತಿಥಿಗಳು ಮತ್ತೊಮ್ಮೆ ಬೇಕಾದರೆ ಬರುತ್ತಾರೆ, ರಜಾ ಸಿಕ್ಕಿತೆಂದು ಅಡ್ಡಾಡಲೇಬೇಕೆಂಬ ಮನಸ್ಸಿದ್ದರೆ ಅದಕ್ಕೆ ಮುಂದಿನ ವೀಕೆಂಡ್ ಅಂಗಾತ ಬಿದ್ದುಕೊಂಡಿದೆ. ವಿಧಾನಸಭಾ ಚುನಾವಣೆ ಮಾತ್ರ 5 ವರ್ಷಕ್ಕೊಮ್ಮೆ ಬರುವಂಥದ್ದು. ಮತ್ತು ಅದು ರಾಜ್ಯದ ಭವಿಷ್ಯವನ್ನು ನಿರ್ಧರಿಸುವಂಥದ್ದು.

ಕೈಗೆ ಕಲೆಯಾದರೂ ಚಿಂತೆಯಿಲ್ಲ, ರಾಜ್ಯದ ಮೇಲೆ ಕಪ್ಪುಚುಕ್ಕೆ ಬೀಳುವುದನ್ನು ತಡೆಯೋಣ. ಮತದಾನದ ಹಕ್ಕು ಚಲಾಯಿಸೋಣ. ಸಮರ್ಥನ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸೋಣ’ ಎಂಬ ಮಾಹಿತಿಯನ್ನು ಮನೆ-ಮನೆಗೂ ಮುಟ್ಟಿಸುವ ಪ್ರಯತ್ನ ಮಾಡಿದ್ದು ಯುವಾಬ್ರಿಗೇಡ್.